ಭಜನೆಯು ಭಗವಂತನಿಗೆ ಅತ್ಯಂತ ಪ್ರೀತಿಯ ಸೇವೆ. ಭಜನೆ ಮೂಲಕ ಭಗವಂತನನ್ನು ಆರಾಧಿಸಿದಾಗ ಬದುಕು ಸಮೃದ್ಧವಾಗುತ್ತದೆ. ಕಲಿ ಯುಗದಲ್ಲಿ ದೇವರನ್ನು ಸಮಷ್ಠಿಯಾಗಿ ಆರಾಧಿಸಲು ಅತ್ಯಂತ ಸುಲಭ ಹಾಗೂ ಶ್ರೇಷ್ಠ ಮಾರ್ಗವೇ ಭಜನೆ. ಸೂರಿಮಣ್ಣಿನಲ್ಲಿ ಭಜನೆಯ ಲೋಕವನ್ನೇ ಸೃಷ್ಟಿಸಿ ಅದ್ಭುತ ಸೇವೆ ನಡೆದಿದೆ ಎಂದು ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಸಂಸ್ಥಾನ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು.
ಕಾರ್ಕಳ: ಭಜನೆಯು ಭಗವಂತನಿಗೆ ಅತ್ಯಂತ ಪ್ರೀತಿಯ ಸೇವೆ. ಭಜನೆ ಮೂಲಕ ಭಗವಂತನನ್ನು ಆರಾಧಿಸಿದಾಗ ಬದುಕು ಸಮೃದ್ಧವಾಗುತ್ತದೆ. ಕಲಿ ಯುಗದಲ್ಲಿ ದೇವರನ್ನು ಸಮಷ್ಠಿಯಾಗಿ ಆರಾಧಿಸಲು ಅತ್ಯಂತ ಸುಲಭ ಹಾಗೂ ಶ್ರೇಷ್ಠ ಮಾರ್ಗವೇ ಭಜನೆ. ಸೂರಿಮಣ್ಣಿನಲ್ಲಿ ಭಜನೆಯ ಲೋಕವನ್ನೇ ಸೃಷ್ಟಿಸಿ ಅದ್ಭುತ ಸೇವೆ ನಡೆದಿದೆ ಎಂದು ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಸಂಸ್ಥಾನ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು.ಶುಕ್ರವಾರ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಹಾಗೂ ಸೂರಿಮಣ್ಣು ಮಠ, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಮತ್ತು ಶ್ರೀ ಲಕ್ಷ್ಮೀನಾರಾಯಣ ಮಹಿಳಾ ಭಜನಾ ಮಂಡಳಿ, ಸೂರಿಮಣ್ಣು ಆಶ್ರಯದಲ್ಲಿ ಎಂಟು ದಿನಗಳ ಕಾಲ ನಡೆದ ಭಜನಾ ಸುವರ್ಣ ಸಂಭ್ರಮ ಸಂಪನ್ನ ಕಾರ್‍ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ, ಭಜನೆ ಮೂಲಕ ಸೂರಿಮಣ್ಣು ವಿಶೇಷ ಪ್ರಖ್ಯಾತಿ ಪಡೆದಿದೆ. ಇಲ್ಲಿ ಧಾರ್ಮಿಕತೆಯ ಲೋಕವೇ ನಿರ್ಮಾಣವಾಗಿದೆ. ಸೂರಿಮಣ್ಣು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.ವಿಶೇಷ ಉಪನ್ಯಾಸ ನೀಡಿದ ಶ್ರೀಕಾಂತ ಶೆಟ್ಟಿ ಕಾರ್ಕಳ ಮಾತನಾಡಿ, “ಭಜನೆ ಮೂಲಕ ಹಚ್ಚಿದ ದೀಪ ಇಂದು ನಂದಾ ದೀಪವಾಗಿ ಬೆಳಗುತ್ತಿದೆ” ಎಂದರು.