ಭಾವನಾತ್ಮಕ ಸಂಬಂಧಗಳಿಂದ ಬದುಕು ಸುಂದರ

| Published : Jan 03 2024, 01:45 AM IST

ಸಾರಾಂಶ

ಭಾವನಾತ್ಮಕ ಸಂಬಂಧಗಳಿಂದ ಬದುಕು ಸುಂದರ: ಎಸ್.ಜಿ.ನಂಜಯ್ಯನಮಠ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ನಮ್ಮ ಕರ್ತವ್ಯ ಅರಿತುಕೊಂಡು ಪ್ರಜ್ಞೆ, ಶ್ರದ್ಧೆ, ಕಾರ್ಯಶೀಲತೆ ಆಧಾರದ ಮೇಲೆ ನಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳಬೇಕು. ಭಾವನಾತ್ಮಕ ಸಂಬಂಧಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಂಡಾಗ ಜೀವನ ಸುಂದರವಾಗುತ್ತದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.

ಅವರು ಪಟ್ಟಣದ ಶ್ರೀಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಶ್ರೀ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಶ್ರೀಗಳವರ 38ನೇ ವಾರ್ಷಿಕ ಪುಣ್ಯಾರಾಧನೆಯ ಶರಣ ಸಂಗಮ ಸಮಾರಂಭದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರ, ಸಂತರ ಆದರ್ಶ ಸನ್ಮಾರ್ಗ ನಮ್ಮ ಬದುಕಿಗೆ ಬುನಾದಿಯಾಗಬೇಕು. ಅವರು ನುಡಿದು ನಡೆದಂತೆ ನಾವೂ ಕೂಡ ನಡೆದಾಗ ಇಂಥಹ ಧಾರ್ಮಿಕ ಕಾರ್ಯಕ್ರಮಗಳು ಸಾರ್ಥಕವಾಗುತ್ತವೆ ಎಂದರು.

ಬೆಂಗಳೂರು ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ಬಳ್ಳಿ ಮಾತನಾಡಿ, ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕೆಂಬ ಛಲ ಮಕ್ಕಳಲ್ಲಿ ಹುಟ್ಟಬೇಕು. ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ, ಸಂಸ್ಕೃತಿ ನೀಡಬೇಕು. ಸಂಸ್ಕೃತಿ ಆಧಾರವಾಗಿರುವ ಪರಂಪರೆ, ಇತಿಹಾಸ ಮಹಾಪುರುಷರ ಜೀವನ ಸಾಧನೆಗಳನ್ನು ಮಕ್ಕಳಿಗೆ ತಿಳಿಸುವ ಶಿಕ್ಷಣ ಈ ದೇಶದಲ್ಲಿ ಜಾರಿಗೆ ಬಂದರೆ ದೇಶದ ಸಾಕಷ್ಟು ಸಮಸ್ಯೆಗಳಿಗೆ ಅದು ಪರಿಹಾರವಾಗುತ್ತದೆ ಎಂದರು.

ಶ್ರೀ ಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು, ಶ್ರೀಗುರುಬಸವ ದೇವರು ಸಾನ್ನಿಧ್ಯವಹಿಸಿದ್ದರು. ರಂಗನಾಥ ವಾಲ್ಮೀಕಿ, ಶ್ರೀಶೈಲ ಸಂಗೋಟಿ ಉಪನ್ಯಾಸ ನೀಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಸಂಗನಬಸಪ್ಪ ಚಿಂದಿ, ನಾಗೇಶಪ್ಪ ಪಾಗಿ, ಗೌರಮ್ಮ ಕಲಬುರ್ಗಿ ಇದ್ದರು.