ಸಾರಾಂಶ
ಯಲ್ಲಾಪುರ: ಸಾತ್ವಿಕ ಆಹಾರಗಳ ಸೇವನೆಯೊಂದಿಗೆ ಯೋಗ, ಸೂರ್ಯ ನಮಸ್ಕಾರ ಮತ್ತು ನಿತ್ಯ ದೇವತಾರಾಧನೆಗಳನ್ನು ಅಳವಡಿಸಿಕೊಂಡು ಸಾಗಿದರೆ ನಮ್ಮ ಬದುಕನ್ನು ಹಸನು ಮಾಡಿಕೊಳ್ಳಬಹುದು ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಯಲ್ಲಾಪುರ ಸೀಮಾ ಪರಿಷತ್, ವಿವಿಧ ಸಂಘಟನೆಗಳ ಸಹಯೋಗದಲ್ಲಿ ಇಡಗುಂದಿಯ ಶ್ರೀ ರಾಮಲಿಂಗ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೫ ದಿನಗಳ ಮಹಾಮೃತ್ಯುಂಜಯ ಯಾಗ, ಮಹಾರುದ್ರಯಾಗ, ಚಂಡಿಯಾಗ, ಸುಬ್ರಹ್ಮಣ್ಯ ಹವನ, ಧನ್ವಂತರಿ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಪಾದಪೂಜೆ, ಭಿಕ್ಷಾ ಸೇವೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.ನಮ್ಮ ಆಹಾರ, ಆಚಾರ, ವಿಚಾರಗಳೆಲ್ಲವೂ ಆಧುನಿಕತೆಯತ್ತ ಸಾಗುತ್ತಿರುವುದೇ ಹಲವು ಅವಾಂತರಗಳಿಗೆ ಕಾರಣವಾಗುತ್ತಿವೆ. ಸಾತ್ವಿಕ ಜೀವನ, ಸಾತ್ವಿಕ ಆಹಾರ ಸೇವನೆ ಹಿಂದಿನಂತೆ ಇಲ್ಲವಾಗಿದೆ. ಅವೈಜ್ಞಾನಿಕವಾಗಿ, ಅತಿಯಾಗಿ ಕೃಷಿಗೆ ರಸಗೊಬ್ಬರ ಬಳಸಲಾಗುತ್ತಿದೆ. ಇದರಿಂದಲೂ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಹೇಳಿದರು.
ರೋಗಗಳ ಪರಿಹಾರಕ್ಕೆ ಮೃತ್ಯುಂಜಯನ ಆರಾಧನೆ ಹೇಳಲ್ಪಟ್ಟಿದೆ. ಏಕೆಂದರೆ ದೇವತೆಗಳು ಮತ್ತು ರಾಕ್ಷಸರು ಸಮುದ್ರಮಥನ ಮಾಡಿದ ಸಂದರ್ಭದಲ್ಲಿ ಉತ್ಪನ್ನಗೊಂಡ ವಿಷದಿಂದ ಎಲ್ಲರೂ ಭಯಭೀತರಾದರು. ಆಗ ಶಿವನು ವಿಷವನ್ನು ನುಂಗಿ ಭಯವನ್ನು ಪರಿಹರಿಸಿದ್ದರಿಂದಲೇ ವಿಷಕಂಠನೆಂದು ಕರೆಯಲಾಗುತ್ತದೆ ಎಂದು ಹೇಳಿದರು.ಪ್ರತಿಯೊಬ್ಬರ ಮನೆಯಲ್ಲಿಯೂ ಗೋಶಾಲೆಗಳನ್ನು ಮೊದಲಿನಂತೆ ನಿರ್ಮಿಸಬೇಕಿದೆ. ಇದರಿಂದಲೂ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದರು.
೫ ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಡಾ. ಮಹೇಶ ಭಟ್ಟ ಇಡಗುಂದಿ "ಧರ್ಮಾಧಾರಿತ ಬದುಕು " ಎಂಬ ಕುರಿತು; ಡಾ. ಗೋಪಾಲಕೃಷ್ಣ ಭಟ್ಟ ಕೊಲ್ಲೂರು "ಲೌಕಿಕ ಪ್ರಪಂಚದಲ್ಲಿ ಧರ್ಮ ಮತ್ತು ಕರ್ಮದ ಸಮಷ್ಠಿಯ ಬದುಕು " ಎಂಬ ಕುರಿತು; ಡಾ. ಎಲ್. ವಾಸುವೇದ ಭಟ್ಟ ಹಂದಲಸು "ದೇವೋಜೀವ ಸದಾಶಿವಃ " ಎಂಬ ಕುರಿತು; ಜ್ಯೋತಿಷ್ಯಾಚಾರ್ಯ ನಾಗೇಂದ್ರ ಭಟ್ಟ ಹಿತ್ಲಳ್ಳಿ "ಪ್ರಾಕೃತಿಕ ದೇವತಾರಾಧನೆ ಮತ್ತು ಆರೋಗ್ಯ ಭಾಗ್ಯ " ಎಂಬ ಕುರಿತು ಉಪನ್ಯಾಸ ನೀಡಿದರು.ದೇವಸ್ಥಾನದ ಪುರೋಹಿತ ರಾಮಚಂದ್ರ ಭಟ್ಟ ಹಿತ್ಲಕಾರಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ. ರಾಮಚಂದ್ರ ಭಟ್ಟ ಸಣ್ಣೇಮನೆ ಸಾಂದರ್ಭಿಕ ಮಾತನಾಡಿದರು. ಸೀಮಾಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ ಸ್ವಾಗತಿಸಿದರು. ಚಂದ್ರಕಲಾ ಭಟ್ಟ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಆನಂತರ ಖ್ಯಾತ ಕಲಾವಿದರು ಪ್ರಸ್ತುತಪಡಿಸಿದ "ಗಾನನಾಟ್ಯ ವೈಭವ " ಕಲಾಸಕ್ತರನ್ನು ರಂಜಿಸಿತು.