ಭಜನಾ ಸುವರ್ಣ ಸಂಭ್ರಮ ಸಮಿತಿ ಅಧ್ಯಕ್ಷ ಶಿವಪುರ ಸುರೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ನಾರಾವಿ ಗುರುರಾಜ್ ಭಟ್ ಹಾಗೂ ವೇದಮೂರ್ತಿ ನಕ್ರೆ ರವಿ ಆಚಾರ್ಯ ಅವರ ನೇತೃತ್ವದಲ್ಲಿ ನಡೆದ ಋಕ್ ಸಂಹಿತಾ ಯಾಗದ ಪೂರ್ಣಾಹುತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಎಂಟು ದಿನಗಳ ಕಾಲ ೧೫೨ ಭಜನಾ ಮಂಡಳಿಗಳಿಂದ ಒಟ್ಟು ೧೬೮ ಗಂಟೆಗಳ ಭಜನೆ ನಡೆಯಿತು.ಸೂರಿಮಣ್ಣು ಭಜನೆಯ ಸ್ಥಾಪಕಾಧ್ಯಕ್ಷ ಶ್ರೀಧರ ಶೆಟ್ಟಿ ಪಡ್ಜಾಲ್ ದಂಪತಿಯನ್ನು ಗೌರವಿಸಲಾಯಿತು. ಶ್ರೀಧರ ಶೆಟ್ಟಿ ಮುದ್ರಾಡಿ, ಶ್ರೀನಿವಾಸ ಪೂಜಾರಿ ಎರ್ಲಪಾಡಿ, ಬಾಲಪ್ರತಿಭೆ ಸಾನಿಧ್ಯ ಆಚಾರ್ಯ ಪೆರ್ಡೂರು ಸೇರಿದಂತೆ ಭಜನೆಯಲ್ಲಿ ಸಹಕಾರ ನೀಡಿದ ಹಲವರನ್ನು ಸನ್ಮಾನಿಸಲಾಯಿತು. ಸೂರಿಮಣ್ಣು ಭಜನೆಯ ರೂವಾರಿ ವೇದಮೂರ್ತಿ ಸೂರಿಮಣ್ಣು ಸದಾಶಿವ ಉಪಾಧ್ಯಾಯ ದಂಪತಿಯನ್ನು ಗೌರವಿಸಲಾಯಿತು.
ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಪಡುಕುಡೂರು–ಪಡುಪರ್ಕಳ ಹರೀಶ ಶೆಟ್ಟಿ (ಮುಂಬೈ), ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಉದ್ಯಮಿ ವಾಸುದೇವ ಭಟ್ ಹಿರಿಯಡ್ಕ, ಹೆಬ್ರಿ ತಾಪಂ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಶಿವಪುರ, ಜಿಪಂ ಮಾಜಿ ಸದಸ್ಯೆ ಜ್ಯೋತಿ ಹರೀಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ಶಿವಪುರ ಗ್ರಾಪಂ ಅಧ್ಯಕ್ಷೆ ಶೋಭಾ ಶೆಟ್ಟಿ, ವಿವಿಧ ಭಜನಾ ಮಂಡಳಿಗಳ ಸದಸ್ಯರು, ಭಜನಾ ಸುವರ್ಣ ಸಂಭ್ರಮ ಸಮಿತಿ ಹಾಗೂ ಉಪಸಮಿತಿಗಳ ಸದಸ್ಯರು, ಸ್ವಯಂಸೇವಕರು ಮತ್ತು ಭಕ್ತ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಸೂರಿಮಣ್ಣು ಮಠದ ವಿದ್ವಾನ್ ರವಿರಾಜ್ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಲ್ಲಾಡಿ ಚಂದ್ರಶೇಖರ ಭಟ್ ಮತ್ತು ಗಗನ್ ಶೆಟ್ಟಿ ಒಂಬತೋಕ್ಲು ನಿರೂಪಿಸಿದರು. ಕಾರ್‍ಯಕ್ರಮದ ಅಂಗವಾಗಿ ಮಹಾ ಅನ್ನಸಂತರ್ಪಣೆ, ಗೌರವ ಸಮರ್ಪಣೆ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಪ್ರದರ್ಶನ ನಡೆಯಿತು.