ಆಲೋಚನೆ,ಮಾತು, ವರ್ತನೆ ಹಾಗೂ ಸಮಾಜದ ಮೇಲಿನ ಹೊಣೆಗಾರಿಕೆಗಳಿಂದ ವ್ಯಕ್ತಿಯ ನಿಜವಾದ ವ್ಯಕ್ತಿತ್ವ ವ್ಯಕ್ತವಾಗುತ್ತದೆ
ಕುಷ್ಟಗಿ: ವ್ಯಕ್ತಿಯ ಜೀವನದಲ್ಲಿ ವ್ಯಕ್ತಿತ್ವ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ವ್ಯಕ್ತಿತ್ವ ಹೊಂದಿದ ವ್ಯಕ್ತಿ ಸಮಾಜದಲ್ಲಿ ಗೌರವ ಪಡೆಯುವುದಲ್ಲದೆ ತನ್ನ ನಡೆ-ನುಡಿ,ಶಿಸ್ತು, ನೈತಿಕ ಮೌಲ್ಯಗಳ ಮೂಲಕ ಇತರರಿಗೆ ಮಾದರಿಯಾಗುತ್ತಾನೆ ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಎಸ್.ವಿ. ಡಾಣಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 2025-26ನೇ ಸಾಲಿನ ವಾರ್ಷೀಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ವ್ಯಕ್ತಿತ್ವವು ಕೇವಲ ಬಾಹ್ಯ ರೂಪದಿಂದ ನಿರ್ಧಾರವಾಗುವುದಿಲ್ಲ, ಆಲೋಚನೆ,ಮಾತು, ವರ್ತನೆ ಹಾಗೂ ಸಮಾಜದ ಮೇಲಿನ ಹೊಣೆಗಾರಿಕೆಗಳಿಂದ ವ್ಯಕ್ತಿಯ ನಿಜವಾದ ವ್ಯಕ್ತಿತ್ವ ವ್ಯಕ್ತವಾಗುತ್ತದೆ ಎಂದು ಹೇಳಿದರು.
ಪ್ರಾಮಾಣಿಕತೆ, ಸಹನಶೀಲತೆ, ಪರಿಶ್ರಮ ಹಾಗೂ ಮಾನವೀಯ ಮೌಲ್ಯ ವ್ಯಕ್ತಿತ್ವ ಕಟ್ಟಿಕೊಡುವ ಪ್ರಮುಖ ಅಂಶಗಳಾಗಿವೆ. ಯುವಕರು ದುಶ್ಚಟಗಳಿಂದ ದೂರವಿದ್ದು ಉತ್ತಮ ಗುರಿ ಹೊಂದಿದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಯುವಕರು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತೆ ಜೀವನ ಮಾಡಬೇಕು, ಹೊರತು ಸಂದೇಹ ಬರುವಂತೆ ಜೀವನ ಮಾಡಬಾರದು ಎಂದು ಹೇಳಿದ ಅವರು, ಶಿಕ್ಷಣವು ವ್ಯಕ್ತಿಯ ಜೀವನದ ದಿಕ್ಕನ್ನು ಬದಲಿಸುವ ಮಹತ್ವದ ಸಾಧನವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣದ ಮಹತ್ವ ಅರಿತು ಭವಿಷ್ಯ ನಿರ್ಮಾಣ ಮಾಡಿಕೊಳ್ಳಬೇಕು ಎಂದರು.
ಅಳವಂಡಿ ಡಿಗ್ರಿ ಕಾಲೇಜಿನ ಪ್ರಾಚಾರ್ಯ ಡಾ. ನಾಗರಾಜ ಹಾವಿನಾಳ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವಿಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸೌಲಭ್ಯಗಳ ಕೊರತೆ ನೆಪವನ್ನಾಗಿಸದೇ ಪರಿಶ್ರಮದ ಮೂಲಕ ಉನ್ನತ ಸ್ಥಾನ ಸಾಧಿಸಬೇಕು ಎಂದರು.ಶಿಕ್ಷಣವು ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲ ಉತ್ತಮ ಸಂಸ್ಕಾರ, ಶಿಸ್ತು ಮತ್ತು ಸಮಾಜದ ಬಗ್ಗೆ ಜವಾಬ್ದಾರಿ ಬೆಳೆಸುವ ಶಕ್ತಿಯಾಗಿದೆ ಎಂದು ಹೇಳಿದ ಅವರು, ವಿದ್ಯಾರ್ಥಿಗಳು ಸಮಯ ಸದುಪಯೋಗಪಡಿಸಿಕೊಂಡು ಗುರಿ ಸಾಧನೆಗೆ ಮುಂದಾಗಬೇಕು ಎಂದರು.
ಕಾಲೇಜು ಪ್ರಾಚಾರ್ಯೆ ವಿದ್ಯಾವತಿ ಎಸ್ ಗೋಟುರು ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಭೋಜರಾಜ, ಉದ್ಯೋಗ ಕೋಶ ಸಂಚಾಲಕ ದುರ್ಗೇಶಪ್ಪ, ಸಾಂಸ್ಕೃತಿಕ ಚಟುವಟಿಕೆಗಳ ಸಂಚಾಲಕ ಅನಿತಾ ಪಾಟೀಲ್ ಹಾಗೂ ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.