ಸಾರಾಂಶ
ರಾಮನಗರ: ಕಾರ್ಮಿಕರ ಹಕ್ಕುಗಳ ಬಗ್ಗೆ ಅರಿವಿಲ್ಲದಿದ್ದರೆ ಅವರ ಜೀವನ ನಿರ್ವಹಣೆ ಕಷ್ಟಕರವಾಗುತ್ತದೆ ಎಂದು ನ್ಯಾಯಾಧೀಶೆ ಪಿ.ಆರ್. ಸವಿತಾ ಹೇಳಿದರು.ನಗರದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಯೋಜನೆಗಳ ಮಾಹಿತಿ ಹಾಗೂ ಅಭಿಪ್ರಾಯ ಸಂಗ್ರಹದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.ಕಾರ್ಮಿಕರ ಹಕ್ಕುಗಳು ಹಾಗೂ ಅವರ ಅಭ್ಯುದಯಕ್ಕೆ ಸರ್ಕಾರ ಕಾಲಕಾಲಕ್ಕೆ ಜಾರಿಗೊಳಿಸುವ ಯೋಜನೆಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಪ್ರತಿದಿನ ದಿನಪತ್ರಿಕೆಯನ್ನು ಓದಿದರೆ ಸರ್ಕಾರದ ಸೌಲಭ್ಯಗಳ ಮಾಹಿತಿ ಪಡೆದುಕೊಳ್ಳಬಹುದು. ತಂತ್ರಜ್ಞಾನದ ಈ ಯುಗದಲ್ಲಿ ಈ ಮಾಹಿತಿಯನ್ನು ಸುಲಭವಾಗಿ ಪಡೆದುಕೊಂಡು ಆ ಮೂಲಕ ನಮ್ಮ ಜೀವನವನ್ನು ಮತ್ತಷ್ಟು ಸುಲಭ ರೀತಿಯಲ್ಲಿ ಸಾಗಿಸಬಹುದಾಗಿದೆ ಎಂದರು.ಬಡವರ ಕಲ್ಯಾಣಕ್ಕಾಗಿ ಜಾರಿಗೊಂಡಿರುವ ಅಟಲ್ ಪೆನ್ಷನ್ ಯೋಜನೆ, ಉದ್ಯೋಗಿನಿ ಯೋಜನೆ, ಆಯುಷ್ಮಾನ್ ಭಾರತ್, ಆರೋಗ್ಯ ವಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮ್ ಯೋಜನೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ ಹೀಗೆ ಹಲವು ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.ಸಾಕಷ್ಟು ಜನರಿಗೆ ಅರಿವಿನ ಕೊರತೆಯಿಂದ ಈ ಯೋಜನೆಗಳ ಮಾಹಿತಿ ಇರುವುದಿಲ್ಲ. ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಿದರೆ ಅಥವಾ ಹೆಲ್ಪ್ ಲೈನ್ 15100ಗೆ ಕರೆ ಮಾಡಿ ಅಥವಾ ಜಿಲ್ಲಾ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಿ ಯೋಜನೆಗಳ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳು, ಅಹವಾಲುಗಳನ್ನು ಸಲ್ಲಿಸಿದ್ದಲ್ಲಿ, ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಸರಿಯಾಗಿ ವೇತನ ಪಾವತಿಸುತ್ತಿಲ್ಲ ಎಂಬ ದೂರು ಸ್ವೀಕರಿಸಲಾಗಿತ್ತು. ಆ ಮಾಹಿತಿಯನ್ನು ತಕ್ಷಣ ಕಾರ್ಮಿಕ ಅಧಿಕಾರಿಗಳಿಗೆ ರವಾನಿಸಲಾಗಿತ್ತು. ಕಾರ್ಮಿಕ ಅಧಿಕಾರಿಗಳು ಆ ಕಾರ್ಮಿಕರ ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸಿ, ಅವರಿಗೆ ಬಾಕಿ ವೇತನವನ್ನು ಪಾವತಿಸಲು ಕ್ರಮ ಕೈಗೊಂಡರು ಎಂದು ತಿಳಿಸಿದರು.ಕಾರ್ಮಿಕರ ಒಳಿತಿಗಾಗಿ ಈ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಎಲ್ಲರೂ ಈ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಪೂರ್ಣ ಮಾಹಿತಿ ತಿಳಿದುಕೊಂಡು ಇತರೆ ಕಾರ್ಮಿಕರಿಗೂ ತಿಳಿಸಿ, ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಸವಿತಾ ಹೇಳಿದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಗಳಾದ ತಿಮ್ಮೇಗೌಡ ಮಾತನಾಡಿ, ಸಮಾಜದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವಂತಹ ಕಾರ್ಮಿಕರಿದ್ದಾರೆ. ಅವರಿಗೆಲ್ಲಾ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದನ್ನು ತಲುಪಿಸುವವರು ಅಧಿಕಾರಿಗಳು, ಅದಕ್ಕೆ ಸಂಘಟಿತ ಮತ್ತು ಅಸಂಘಟಿತ ವಲಯಗಳ ಕಾರ್ಮಿಕ ಸಂಘನೆಗಳ ಪದಾಧಿಕಾರಿಗಳು ಎಲ್ಲಾ ಕಾರ್ಮಿಕರಿಗೂ ಈ ಯೋಜನೆಗಳ ಮಾಹಿತಿಯನ್ನು ತಿಳಿಸಿ, ಕಾರ್ಮಿಕರ ಸದಸ್ಯತ್ವಕ್ಕೆ ನೋಂದಾಯಿಸಿಕೊಂಡು ಸರ್ಕಾರದಿಂದ ದೊರೆಯುವ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮಾಹಿತಿಯನ್ನು ರವಾನಿಸಿ ಎಂದರು.ಜಿಲ್ಲಾ ವಕೀಲರ ಸಂಘದ ಖಜಾಂಚಿ ಮಂಜೇಶ್ ಗೌಡ ಮಾತನಾಡಿದರು. ಕನಕಪುರ ವೃತ್ತ ನಿರೀಕ್ಷಕ ಜಯ ಪ್ರಕಾಶ್ , ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆಯ ಜಂಟಿ ನಿರ್ದೇಶಕರಾದ ಆರ್.ಕೆ. ಪಾರ್ಥಸಾರಥಿ , ಇ.ಪಿ.ಎಫ್.ಓ ಎನ್‌ಫರ‍್ಸ್ಮೆಂಟ್ ಆಫೀಸರ್ ಎಸ್. ಲೋಲಾಕ್ಷಿ ರಾವ್, ಚನ್ನಪಟ್ಟಣದ ಬ್ರಾಂಚ್ ಮ್ಯಾನೇಜರ್ ಎಸ್. ಸೆಲ್ವಾ ಗ್ರೇಸಿ ಕಾರ್ಮಿಕ ಅಧಿಕಾರಿ ಎಚ್.ಆರ್. ನಾಗೇಂದ್ರ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))