ಹೃದಯ ವೈಶಾಲ್ಯತೆಯಿದ್ದರೆ ಬಾಳು ಸುಂದರ: ದೇಶಪಾಂಡೆ

| Published : May 19 2024, 01:45 AM IST

ಹೃದಯ ವೈಶಾಲ್ಯತೆಯಿದ್ದರೆ ಬಾಳು ಸುಂದರ: ದೇಶಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ಗುಳೇದಗುಡ್ಡ: ಇಂದು ಜಗತ್ತಿನಲ್ಲಿ ಹಣವೂಂದಿದ್ದರೆ ಎಲ್ಲವನ್ನು ಪಡೆಯಬಹುದೆಂದು ತಿಳಿದ ಅನೇಕರು ಮೌಲ್ಯ, ಪ್ರೀತಿ ವಿಶ್ವಾಸವನ್ನೇ ಮರೆತಿದ್ದಾರೆ. ಪ್ರೀತಿಯಿಂದ ಮಾತ್ರ ಬದುಕನ್ನು ಗೆಲ್ಲಬಹುದಾಗಿದೆ ಎಂದು ಪ್ರಾಚಾರ್ಯ ಎಸ್.ಡಿ.ದೇಶಪಾಂಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಇಂದು ಜಗತ್ತಿನಲ್ಲಿ ಹಣವೂಂದಿದ್ದರೆ ಸಾಕು ಎಲ್ಲವನ್ನು ಪಡೆಯಬಹುದೆಂದು ತಿಳಿದ ಅನೇಕರು ಮೌಲ್ಯ, ಪ್ರೀತಿ ವಿಶ್ವಾಸವನ್ನೇ ಮರೆತಿದ್ದಾರೆ. ಆದರೆ ಪ್ರೀತಿಯಿಂದ ಮಾತ್ರ ಬದುಕನ್ನು ಗೆಲ್ಲಬಹುದಾಗಿದೆ. ಅಂತಹ ಹೃದಯ ವೈಶಾಲ್ಯತೆ ತಮ್ಮಲ್ಲಿದೆ ಎಂದು ಪ್ರಾಚಾರ್ಯ ಎಸ್.ಡಿ.ದೇಶಪಾಂಡೆ ಹೇಳಿದರು.

ಶನಿವಾರ ಪಟ್ಟಣದ ಅಂಬಾಭವಾನಿ ಸಭಾಭವನದಲ್ಲಿ ಜರುಗಿದ ಗುರುಸಿದ್ದೇಶ್ವರ ಡಿ.ಇಡಿ ಕಾಲೇಜಿನಲ್ಲಿ ಓದಿದ 2007ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ-2024ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಆಧುನಿಕ ದಿನಗಳಲ್ಲಿ ವಿದ್ಯಾರ್ಥಿಗಳು ಗುರುವಿಗೆ ಗೌರವ ತೋರದೆ ಕೇವಲ ಕಲಿಕೆಗೆ ಸೀಮಿತವಾಗಿದ್ದಾರೆ. 17 ವರ್ಷದ ನಂತರ ಎಲ್ಲರೂ ಒಟ್ಟಿಗೆ ಸೇರಿ ಕಲಿಸಿದ ಗುರುಗಳನ್ನು ಕರೆಸಿ ಗೌರವಿಸಿದ್ದು, ಉತ್ತಮ ಕಾರ್ಯ. ನೀವು ಸಂಘ ಕಟ್ಟಿಕೊಂಡು ಆರ್ಥಿಕ ಚಟುವಟಿಕೆಗಳ ಮೂಲಕ ಸಬಲತೆ ಸಾಧಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಪ್ರಾಚಾರ್ಯರಾದ ಎಚ್.ಎಸ್. ಘಂಟಿ ಮಾತನಾಡಿ, ಬದುಕಿನಲ್ಲಿ ಏರಿಳಿತಗಳು ಸಹಜ. ಅದರಲ್ಲಿ ಎಲ್ಲರೂ ಒಂದು ಎಂದು ಈ ಸಮ್ಮಿಲನದ ಮೂಲಕ ತೋರಿಸಿದ್ದೀರಿ. ಇಂತಹ ಒಗ್ಗಟ್ಟು, ಸ್ನೇಹ, ಮುಂದುವರಿದು ಸಮಾಜಕ್ಕೆ ಮಾದರಿಯಾಗಿ ಬದುಕಿ ಎಂದು ಹೇಳಿದರು.

ಚಿತ್ರಕಲಾ ಶಿಕ್ಷಕ ಸಂಗಮೇಶ ಉಮಚಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಸೃಜನಾತ್ಮಕವಾಗಿ ಅಧ್ಯಯನ ಮಾಡಿದರೆ ಗುರಿ ಮುಟ್ಟಲು ಸಾಧ್ಯ. ಆ ದಿಸೆಯಲ್ಲಿ ತಮ್ಮ ಪ್ರಯತ್ನ ಸಾರ್ಥಕವಾಗಿದೆ ಎಂದು ಹೇಳಿದರು.

ಎಸ್.ಎಂ. ಗದ್ದನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಶಿಕ್ಷಣಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಪ್ರಾಚಾರ್ಯರಾದ ಎಚ್.ಎಸ್. ಘಂಟಿ, ಉಪನ್ಯಾಸಕರಾದ ಎಸ್.ಎಸ್. ಬುಗಟಿ, ಈರಣ್ಣ ಅಲದಿ, ಚೆನ್ನಯ್ಯ ಹಿರೇಮಠ ಹಾಗೂ 2007ನೇ ಸಾಲಿನ ಎಲ್ಲ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.