ಜೀವನ ಮೌಲ್ಯಗಳು ಉಳಿದು ಬೆಳೆದರೆ ಬದುಕು ಉಜ್ವಲ: ರಂಭಾಪುರಿ ಶ್ರೀ

| Published : Sep 03 2024, 01:44 AM IST

ಸಾರಾಂಶ

ಬಾಳೆಹೊನ್ನೂರು, ಭೌತಿಕ ಬದುಕಿಗೆ ಆಧ್ಯಾತ್ಮ ಜ್ಞಾನ ಅವಶ್ಯಕ. ಸತ್ಯ ಮತ್ತು ಪ್ರಾಮಾಣಿಕತೆಗಿಂತ ಉದಾತ್ತವಾದ ಧರ್ಮ ಇನ್ನೊಂದಿಲ್ಲ. ಜೀವನ ಮೌಲ್ಯಗಳು ಉಳಿದು ಬೆಳೆದು ಬಂದರೆ ಬದುಕು ಉಜ್ವಲಗೊಳ್ಳುತ್ತದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ಶ್ರಾವಣ ತಪೋನುಷ್ಠಾನ ಮಂಗಲದಲ್ಲಿ ರಂಭಾಪುರಿ ಜಗದ್ಗುರುಗಳುಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಭೌತಿಕ ಬದುಕಿಗೆ ಆಧ್ಯಾತ್ಮ ಜ್ಞಾನ ಅವಶ್ಯಕ. ಸತ್ಯ ಮತ್ತು ಪ್ರಾಮಾಣಿಕತೆಗಿಂತ ಉದಾತ್ತವಾದ ಧರ್ಮ ಇನ್ನೊಂದಿಲ್ಲ. ಜೀವನ ಮೌಲ್ಯಗಳು ಉಳಿದು ಬೆಳೆದು ಬಂದರೆ ಬದುಕು ಉಜ್ವಲಗೊಳ್ಳುತ್ತದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.ರಂಭಾಪುರಿ ಪೀಠದಲ್ಲಿ ಸೋಮವಾರ ನಡೆದ ರಂಭಾಪುರಿ ಜಗದ್ಗುರುಗಳ ೩೩ನೇ ವರ್ಷದ ಶ್ರಾವಣ ತಪೋನುಷ್ಠಾನ ಹಾಗೂ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಪತ್ತು ಬೆಳೆದಂತೆಲ್ಲ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದು. ತನಗಾಗಿ ಬಯಸುವುದು ಜೀವ ಗುಣವಾದರೆ ಎಲ್ಲರಿಗಾಗಿ ಬಯಸುವುದು ದೈವ ಗುಣ. ಕಾಯಿಸಿದ ಚಿನ್ನ ಒಡವೆಯಾಗುತ್ತದೆ. ಬಡಿದ ತಾಮ್ರ ತಂತಿಯಾಗುತ್ತದೆ. ಕೆತ್ತಿದ ಕಲ್ಲು ಸುಂದರ ಮೂರ್ತಿ ಯಾಗುತ್ತದೆ. ಜೀವನದಲ್ಲಿ ಕಷ್ಟಗಳು ಹೆಚ್ಚಾದಷ್ಟು ಜೀವನ ಮೌಲ್ಯ ವೃದ್ಧಿಸುತ್ತವೆ. ತತ್ವವನ್ನರಿತವನಿಗೆ ಸತ್ಯದ ಬೆಳಕು ಗೋಚರಿಸುತ್ತದೆ ಎಂದರು.

