ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ:
ಸತಿ-ಪತಿಗಳ ಭಕ್ತಿ ಒಂದಾದಾಗ ಬದುಕು ಸುಂದರವಾಗುತ್ತದೆ. ಶಿವನ ಸ್ಮರಣೆಯೊಂದಿಗೆ ಹಿರಿಯರ ಮಾರ್ಗದರ್ಶನದಲ್ಲಿ ಜೀವನವನ್ನು ನಡೆಸಬೇಕು. ಪತಿ-ಪತ್ನಿ ಇಬ್ಬರೂ ಸೇರಿ, ಕಷ್ಟ ಸುಖ ಎರಡನ್ನು ಪ್ರೀತಿಯಿಂದ ಸ್ವೀಕರಿಸಬೇಕು ಎಂದು ಹೊಸ ಜೋಡಿಗಳಿಗೆ ಮಹಾದೇವಿ ತಾಯಿಯವರು ಆಶೀರ್ವಚನ ನೀಡಿದರು.ತಾಲೂಕಿನ ಕತಕನಹಳ್ಳಿಯ (ಕತ್ನಳ್ಳಿ) ತ್ರಿಕಾಲ ಜ್ಞಾನಿ ಸದಾಶಿವ ಶಿವಯೋಗಿಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಾಲಯದ ಆವರಣದಲ್ಲಿ 54 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಂಥನಾಳದ ವೃಷಭಲಿಂಗ ಸ್ವಾಮೀಜಿ ಮಾತನಾಡಿ, ಸದಾಶಿವನ ಅಂಗಳದಲ್ಲಿ ನಿಮ್ಮ ಮದುವೆ ನಡೆದಿದೆ ಅಂದರೆ ಸ್ವರ್ಗಕ್ಕೆ ಸಮಾನ. ಗ್ರಹಸ್ಥ ಅನಿಸಿಕೊಂಡು ಎಲ್ಲವನ್ನೂ ಸಾಧಿಸಬಹುದು. ಗ್ರಹಸ್ಥರು ತಮ್ಮ ಜೀವನದಲ್ಲಿ ಅನೇಕ ಪುಣ್ಯದ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅದೇ ರೀತಿ ಸದಾಶಿವನ ಆಶೀರ್ವಾದದೊಂದಿಗೆ ವಿಶಾಲ ಮನೋಭಾವನೆಯಿಂದ ಜೀವನ ಸಾಗಿಸಬೇಕು. ದೇಶ ಸೇವೆಗೆ, ಭಕ್ತಿ ಸೇವೆಗೆ, ಸಾಮಾಜಿಕ ಸೇವೆ, ಧರ್ಮಕ್ಕಾಗಿ ಸೇವೆಮಾಡಿ ಶಿವನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕಿವಿಮಾತು ಹೇಳಿದರು.ಸಾನಿಧ್ಯ ವಹಿಸಿದ್ದ ಬಬಲಾದಿ -ಚಮಕೇರಿ - ಕತ್ನಳ್ಳಿಯ ಶಿವಯ್ಯ ಸ್ವಾಮೀಜಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿ. ಪ ಸದಸ್ಯ ಸುನಿಲಗೌಡ ಪಾಟೀಲ, ಬಾಬುಗೌಡ ಬಿರಾದಾರ, ಸುಭಾಷ ಇಂಗಳೇಶ್ವರ, ಪ್ರಕಾಶಗೌಡ ಪಾಟೀಲ (ಹಾಲಹಳ್ಳಿ), ರಾಜು ಗೂಡ್ಡೋಡಗಿ, ವಿಜು ಕೊವಳ್ಳಿ, ಕಿರಣ ಹೆರಲಗಿ, ಸಂತೋಷ ಕವಲದಾರ, ಶರಣು ಗೂಡ್ಡೋಡಗಿ, ಮುರುಗೇಶ ಮಠಪತಿ, ರೂಪಸಿಂಗ್ ಲುನಾರಿ, ಪ್ರವೀಣ ಹೆರಲಗಿ ಹಾಗೂ ಉಕುಮನಾಳ, ಕವಲಗಿ, ಹೊನ್ನುಟಗಿ, ಹಡಗಲಿ, ಮದಬಾವಿ, ಕುಮಟಗಿ, ಬುರಣಾಪುರ, ಐನಾಪುರ, ಅಂಕಲಗಿ, ರಂಭಾಪುರ, ಹಿಟ್ನಳ್ಳಿ, ಜುಮನಾಳ, ಉತ್ನಾಳ, ಮನಗೂಳಿ, ದಾಬೇರಿ, ಬಬಲೇಶ್ವರ, ವಿಜಯಪುರ ಸೇರಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ನೂರಾರು ಗ್ರಾಮಗಳಿಂದ ಮದುವೆಗೆ ಆಗಮಿಸಿದ್ದ ಸಾವಿರಾರು ಜನಸಂಖ್ಯೆಯ ಸಮೂಹ ವಧುವರರಿಗೆ ಆಶೀರ್ವದಿಸಿದರು.
ಉಕ್ಕಲಿಗ್ರಾಮದ ಹಿರಿಯ ಕಲಾವಿದ ಯಮನಪ್ಪ ಭಜಂತ್ರಿ ಸಂಗಡಿಗರು ಸಂಗೀತ ಸೇವೆಯನ್ನು ಸಲ್ಲಿಸಿದರು. ಅಕ್ಷತಾರೋಹನ ಸಾಮೂಹಿಕ ವಿವಾಹದ ಕಾರ್ಯಕ್ರಮವನ್ನು ವೇದಮೂರ್ತಿ ಬಸಯ್ಯ ಗಚ್ಚಿನಮಠ ನಡೆಸಿಕೊಟ್ಟರು.