ಧರ್ಮದ ಮಾರ್ಗದಲ್ಲಿ ನಡೆದರೆ ಬದುಕು ಸುಂದರ: ವಿರೂಪಾಕ್ಷ ಶ್ರೀ

| Published : Feb 04 2025, 12:32 AM IST

ಸಾರಾಂಶ

ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದ ಹುಗ್ಗೆಳ್ಳಿ ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ನಡೆದ ಬಸವಲಿಂಗ ಶಿವಾಚಾರ್ಯರ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಧರ್ಮ ಸಮಾರಂಭವನ್ನು ವೀರೂಪಾಕ್ಷ ಶಿವಾಚಾರ್ಯರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಮನುಷ್ಯ ಜನ್ಮ ಸಾರ್ಥಕವಾಗಬೇಕಾದರೆ ಧರ್ಮ ಮಾರ್ಗದಲ್ಲಿ ನಡೆಯಬೇಕು. ಧರ್ಮಮಾರ್ಗದಲ್ಲಿ ನಡೆದರೆ ಬದುಕು ಸುಂದರವಾಗುವುದು ಎಂದು ಕಟ್ಟಿಮನಿ ಹಿರೇಮಠ ಸಂಸ್ಥಾನ ಹುಡಗಿಯ ವಿರೂಪಾಕ್ಷ ಶಿವಾಚಾರ್ಯರು ಅಭಿಪ್ರಾಯಪಟ್ಟರು.ತಾಲೂಕಿನ ಖಟಕ ಚಿಂಚೋಳಿ ಗ್ರಾಮದ ಹುಗ್ಗೆಳ್ಳಿ ಹಿರೇಮಠ ಸಂಸ್ಥಾನದಲ್ಲಿ, ಬಸವಲಿಂಗ ಶಿವಾಚಾರ್ಯರ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಕ್ರಮದ ನಿಮಿತ್ತ ಸೋಮವಾರ ಆಯೋಜಿಸಿದ್ದ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಎಲ್ಲರೂ ಧರ್ಮ ಮಾರ್ಗದಿಂದ ನಡೆಯಬೇಕು. ಮಾನವ ಜನ್ಮ ಸಾರ್ಥಕತೆ ಅಡಗಿರುವುದು ನಿಜವಾಧ ಧರ್ಮದಲ್ಲಿದೆ. ಹೀಗಾಗಿ ಎಲ್ಲರೂ ಧರ್ಮಮಾರ್ಗದಲ್ಲಿ ನಡೆದು ವಿಶ್ವ ಶಾಂತಿಗಾಗಿ ಪ್ರಾರ್ಥಿಸಬೇಕು. ಹುಗ್ಗೆಳ್ಳಿ ಹಿರೇಮಠದ ಬಸವಲಿಂಗ ಶಿವಾಚಾರ್ಯರು ಪವಾಡ ಪುರುಷರಾಗಿದ್ದರು. ಅವರ ಜೀವಿತಾವಧಿಯಲ್ಲಿ ಬಂದ ಭಕ್ತರ ಕಷ್ಟಗಳನ್ನು ಪರಿಹರಿಸಿ ಉದ್ಧರಿಸಿದ ಹಲವಾರು ಉದಾಹರಣೆಗಳಿವೆ. ಅವರ ಮಾರ್ಗ ದಲ್ಲಿ ನಡೆದು ನಮ್ಮ ಜನ್ಮ ಪಾವನ ಮಾಡಿಕೊಳ್ಳಬೇಕೆಂದರು.ಶಾಂತಲಿಂಗೇಶ್ವರ ಮಠ ಹಿರೇನಾಗಾಂವನ ಜಯಶಾಂತಲಿಂಗ ಸ್ವಾಮಿಗಳು ಮಾತನಾಡಿ, ಗುರುಹಿರಿಯರಲ್ಲಿ ಭಕ್ತಿ ಭಾವದಿಂದ ಜೀವನ ಸಾಗಿಸಬೇಕು. ಎಲ್ಲರನ್ನೂ ಪ್ರೀತಿಸುವ ಕಾರ್ಯವಾಗಬೇಕೆಂದರು.ಹಿರೇಮಠಸಂಸ್ಥಾನ ರಾಜೇಶ್ವರದ ಘನಲಿಂಗರುದ್ರಮುನಿ ಶಿವಾಚಾರ್ಯರು ಮಾತನಾಡಿ, ಕಣಕಣದಲ್ಲಿ ದೇವರಿದ್ದಾನೆ, ಮನದಲ್ಲಿ ಭಕ್ತಿ ತುಂಬಿ ದೇವರನ್ನು ನೆನೆದರೆ ಜೀವನ ಪಾವನವಾಗುವುದು ಎಂದು ತಿಳಿಸಿದರು.ಸದ್ಗುರು ವಿರಂತೇಶ್ವರ ವಿರಕ್ತಮಠ ಬಿಲಗುಂದಿಯ ಚಿದಾನಂದ ಶಿವಾಚಾರ್ಯರು, ವಿರಕ್ತಮಠ ಹುಡಗಿಯ ಚನ್ನಮಲ್ಲ ಮಹಾಸ್ವಾಮಿ ಸಾನಿಧ್ಯ ವಹಿಸಿ ಮಾತನಾಡಿದರು. ಹುಗ್ಗೆಳ್ಳಿ ಹಿರೇಮಠ ಸಂಸ್ಥಾನದ ಬಸವಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಹುಗ್ಗೆಳ್ಳಿ ಹಿರೇಮಠವು ಭಕ್ತರ ಮಠವಾಗಿದೆ. ಭಕ್ತಾದಿಗಳಾದ ಆಲಶೆಟ್ಟಿ ಪರಿವಾರ ಸೇರಿದಂತೆ ನಾಡಿನ ಅನೇಕ ಭಕ್ತರು ಮಠದ ಬೆಳವಣಿಗೆ ಯಲ್ಲಿ ತುಂಬಾ ಶ್ರಮಿಸಿದ್ದಾರೆ.