ವೀರಶೈವ ಧರ್ಮ ಶಾಸ್ತ್ರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ಬದುಕಿ ಬಾಳುವ ಜನ ಸಮುದಾಯಕ್ಕೆ ಆಶಾಕಿರಣ. ಅವರ ವಿಶ್ವ ಬಂಧುತ್ವದ ವಿಚಾರ ಧಾರೆಗಳು ಸಮುದಾಯದ ಶ್ರೇಯಸ್ಸಿಗೆ ಸ್ಫೂರ್ತಿಯಾಗಿವೆ ಎಂದರು.ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡಿದ ಉಟಗಿ ಹಿರೇಮಠದ ಶಿವಪ್ರಸಾದ ಮಾತನಾಡಿ, ಬಲ್ಲವರ ಬೆಲ್ಲ ದಂತಹ ಮಾತಿಗೆ ಮೌಲ್ಯವನ್ನಿತ್ತು ಬಾಳನ್ನು ಕಟ್ಟಿಕೊಳ್ಳಲು ಗಟ್ಟಿ ನಿರ್ಧಾರ ಮಾಡಬೇಕಾಗಿದೆ. ಜಗದ್ಗುರು ರೇಣುಕಾಚಾರ್ಯರ ಜೀವನ ಸಂದೇಶ ಸಕಲರಿಗೂ ಒಳಿತು ಉಂಟು ಮಾಡುತ್ತವೆ. ಒಂದು ತಿಂಗಳ ಕಾಲ ಶ್ರೀ ಪೀಠದಲ್ಲಿ ಪುರಾಣ ಪ್ರವಚನ ಕಾರ್ಯ ನನ್ನ ಪಾಲಿಗೆ ಬಂದ ಬಹು ದೊಡ್ಡ ಸೌಭಾಗ್ಯ ಎಂದರು.ಹುಡುಗಿ ವಿರೂಪಾಕ್ಷಲಿಂಗ ಶಿವಾಚಾರ್ಯರು ಮಾತನಾಡಿ, ಸುಳ್ಳು ಹೇಳಲು ಹಲವು ದಾರಿ. ಆದರೆ ಸತ್ಯ ಹೇಳಲು ಇರುವು ದೊಂದೇ ದಾರಿ. ವಿವೇಕ, ಧೈರ್ಯ, ಸ್ನೇಹ ಇವು ವ್ಯಾಧಿಗಳಿಗೆ ದಿವ್ಯೌಷಧ. ಶ್ರಾವಣದ ಒಂದು ತಿಂಗಳ ಕಾಲ ಪವಿತ್ರ ರಂಭಾಪುರಿ ಪೀಠದಲ್ಲಿ ತಾವು ನೆಲೆಸಿರುವುದು ಪೂರ್ವ ಜನ್ಮದ ಸುಕೃತ ಎಂದರು. ಶ್ರೀಪೀಠದಲ್ಲಿ ಒಂದು ತಿಂಗಳ ಕಾಲ ಪೂಜಾನುಷ್ಠಾನ ಕೈಗೊಂಡ ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರಿಗೆ ‘ತಪೋ ಭೂಷಣ’ ಪ್ರಶಸ್ತಿ ಮತ್ತು ರುದ್ರಾಕ್ಷಿ ಕಿರೀಟ ಹಾಕಿ ಶ್ರೀ ರಂಭಾಪುರಿ ಜಗದ್ಗುರು ಶುಭ ಹಾರೈಸಿದರು. ಬೆಂಗಳೂರು ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಪ್ರಭುದೇವ ಕಲ್ಮಠ ಅವರ ೭೧ನೇ ಜನ್ಮ ದಿನೋತ್ಸವ ಅಂಗವಾಗಿ ಗುರುರಕ್ಷೆ ನೀಡಿ ಶುಭ ಹಾರೈಸಲಾಯಿತು. ಮಾಜಿ ಶಾಸಕ ಜಿ.ಎಸ್.ಗಡ್ಡದ್ದೇವರಮಠ, ಗುರುಕುಲದ ಕುಲಪತಿ ಸಿದ್ಧಲಿಂಗಯ್ಯ ಹಿರೇಮಠ, ಪ್ರಭುದೇವ ಕಲ್ಮಠ, ಚಂದ್ರ ಶೇಖರ, ವಿಶ್ವನಾಥ, ಮಲೆಬೆನ್ನೂರಿನ ಜಗದೀಶ, ದಾವಣಗೆರೆ ಡಾ.ರೇಣುಕಾರಾಧ್ಯ, ಗುಡದೂರು ವೀರೇಶ್ವರಸ್ವಾಮಿ, ಶಿವಕಾಂತಾರಾಧ್ಯ, ಗುರುಕಾಂತಾರಾಧ್ಯ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಲಿಂಗೈಕ್ಯ ವೀರರುದ್ರಮುನಿ ಶಿವಾಚಾರ್ಯರ ಜನ್ಮ ಶತಮಾನೋತ್ಸವ (ಬಾಕ್ಸ್)ಶ್ರೀ ರಂಭಾಪುರಿ ಲಿಂಗೈಕ್ಯ ಜಗದ್ಗುರು ವೀರರುದ್ರಮುನಿ ಶಿವಾಚಾರ್ಯ ಭಗವತ್ಪಾದರು 1924ರಲ್ಲಿ ಜನಿಸಿದ್ದು, ಅವರು ಬದುಕಿದ್ದರೆ 2024ನೇ ವರ್ಷಕ್ಕೆ ಜನ್ಮ ಶತಮಾನೋತ್ಸವ ಆಚರಿಸಿಕೊಳ್ಳುವ ಯೋಗ ಬರುತ್ತಿತ್ತು. 1991ರಲ್ಲಿ 67ನೇ ವಯಸ್ಸಿನಲ್ಲಿ ಅವರು ಶಿವ ಸಾಯುಜ್ಯ ಹೊಂದಿದರು. ಈ ಹಿನ್ನೆಲೆಯಲ್ಲಿ ಅವರ ನೂರು ವರ್ಷದ ಸವಿ ನೆನಪಿಗೆ ಅವರ ಜನ್ಮ ಶತಮಾನೋತ್ಸವ ನಮ್ಮ ಸಂಸ್ಥೆಗಳ ಸಹಕಾರದಿಂದ ಡಿಸೆಂಬರ್ 15ರಂದು ಜನ್ಮ ಶತಮಾನೋತ್ಸವ ಕಾರ್ಯ ಕ್ರಮವನ್ನು ರಂಭಾಪುರಿ ಪೀಠದಲ್ಲಿ ನಡೆಸಲಾಗುವುದು ಎಂದು ಶ್ರೀ ರಂಭಾಪುರಿ ಜಗದ್ಗುರು ಪ್ರಕಟಿಸಿದರು.೦೨ಬಿಹೆಚ್‌ಆರ್ ೪:

ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ೩೩ನೇ ವರ್ಷದ ಶ್ರಾವಣ ತಪೋನುಷ್ಠಾನದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರಿಗೆ ತಪೋ ಭೂಷಣ ಪ್ರಶಸ್ತಿ ನೀಡಿ ಶುಭ ಹಾರೈಸಿದರು.