ಸಾರಾಂಶ
ಯರಗಟ್ಟಿ: ಮನುಷ್ಯ ಜೀವನ ಅಮೂಲ್ಯವಾದುದು. ಮನುಷ್ಯ ಆಸೆಗಳಿಗಾಗಿ ಬದುಕಬಾರದು. ಆದರ್ಶಕ್ಕಾಗಿ ಬದುಕಿದರೆ ಜೀವನ ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಪಾಲಿಕ್ಲಿನಿಕ್ ಮತ್ತು ಡೈಗ್ನೊಸ್ಟಿಕ್ ಕೇಂದ್ರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕನ್ನಡಪ್ರಭ ವಾರ್ತೆ ಯರಗಟ್ಟಿ
ಮನುಷ್ಯ ಜೀವನ ಅಮೂಲ್ಯವಾದುದು. ಮನುಷ್ಯ ಆಸೆಗಳಿಗಾಗಿ ಬದುಕಬಾರದು. ಆದರ್ಶಕ್ಕಾಗಿ ಬದುಕಿದರೆ ಜೀವನ ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಪಾಲಿಕ್ಲಿನಿಕ್ ಮತ್ತು ಡೈಗ್ನೊಸ್ಟಿಕ್ ಕೇಂದ್ರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ದೊಡ್ಡದು. ಮನುಷ್ಯ ಹಣ ಸಂಪಾದಿಸುವಾಗ ಆರೋಗ್ಯ ನಿರ್ಲಕ್ಷಿಸುತ್ತಾನೆ. ಆದರೆ ಆರೋಗ್ಯ ಹದಗೆಟ್ಟಾಗ ಗಳಿಸಿದ ಸಂಪತ್ತು ಖರ್ಚು ಮಾಡಿದರೂ ಕಳೆದು ಹೋದ ಆರೋಗ್ಯ ಲಭಿಸಲಾರದು. ನಿತ್ಯ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡುವ ಪ್ರವೃತ್ತಿ ಗಳಿಸಿಕೊಳ್ಳಬೇಕಾಗಿದೆ. ಡಾ.ಎಸ್.ವಿ. ವಾಲಿ ಮತ್ತು ಗುರು ವಾಲಿ ಅವರು ಬಹಳ ಶ್ರಮ, ಸಾಧನೆಯಿಂದ ಭವ್ಯ ಆಸ್ಪತ್ರೆ ನಿರ್ಮಿಸಿರುವುದು ಗ್ರಾಮೀಣ ಜನತೆಗೆ ಬಹಳಷ್ಟು ಉಪಯೋಗವಾಗುತ್ತದೆ. ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಶುಭ ಹಾರೈಸಿದರು.ಎಂ.ಚಂದರಗಿ ವೀರಭದ್ರ ಶಿವಾಚಾರ್ಯರು, ಹಣಬರಟ್ಟಿ ಬಸವಲಿಂಗ ಶಿವಾಚಾರ್ಯರು, ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯರು, ಭಾಗೋಜಿಕೊಪ್ಪದ ಡಾ.ಶಿವಲಿಂಗ ಶಿವಾಚಾರ್ಯರು, ಸತ್ತಿಗೇರಿ ಚಂದ್ರಶೇಖರ ಶಿವಾಚಾರ್ಯರು ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಗಣ್ಯರು ಉಪಸ್ಥಿತರಿದ್ದರು.ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತರಿಗೆ ಆಶೀರ್ವದಿಸಿದರು. ಎಲ್ಲ ಭಕ್ತರಿಗೂ ಅನ್ನ ದಾಸೋಹ ಜರುಗಿತು.