ಹೊನ್ನಾವರ ಪಟ್ಟಣದ ಎಂಪಿಇ ಸೊಸೈಟಿಯ ಎಸ್‌ಡಿಎಂ ಕಾಲೇಜಿನ ಆವಾರದಲ್ಲಿರುವ ಡಾ. ಎನ್.ಆರ್. ನಾಯಕ್ ಬಯಲು ರಂಗ ಮಂದಿರದಲ್ಲಿ ಸೆಂಟ್ರಲ್ ಶಾಲೆಯ ೨೦೨೫-೨೬ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸುದೀಕ್ಷ ಗ್ರೂಪ್ ಚೇರ್‌ಮನ್‌ ಮತ್ತು ಎಂಡಿ ಡಾ. ಸುಬ್ರಹ್ಮಣ್ಯಂ ಶರ್ಮಾಜಿ ಪಾಲ್ಗೊಂಡಿದ್ದರು.

ಹೊನ್ನಾವರ: ಸರಳತೆ ಮತ್ತು ಉತ್ತಮ ನಡತೆ ಇದ್ದರೆ ನಾವು ಸುಲಭವಾಗಿ ಬದುಕಲು ಸಾಧ್ಯ ಎಂದು ಸುದೀಕ್ಷ ಗ್ರೂಪ್ ಚೇರ್‌ಮನ್‌ ಮತ್ತು ಎಂಡಿ ಡಾ. ಸುಬ್ರಹ್ಮಣ್ಯಂ ಶರ್ಮಾಜಿ ಹೇಳಿದರು.

ಪಟ್ಟಣದ ಎಂಪಿಇ ಸೊಸೈಟಿಯ ಎಸ್‌ಡಿಎಂ ಕಾಲೇಜಿನ ಆವಾರದಲ್ಲಿರುವ ಡಾ. ಎನ್.ಆರ್. ನಾಯಕ್ ಬಯಲು ರಂಗ ಮಂದಿರದಲ್ಲಿ ಸೆಂಟ್ರಲ್ ಶಾಲೆಯ ೨೦೨೫-೨೬ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಹೊನ್ನಾವರ ತಾಲೂಕು ನನ್ನ ಹೃದಯಕ್ಕೆ ಹತ್ತಿರವಾದ ಸ್ಥಳ. ನಾನು ಹುಟ್ಟಿದ್ದು ಬೇರೆ ರಾಜ್ಯದಲ್ಲಾದರೂ ಕರ್ನಾಟಕ ನನ್ನ ಕರ್ಮಭೂಮಿ ಆಗಿದೆ. ಶಿಕ್ಷಣ ಮತ್ತು ಆರೋಗ್ಯದ ವಿಚಾರದಲ್ಲಿ ಸುದೀಕ್ಷಾ ಗ್ರೂಪ್ ಯಾವತ್ತೂ ಸಹಾಯಕ್ಕೆ ನಿಲ್ಲುತ್ತದೆ ಎಂಬ ಭರವಸೆ ನೀಡಿದರು. ಅಲ್ಲದೆ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಬೇಕಾದ ವಿದ್ಯಾರ್ಥಿ ವೇತನ ₹೧ ಲಕ್ಷ ನೀಡುತ್ತೇನೆ ಎಂದು ಘೋಷಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಪಿಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್, ಶಿವಾನಿ ಮಾತನಾಡಿ, ವಿದ್ಯಾರ್ಥಿಗಳ ಶಾಲಾ ವಾರ್ಷಿಕೋತ್ಸವಗಳಲ್ಲಿ ಪಾಲಕರ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಗೆ ಬರಲು ಪಾಲಕರ ಪಾತ್ರ ದೊಡ್ಡದಿದೆ. ಪಾಲಕರು ಮತ್ತು ಶಿಕ್ಷಕರ ಸಂಬಂಧ ಗಟ್ಟಿಯಾಗಿರಬೇಕು. ಶಾಲೆಯಲ್ಲಿ ಕಲಿಯುವ ೬ ವಿಷಯಗಳ ಜತೆಗೆ ಮಕ್ಕಳು ಸಮಾಜದಲ್ಲಿ ಬದುಕಲು ಬೇಕಾಗುವ ಜ್ಞಾನವನ್ನು ಗಳಿಸಿಕೊಳ್ಳುವುದು ಅತಿ ಮುಖ್ಯ. ಮಕ್ಕಳನ್ನು ಸ್ವಾರ್ಥಿಗಳಾಗಿ ಬೆಳೆಸಬೇಡಿ. ಅವರಿಗೆ ತ್ಯಾಗದ ಮನೋಭಾವ ಬೆಳೆಸಿ. ಗುರುವನ್ನು ಯಾರೂ ನಿಂದಿಸಬಾರದು. ಧೈರ್ಯ ಮತ್ತು ಸಾಹಸದ ಮನೋಭಾವವನ್ನು ಮಕ್ಕಳಿಗೆ ಕಲಿಸಬೇಕು ಎಂದರು.