ಕಲಬುರಗಿಯ ಡಾ.ಶಿವರಾಜ ಅಲಶೆಟ್ಟಿ ಮತ್ತು ರಮೇಶ ಅಲಶೆಟ್ಟಿಯವರು ನೂತನ ಮಂದಿರ ನಿರ್ಮಾಣಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರಿಗೆ ಬಸವಲಿಂಗ ಶಿವಾಚಾರ್ಯರು ಆಶೀರ್ವದಿಸಲಿ ಎಂದು ಹಾರೈಸಿದರು.ಹುಗ್ಗೆಳ್ಳಿ ಹಿರೇಮಠದ ಕಿರಿಯ ಸ್ವಾಮೀ ರುದ್ರಮುನಿ ದೇವರು, ದತ್ತ ಆಶ್ರಮ ಖಟಕ ಚಿಂಚೋಳಿಯ ರಾಮಕೃಷ್ಣ ಶರಣರು ಸಮ್ಮುಖ ವಹಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದ ಸಾಧಕ ರಾದ ವಿಶ್ವನಾಥ ಉಬುರಗೆ, ವಿಜಯಕುಮಾರ ಅಲಶೆಟಿ, ಆನಂದ ಬೆಲೂರೆ, ಮೈಬುಸಾಬ್ ರಸುಲಸಾಬ್ ಅವರಿಗೆ ವಿಶೇಷ ಗೌರವ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಶಾಂತಮ್ಮ ಶ್ರೀಶೈಲ್, ಕಲ್ಲಯ್ಯಾ ಸ್ವಾಮಿ ಮಂಗಲಗಿ, ಲಕ್ಷ್ಮೀ ಸ್ವಾಮಿ ರಾಂಪೂರ, ರಾಗಿಣಿ ಮಠಪತಿ ಸಂಗೋಳಗಿ, ರಮೇಶ ಅಲಶೆಟ್ಟಿ, ಮಹಾನಂದಾ ಧೂಳಪ್ಪ, ಸರಳಾಬಾಯಿ ಶಾಂತವೀರ ಪಾಟೀಲ, ಸಂಗಮೆಶ ಬೇಲೂರೆ, ನಾಗರಾನ ಸಜ್ಜನಶೆಟ್ಟಿ, ಪ್ರದೀಪ ವಡಗಾವೆ, ನಾಗರಾಜ ಸಜ್ಜನಶೆಟ್ಟಿ, ಎದಲಾಪೂರೆ, ನಾಗರಾಜ ಚಿಲಶೆಟ್ಟಿ, ಅನೀಲಕುಮಾರ ಪಟ್ನೆ, ಶೋಭಾ ಈರಣ್ಣಾ ಮೈಂದರಗಿ ಉಪಸ್ಥಿತರಿದ್ದರು.