ಸಾರಾಂಶ
- ಗೋವಿನಕೋವಿ ಹಾಲಸ್ವಾಮೀಜಿ ಬೃಹನ್ಮಠದ ಧರ್ಮಸಭೆಯಲ್ಲಿ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ
- - -ಕನ್ನಡಪ್ರಭ ವಾರ್ತೆ ನ್ಯಾಮತಿ
ಲೌಕಿಕ ಜೀವನ ಬರೀ ಭೋಗಕ್ಕಾಗಿ. ಆದರೆ ಪಾರಮಾರ್ಥಿಕ ಜೀವನ ಭೋಗ ಮೋಕ್ಷಗಳಿಗಾಗಿ. ಲೌಕಿಕ ಜೀವನ ಅಂಗ, ಪಾರಮಾರ್ಥಿಕ ಜೀವನವೇ ಲಿಂಗ. ಹಾಗಾಗಿ, ಮನುಷ್ಯನ ಜೀವನ ಪಾರಮಾರ್ಥಿಕ ಜೀವನದೆಡೆಗೆ ಸಾಗಿದರೆ ಜೀವನ ಸಾರ್ಥಕ, ಪಾವನವಾಗುತ್ತದೆ ಎಂದು ಕಡೇ ನಂದಿಹಳ್ಳಿ ಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.ತಾಲೂಕಿನ ಗೋವಿನಕೋವಿ ಗ್ರಾಮದ ಶ್ರೀ ಹಾಲಸ್ವಾಮೀಜಿ ಬೃಹನ್ಮಠದಲ್ಲಿ ಬುಧವಾರ ನಡೆದ ಲಿಂಗೈಕ್ಯ ಪೂಜ್ಯತ್ರಯರ ಪುಣ್ಯಾರಾಧನೆ, ಜಂಗಮ ವಟುಗಳ ಶಿವದೀಕ್ಷಾ ಮತ್ತು ಧರ್ಮಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮಾನವ ಜನ್ಮದ ಮಾಂಸಪಿಂಡದ ಶರೀರವನ್ನು ಮಂತ್ರಪಿಂಡವನ್ನಾಗಿ ಪರಿವರ್ತಿಸುವ ಶಕ್ತಿ ಶಿವದೀಕ್ಷಾ ಪಡೆಯುವುದರಿಂದ ಲಭಿಸುತ್ತದೆ. ಗರ್ಭಸಂಸ್ಕಾರ, ಲಿಂಗಧಾರಣೆ ಹಾಗೂ ಲಿಂಗದೀಕ್ಷೆ ಪ್ರತಿಯೊಬ್ಬ ಲಿಂಗಾಯತರಿಗೂ ಅತಿ ಅಗತ್ಯ. ಆದರೆ, ಅನೇಕರು ಇದನ್ನು ಪಾಲಿಸುತ್ತಿಲ್ಲ. ಮಗು 8 ತಿಂಗಳ ಗರ್ಭದಲ್ಲಿ ಇರುವಾಗಲೇ ಗರ್ಭಸಂಸ್ಕಾರ ಮಾಡಬೇಕು. ಇದು ಗರ್ಭದಲ್ಲಿರುವ ಮಗುವಿಗೆ ಇಷ್ಟಲಿಂಗ ನೀಡುವ ಪದ್ಧತಿಯಾಗಿದೆ ಎಂದರು.
ಮಗು ಹುಟ್ಟಿದ ನಂತರ ಲಿಂಗಧಾರಣೆ ಮಾಡುವುದರೊಂದಿಗೆ ನಾಮಕರಣ ಮಾಡುವುದು ವೀರಶೈವ ಲಿಂಗಾಯತರ ಪರಂಪರೆಯಾಗಿದೆ. ಲಿಂಗಧಾರಣೆ ನಂತರ ಲಿಂಗದ ನಂಬಿಕೆ ಮೂಡಿದಾಗ ಲಿಂಗದೀಕ್ಷೆ ಅಗತ್ಯವಾಗಿ ಆಗಬೇಕು. ಆದರೆ, ಇತ್ತೀಚೆಗೆ ಕೇವಲ ಜಂಗಮರು ಲಿಂಗದೀಕ್ಷೆ ಪಡೆಯುತ್ತಿದ್ದು, ಇತರರು ಲಿಂಗದೀಕ್ಷೆ ಪಡೆಯುತ್ತಿಲ್ಲ. ಲಿಂಗದೀಕ್ಷೆಯಿಂದ ನಮ್ಮಲ್ಲಿನ ದೋಷ ದೂರವಾಗುವ ಜೊತೆಗೆ ಅಜ್ಞಾನ ಕಣ್ಮರೆಯಾಗುತ್ತದೆ ಎಂದು ಹೇಳಿದರು.ತಹಸೀಲ್ದಾರ್ ಎಂ.ಪಿ.ಕವಿರಾಜ್ ಧರ್ಮಸಭೆ ಉದ್ಘಾಟಿಸಿ ಮಾತನಾಡಿ, ಆಧುನಿಕ ಸೌಲಭ್ಯಗಳ ಭರಾಟೆಯಲ್ಲಿ ಜನ ಸಮುದಾಯದಲ್ಲಿ ಕೊಂಚ ಧಾರ್ಮಿಕ ಭಾವನೆಗಳು ಇಳಿಮುಖವಾಗುತ್ತಿವೆ. ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನ ಸಮುದಾಯದ ಸಹಭಾಗಿತ್ವ ಕಡಿಮೆಯಾಗುತ್ತದೆ. ಮಕ್ಕಳನ್ನು ಆಧ್ಯಾತ್ಮಿಕ ಶ್ರೇಷ್ಠ ವಿಚಾರಗಳನ್ನು ಕೇಳಲು ಮತ್ತು ಕಲಿಯಲು ಹಬ್ಬಗಳು, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಮಕ್ಕಳನ್ನು ಪೋಷಕರು ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಆಗ ಮಕ್ಕಳಲ್ಲಿ ಸಂಸ್ಕೃತಿ ಬಗ್ಗೆ ತಿಳಿದು, ಸಮಾಜದಲ್ಲಿ ಸುಸಂಕೃತ ಸಚ್ಚಾರಿತ್ರ್ಯವುಳ್ಳ ಪ್ರಜೆಗಳನ್ನಾಗಿಸಿ ಮಕ್ಕಳ ಭವಿಷ್ಯ ಉಜ್ವಲಗೊಳಿಸಬಹುದು ಎಂದು ಹೇಳಿದರು.
ಪೂಜ್ಯತ್ರಯರ ಪುಣ್ಯಾರಾಧನೆ ಧರ್ಮಸಭೆ ಸಾನ್ನಿಧ್ಯ ವಹಿಸಿದ್ದ ಹೊನ್ನಾಳಿ ಹಿರೇಕಲ್ಮಠ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ, ರಾಂಪುರ ಹಾಲಸ್ವಾಮೀಜಿ ಬೃಹನ್ಮಠದ ಶಿವಕುಮಾರ ಶ್ರೀ, ಧರ್ಮಸಭೆಯ ನೇತೃತ್ವ ವಹಿಸಿದ್ದ ಗೋವಿನಕೋವಿ ಹಾಲಸ್ವಾಮಿ ಬೃಹನ್ಮಠದ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಶ್ರೀ, ಕುಂಕುವ ಚರಂತಿ ಮಠದ ರುದ್ರಸ್ವಾಮೀಜಿ, ಬೈರನಹಳ್ಳಿ ಪಂಚಾಕ್ಷರಯ್ಯ, ಸಿದ್ದೇಶ್ವರ, ಮಧು ಮಾತನಾಡಿದರು.ಪುಣ್ಯಾರಾಧನೆ ಅಂಗವಾಗಿ ಬೆಳಗ್ಗೆ ಲಿಂಗೈಕ್ಯ ಶಿವಯೋಗಿ ಹಾಲಸ್ವಾಮಿ, ಶಿವಯೋಗಿ ಮಹಾಲಿಂಗ ಹಾಲಸ್ವಾಮಿ, ಶಿವಯೋಗಿ ಸಣ್ಣಹಾಲಸ್ವಾಮಿಗಳ ಕರ್ತೃಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಂಗಳಾರತಿ ಪೂಜಾ ಕೈಂಕರ್ಯಗಳು ನಡೆದು ಲಿಂ.ಪೂಜ್ಯತ್ರಯರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ವೇದಿಕೆಯಲ್ಲಿ ಕತ್ತಿಗೆ ಮಠದ ಶ್ರೀ ಚನ್ನಪ್ಪ ಸ್ವಾಮೀಜಿ, ಅರಕೆರೆ ವಿರಕ್ತ ಮಠದ ಚನ್ನವೀರ ಸ್ವಾಮೀಜಿ, ದಿಡಗೂರು ಅಣ್ಣಪ್ಪ ಸ್ವಾಮೀಜಿ ಸೇರಿದಂತೆ ಗೋವಿನಕೋವಿ ಹಾಲಸ್ವಾಮೀಜಿ ಮಠದ ಸೇವಾ ಸಮಿತಿಯವರು ಮತ್ತಿತರರಿದ್ದರು.- - -
-ಚಿತ್ರ :ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಹಾಲಸ್ವಾಮೀಜಿ ಬೃಹನ್ಮಠದಲ್ಲಿ ಮಠದ ಲಿಂಗೈಕ್ಯ ಪೂಜ್ಯತ್ರಯರ ಪುಣ್ಯಾರಾಧನೆ ಅಂಗವಾಗಿ ಧರ್ಮಸಭೆ ಕಾರ್ಯಕ್ರಮ ನಡೆಯಿತು. ಶ್ರೀಗಳು, ತಹಸೀಲ್ದಾರ್ ಎಂ.ಪಿ. ಕವಿರಾಜ್ ಹಾಗೂ ಗಣ್ಯರು ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))