ಗೋವಾ ರಾಜ್ಯದ ಶಾಸಕ ಪ್ರಸಾದ್ ಗುವಾಂಕ್, ಎಂಪಿಇ ಸೊಸೈಟಿ ಉಪಾಧ್ಯಕ್ಷ ನಾಗರಾಜ ಕಾಮತ್, ಕಾರ್ಯದರ್ಶಿ ಎಸ್.ಎಂ. ಭಟ್, ವಿದ್ಯಾರ್ಥಿ ಪ್ರತಿನಿಧಿಗಳಾದ ಮೊಹಮ್ಮದ್ ಸೈಫಾನ್ , ಕರಣ್ ರಾಜು ನಾಯ್ಕ ಉಪಸ್ಥಿತರಿದ್ದರು.

ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾಕೂಟದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಶಾಂಭವಿ ಭಟ್ ಸಂಗಡಿಗರು ಪ್ರಾರ್ಥಿಸಿದರು. ಶ್ರಾವ್ಯಾ ಹೆಗಡೆ ಸಂಗಡಿಗರು ಪ್ರಾರ್ಥನಾ ನೃತ್ಯ ಪ್ರಸ್ತುತ ಪಡಿಸಿದರು. ಪ್ರಾಚಾರ್ಯೆ ಡಾ. ವಿಜಯಲಕ್ಷ್ಮೀ ನಾಯ್ಕ ವರದಿ ವಾಚಿಸಿದರು. ಶಿಕ್ಷಕ ಸುಜಯ್ ಭಟ್ ವಂದಿಸಿದರು. ಶಾರದಾ ಭಟ್ ಮತ್ತು ಶ್ವೇತಾ ಎನ್. ಕಾರ್ಯಕ್ರಮ ನಿರೂಪಿಸಿದರು. ಎಂಪಿಇ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರು, ವಿವಿಧ ವಿದ್ಯಾಸಂಸ್ಥೆಯ ಮುಖ್ಯಸ್ಥರು ಹಾಜರಿದ್ದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಉ.ಕ. ಜಿಲ್ಲೆಯಲ್ಲಿ ಸುದೀಕ್ಷಾ ಗ್ರೂಪ್‌ನಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುತ್ತಿದ್ದೇವೆ ಎಂದು ಡಾ. ಸುಬ್ರಹ್ಮಣ್ಯಂ ಶರ್ಮಾಜಿ ಹೇಳಿದರು. ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಸುಮಾರು ೩೦೦ ಹಾಸಿಗೆಯುಳ್ಳ ಆಸ್ಪತ್ರೆ ಇದಾಗಲಿದ್ದು, ಮಾಚ್ ಅಥವಾ ಏಪ್ರೀಲ್‌ನಲ್ಲಿ ಪ್ರಾರಂಭಿಸುವ ಉದ್ದೇಶ ಹೊಂದಿದ್ದೇವೆ. ಎಕ್ಸ್‌-ರೇಗೆ ಕೇವಲ ₹೧೭ ಮತ್ತು ಡಯಾಲಿಸಿಸ್‌ಗೆ ₹೩೪ ಶುಲ್ಕವಿರಲಿದೆ ಎಂದು ಘೋಷಿಸಿದರು.