ವಿದ್ಯಾರ್ಥಿಗಳು ತಮ್ಮ ರಕ್ಷಕರ ಹಾಗೂ ಅಧ್ಯಾಪಕರ ಮಾರ್ಗದರ್ಶನದಲ್ಲಿ ಅಂಕ ಗಳಿಕೆಯೊಂದಿಗೆ ಪರಿಪೂರ್ಣತೆಯೆಡೆಗೆ ಸಾಗುವ ಹಾದಿಯಲ್ಲಿ ಮುನ್ನಡೆಯುವುದು ಅನಿವಾರ್ಯ ಎಂದು ಖ್ಯಾತ ತರಬೇತುದಾರ ರೊ.ಸುಭಾಷ್ ಬಂಗೇರ ಹೇಳಿದರು.
ಕೋಟ: ವಿದ್ಯಾರ್ಥಿಗಳು ತಮ್ಮ ರಕ್ಷಕರ ಹಾಗೂ ಅಧ್ಯಾಪಕರ ಮಾರ್ಗದರ್ಶನದಲ್ಲಿ ಅಂಕ ಗಳಿಕೆಯೊಂದಿಗೆ ಪರಿಪೂರ್ಣತೆಯೆಡೆಗೆ ಸಾಗುವ ಹಾದಿಯಲ್ಲಿ ಮುನ್ನಡೆಯುವುದು ಅನಿವಾರ್ಯ ಎಂದು ಖ್ಯಾತ ತರಬೇತುದಾರ ರೊ.ಸುಭಾಷ್ ಬಂಗೇರ ಹೇಳಿದರು.ಕೋಟ ವಿವೇಕ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಹಿಂದಿನ ವಿದ್ಯಾರ್ಥಿಸಂಘ ಪಿ.ಯು.ಸಿ. ವಿದ್ಯಾರ್ಥಿಗಳಿಗಾಗಿ
ಆಯೋಜಿಸಿದ BEYOND MARKS ಎಂಬ ಪ್ರೇರಣಾ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ಇಂದಿನ ಕಾರ್ಪೊರೇಟ್ ಜಗತ್ತಿನ ಸವಾಲುಗಳನ್ನು ಎದುರಿಸಲು ಸಾಮಾನ್ಯ ವಿದ್ಯಾರ್ಥಿಯೂ ಅಸಮಾನ್ಯನಾಗಲು ಬೇಕಾದ ಸಿದ್ಧತೆ ಹಾಗೂ ಬದ್ಧತೆಗಳನ್ನು ಮೈಗೂಡಿಸಿಕೊಂಡು ಬದುಕಿನಲ್ಲಿ ಸಫಲತೆಯನ್ನು ಪಡೆಯಬೇಕು. ಅಂಕಗಳ ಆಚೆಗಿರುವ ಬದುಕಿನಲ್ಲಿ ಯಶಸ್ಸನ್ನು ಪಡೆಯಲು ಅಗತ್ಯವಾದ ಮನೋಭೂಮಿಕೆಯ ಸೃಷ್ಟಿಯತ್ತ ವಿದ್ಯಾರ್ಥಿಗಳ ದೃಷ್ಟಿಯಿದ್ದರೆ ಮಾತ್ರ ಸಾಧನೆಗಳ ವೃಷ್ಟಿಯಾಗಲು ಸಾಧ್ಯ. ಸಾಧನೆ ವ್ಯಕ್ತಿಗತ ಪ್ರತಿಭೆ ಹಾಗೂ ಪ್ರಯತ್ನಗಳ ಮೇಲೆ ನಿಂತಿರುವುದನ್ನು ಮರೆಯಬಾರದು. ಅಂಕ ಗಳಿಕೆಯ ಹೊರತಾಗಿಯೂ ಕಠಿಣ ಪರಿಶ್ರಮದಿಂದ ಸಾಧನೆಯ ಶಿಖರವೇರಿದವರಿಂದಲೂ ಸ್ಫೂರ್ತಿ ಪಡೆಯಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಜಗದೀಶ ನಾವಡರು ಇಲ್ಲಿರುವ ಎಲ್ಲ ವಿದ್ಯಾರ್ಥಿಗಳು ಸಂಸ್ಥೆಯ ಪರಂಪರೆಯಂತೆ ಪಿ.ಯು.ಸಿ.ಯಲ್ಲಿ ಉತ್ತಮ ಫಲಿತಾಂಶ ತರುವ ಮೂಲಕ ಸಂಸ್ಥೆಯ ಕೀರ್ತಿಕೇತನರಾಗಿಸುವಲ್ಲಿ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.ಕೋಟ ವಿದ್ಯಾಸಂಘದ ಕೋಶಾಧಿಕಾರಿ ಹಾಗೂ ಹಿಂದಿನ ವಿದ್ಯಾರ್ಥಿಸಂಘದ ನಿಕಟಪೂರ್ವ ಕಾರ್ಯದರ್ಶಿಯವರಾದ ಮಂಜುನಾಥ ಉಪಾಧ್ಯರು ಸಂಘವು ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಹಿಂದಿನ ವಿದ್ಯಾರ್ಥಿಸಂಘದ ಉಪಾಧ್ಯಕ್ಷ ಡಾ.ಜಗದೀಶ ಹೊಳ್ಳರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಧಾಕರ್ ಪಾರಂಪಳ್ಳಿ ಸಂಪನ್ಮೂಲ ವ್ಯಕ್ತಿಯವರನ್ನು ಪರಿಚಯಿಸಿದರು.
ವಾಣಿಜ್ಯಶಾಸ್ತ್ರ ಉಪನ್ಯಾಸಕ ಜಿ.ಸಂಜೀವ ನಿರೂಪಿಸಿದರು. ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರಾದ ಪ್ರೇಮಾನಂದ, ರತಿ ಬಾಯಿ ಹಾಗೂ ಪ್ರೀತಿರೇಖಾ ಉಪಸ್ಥಿತರಿದ್ದರು. ವಿದ್ಯಾರ್ಥಿಸಂಘದ ಕೋಶಾಧಿಕಾರಿ ಪಂಜು ಪೂಜಾರಿ ಧನ್ಯವಾದ ಸಮರ್ಪಿಸಿದರು.