ಬಾಳೆಹೊನ್ನೂರುಮನುಷ್ಯನ ಜೀವನದ ವಿಕಾಸ ಮತ್ತು ಉನ್ನತಿಗೆ ಶಿಕ್ಷಣ ಅವಶ್ಯಕ. ಭೌತಿಕ ವಿದ್ಯೆಯಿಂದ ಸಿರಿ ಸಂಪತ್ತು ಹೊಂದಿ ಸುಖ ಜೀವನ ನಡೆಸಬಹುದು. ಭೌತಿಕ ಶಿಕ್ಷಣದ ಜೊತೆಗೆ ಒಂದಿಷ್ಟಾದರೂ ಸಂಸ್ಕಾರಯುತ ಶಿಕ್ಷಣ ಪಡೆದರೆ ಬದುಕು ಹಸನಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.
ಧರ್ಮ ಮತ್ತು ಶಿಕ್ಷಣ ಚಿಂತನ ಸಮಾರಂಭಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಮನುಷ್ಯನ ಜೀವನದ ವಿಕಾಸ ಮತ್ತು ಉನ್ನತಿಗೆ ಶಿಕ್ಷಣ ಅವಶ್ಯಕ. ಭೌತಿಕ ವಿದ್ಯೆಯಿಂದ ಸಿರಿ ಸಂಪತ್ತು ಹೊಂದಿ ಸುಖ ಜೀವನ ನಡೆಸಬಹುದು. ಭೌತಿಕ ಶಿಕ್ಷಣದ ಜೊತೆಗೆ ಒಂದಿಷ್ಟಾದರೂ ಸಂಸ್ಕಾರಯುತ ಶಿಕ್ಷಣ ಪಡೆದರೆ ಬದುಕು ಹಸನಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿ ಮಹಾರಥೋತ್ಸವದ ಶನಿವಾರ ನಡೆದ ಧರ್ಮ ಮತ್ತು ಶಿಕ್ಷಣ ಚಿಂತನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾನವನು ಕೆಟ್ಟವನಲ್ಲ. ಆತನಲ್ಲಿರುವ ಅಜ್ಞಾನದ ಕತ್ತಲೆ ಅವನನ್ನು ಕೆಡಿಸಿದೆ. ರಾಗಾದಿ ಬಂಧನದ ಭೂಮಿಯಾದ ಈ ಅಜ್ಞಾನದ ರಾಡಿ ಮನುಷ್ಯ ಮೊದಲು ಕಳೆದುಕೊಳ್ಳಬೇಕು. ನಿಜವಾದ ವಿದ್ಯೆ ಬೆಳಕಿನ ಹೊಳೆ. ಅದರಲ್ಲಿ ಮಿಂದು ಬಂದವನು ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ. ಪ್ರಾಪಂಚಿಕ ಸಂಪತ್ತನ್ನು ಸಂಪಾದಿಸಿದಾಗ ನಮ್ಮ ಬದುಕು ವೈಭವಪೂರ್ಣ. ಪಾರಮಾರ್ಥಿಕ ಸಂಪತ್ತನ್ನು ಸಂಪಾದಿಸಿದಾಗ ನಮ್ಮ ಬದುಕು ಅನುಭಾವ ಪೂರ್ಣ. ವೀರಶೈವ ಧರ್ಮದ ಪೀಠ ಮಠಗಳು ಹಾಗೂ ಆಧ್ಯಾತ್ಮ ಕೇಂದ್ರಗಳು ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ಕೊಟ್ಟಿರುವುದನ್ನು ಮರೆಯಲಾಗದು. ಪ್ರಾಪಂಚಿಕ ವಿದ್ಯೆಯ ಜೊತೆಗೆ ಆಧ್ಯಾತ್ಮ ಬಾಳುವುದು ಮನುಷ್ಯನ ಗುಣ ಧರ್ಮ ಆಗಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದ್ದಾರೆ ಎಂದರು.ಸಮಾರಂಭ ಉದ್ಘಾಟಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಇದೊಂದು ಭವ್ಯ ಸುಂದರ ಸಮಾರಂಭ ಮಹಾಸಭಾ ಅಧ್ಯಕ್ಷರಾದ ನಂತರ ಮೂಲ ಪೀಠಕ್ಕೆ ಆಗಮಿಸಿ ಶ್ರೀ ರಂಭಾಪುರಿ ಜಯಂತಿ-ಜಾತ್ರಾ ಮಹೋತ್ಸವ ಉದ್ಘಾಟನೆ ನನ್ನ ಪಾಲಿಗೆ ಬಂದಿರುವುದು ನನ್ನ ಸೌಭಾಗ್ಯ. ವೀರಶೈವ ಲಿಂಗಾಯತ ಧರ್ಮಕ್ಕೆ ಬಹು ದೊಡ್ಡ ಇತಿಹಾಸ, ಭವ್ಯ ಪರಂಪರೆಯಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಶಿವಾದ್ವೈತ ಸಿದ್ಧಾಂತದ ಮೂಲ ಪರಮಾಚಾರ್ಯರು. ಜಾತಿ ಮತ ಪಂಥಗಳನ್ನು ಮೀರಿ ಆಧ್ಯಾತ್ಮದ ಜ್ಞಾನ ಬೋಧಿಸುವ ಮೂಲಕ ಎಲ್ಲೆಡೆ ಸಾಮರಸ್ಯ ಸೌಹಾರ್ದತೆ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಬೋಧಿಸಿದ ತತ್ವ ಸಿದ್ಧಾಂತಗಳು ಅವಿನಾಶಿ. ಜೀವನದ ವಿಕಾಸಕ್ಕೆ ಅಡಿಪಾಯ. ಇದೇ ದಾರಿಯಲ್ಲಿ 12ನೇ ಶತಮಾನದ ಶರಣರು ಮುನ್ನಡೆದು ಸಾಮಾಜಿಕ ಬದುಕಿಗೆ ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ. ವೀರಶೈವ ಸಮಾಜ ವೃಕ್ಷಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಹಾಗೂ ಶರಣರು ಮನುಷ್ಯನ ಎರಡು ಕಣ್ಣುಗಳಿದ್ದಂತೆ. ಸನ್ಮಾರ್ಗದಲ್ಲಿ ಮುನ್ನಡೆಸುವುದೇ ಉಭಯರ ವಿಚಾರ ಧಾರೆಗಳಾಗಿವೆ ಎಂಬುದನ್ನು ಯಾರೂ ಮರೆಯಬಾರದು. ಮಲೆನಾಡಿ ನಲ್ಲಿ ಕಾಡು ಪ್ರಾಣಿಗಳಿಂದ ಮತ್ತು ಆನೆಗಳಿಂದ ಜನರಿಗೆ ಭೀತಿ ಆವರಿಸಿದೆ. ಇಲಾಖೆಯಿಂದ ಇವುಗಳನ್ನು ಸರಿಪಡಿಸಿ ಜನರ ಬದುಕಿನಲ್ಲಿ ನೆಮ್ಮದಿ ಉಂಟು ಮಾಡಲು ಪ್ರಾಮಾಣಿಕ ಶ್ರಮಿಸುತ್ತೇನೆ ಎಂದರು. ಶ್ರೀ ರಂಭಾಪುರಿ ಜಗದ್ಗುರು ಲೋಕ ಕಲ್ಯಾಣಕ್ಕಾಗಿ ನಿರಂತರ ಶ್ರಮಿಸುತ್ತಿದ್ದಾರೆ. ಸಮಸ್ತ ಮನು ಕುಲಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಶ್ರೀ ರೇಣುಕಾಚಾರ್ಯರು ಉದ್ಭವಿಸಿದ ಅವತರಿಸಿದ ಕೊಲನುಪಾಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರ ಪ್ರಯತ್ನಕ್ಕೆ ನಾವೆಲ್ಲರೂ ಸಹಕಾರ ನೀಡೋಣ. ಸಮಾಜವನ್ನು ಅಭಿವೃದ್ಧಿಯತ್ತ ಮುನ್ನಡೆಸುವ ಜವಾಬ್ದಾರಿ ಅ.ಭಾ.ವೀರಶೈವ-ಲಿಂಗಾಯತ ಮಹಾಸಭಾದ ಮೇಲಿದೆ. ಹಲವಾರು ದಿಕ್ಕಿನಲ್ಲಿ ಸಮಾಜದ ಅಭಿವೃದ್ದಿಯ ಗುರಿಯನ್ನು ಮಹಾಸಭಾ ಹೊಂದಿದೆ ಎಂದರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು ಮಾತನಾಡಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗ ಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಸಂಯೋಜಿಸಿದ ಧರ್ಮ ಮತ್ತು ಶಿಕ್ಷಣ ವಿಚಾರ ಚಿಂತನ ಸಮಾರಂಭ ವರ್ಷದಿಂದ ವರ್ಷಕ್ಕೆ ಅರ್ಥಪೂರ್ಣವಾಗಿ ನಡೆದಿದೆ. ಮನುಷ್ಯ ಭೌತಿಕ ಸಂಪತ್ತು ಗಳಿಸಿದ್ದರೂ ಮಾನಸಿಕ ಶಾಂತಿಯಿಲ್ಲ. ಆಧ್ಯಾತ್ಮದ ಜ್ಞಾನದಿಂದ ಮಾತ್ರ ನೆಮ್ಮದಿ ಜೀವನ ಸಾಧ್ಯ. ಶ್ರೀ ಜಗದ್ಗುರು ರೇಣುಕಾಚಾರ್ಯರ ಜೀವನ ಮೌಲ್ಯದ ವಿಚಾರ ಧಾರೆಗಳು ಎಲ್ಲ ಕಾಲಕ್ಕೂ ಅನ್ವಯಿಸುತ್ತವೆ ಎಂದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ.ಲೋಕೇಶ್, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆ ಅಧ್ಯಕ್ಷ ಯು.ಎಂ.ಬಸವರಾಜ, ಸುಧೀರ, ಬಿ. ಜಗದೀಶ್ಚಂದ್ರ, ಕೋಕಿಲ ಲಿಂಗಪ್ಪಗೌಡ್ರು, ಮಹೇಶ ಆಚಾರ್ಯ, ಎಲ್.ರವಿ ಭಾಗವಹಿಸಿದ್ದರು.ಸಿಂದಗಿ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು, ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯರು, ಮಳಲಿ ಡಾ. ನಾಗಭೂಷಣ ಶಿವಾಚಾರ್ಯರು, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು, ಬೀರೂರಿನ ರುದ್ರಮುನಿ ಶಿವಾಚಾರ್ಯರು, ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಮಠಾಧೀಶರು ಉಪಸ್ಥಿತರಿದ್ದರು.ಚಿಕ್ಕಮಗಳೂರಿನ ಚಂದ್ರಶೇಖರ ಶ್ರೀ, ಮಾಗಣಗೇರಿ ಏಕಾಕ್ಷರ ಶ್ರೀ, ದೋರನಹಳ್ಳಿ ಅಭಿನವ ಮಹಾಂತೇಶ್ವರ ಶ್ರೀ ಹಿರೇತೊಗಲೇರಿಯ ವಿಶ್ವನಾಥ, ಚನಬಸಯ್ಯ ಹಿರೇಮಠ, ಬಾಳೆಹೊನ್ನೂರಿನ ಆರ್.ಡಿ. ರವೀಂದ್ರ, ಎ.ಕೆ.ಪಿ. ಕೃಷ್ಣ ಪೊದುವಾಳ್, ಮೆಣಸುಕೂಡಿಗೆ ಆರ್.ಎಸ್.ರುದ್ರಯ್ಯ ಗುರುಸ್ವಾಮಿ, ರಾಮಚಂದ್ರಭಟ್ ನಾರಿಕೊಳಲು ಹಾಗೂ ಹಾಜಿ ಮಹಮ್ಮದ್ ಇಲಿಯಾಸ್ (ರಝಾ) ಅವರಿಗೆ ಶ್ರೀ ರಂಭಾಪುರಿ ಜಗದ್ಗುರು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಸಮಾರಂಭಕ್ಕೂ ಮುನ್ನ ಶ್ರೀ ಸೋಮೇಶ್ವರ ದೇವಸ್ಥಾನದಿಂದ ಶ್ರೀ ಪೀಠದ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ವರೆಗೆ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು. ಅಪೂರ್ವ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ನಾಡಿನ ಶಿವಾಚಾರ್ಯರು, ಎಲ್ಲೆಡೆಯಿಂದ ಆಗಮಿಸಿದ ಸದ್ಭಕ್ತರು ಶ್ರೀ ಜಗದ್ಗುರುಗಳವರ ಆಶೀರ್ವಾದ ಪಡೆದರು.
೨೮ಬಿಹೆಚ್‌ಆರ್ ೮: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಧರ್ಮ ಮತ್ತು ಶಿಕ್ಷಣ ಚಿಂತನ ಸಮಾರಂಭವನ್ನು ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಉದ್ಘಾಟಿಸಿದರು. ವಿವಿಧ ಶಾಖಾ ಮಠಗಳ ಶಿವಾಚಾರ್ಯರು, ಗಣ್ಯರು ಹಾಜರಿದ್ದರು.೨೮ಬಿಹೆಚ್‌ಆರ್ ೯: ಬಾಳೆಹೊನ್ನೂರು ರಂಭಾಪುರಿ ಪೀಠದ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು.