ಗದಗ: 12ನೇ ಶತಮಾನದ ಶಿವಶರಣ ಹರಳಯ್ಯ ಹಾಗೂ ಬಸವಣ್ಣನವರ ತತ್ವ ಮತ್ತು ಆದರ್ಶಗಳನ್ನು ಯುವಕರು ಹಾಗೂ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಆದರ್ಶ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ನಗರಸಭೆಯ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ ತಿಳಿಸಿದರು.

ನಗರದ ಲೀಡ್ಕರ್ ಬಡಾವಣೆಯ ಗಂಗಿಮಡಿಯ ಡಿ.ಡಿ. ಚಂದಾವರಿ ಸಭಾಭವನದಲ್ಲಿ ಏರ್ಪಡಿಸಿದ್ದ ಶಿವಶರಣ ಹರಳಯ್ಯನವರ 859ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ನಾಡಿನ ಏಕತೆ ಮತ್ತು ಸಮಾನತೆಗಾಗಿ ಶ್ರಮಿಸಿದ ಹರಳಯ್ಯನವರು ಅಂತರ್ಜಾತಿ ವಿವಾಹದ ಮೂಲಕ ಜಾತಿ ಪದ್ಧತಿಯ ವಿರುದ್ಧ ಹೋರಾಡಿದರು. ಉತ್ತರ ಭಾರತದ ರವಿದಾಸರು ಹಾಗೂ ದಕ್ಷಿಣದ ಹರಳಯ್ಯನವರ ಭಕ್ತಿ ಮತ್ತು ಶ್ರದ್ಧೆ ಇಂದಿನ ಪೀಳಿಗೆಗೆ ದಾರಿದೀಪವಾಗಿದೆ. ಇಂತಹ ಮಹನೀಯರ ಸ್ಮರಣೆಯಿಂದ ಬದುಕು ಹಸನಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾದ್ಯಂತ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾಜದ ಜಿಲ್ಲಾಧ್ಯಕ್ಷ ಅನಿಲ ಮುಳಗುಂದ, ಗೌರವಾಧ್ಯಕ್ಷ ಗುರುನಾಥ ಸರ್ಜಾಪೂರ, ತಾಲೂಕು ಅಧ್ಯಕ್ಷ ಪರಶುರಾಮ ಪೂಜಾರ ಹಾಗೂ ಮಹಿಳಾ ಸಂಘದ ಅಧ್ಯಕ್ಷೆ ಕಲ್ಪನಾ ಹೊನಕೇರಿ ಹರಳಯ್ಯನವರ ಜೀವನ ಚರಿತ್ರೆಯ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಸದಾನಂದ ಸರ್ಜಾಪೂರ, ಮಹೇಶ ಗಡೇದರ, ಪರಶುರಾಮ ಮನಗೋಳಿ, ಪ್ರಕಾಶ ಉಳ್ಳಿಕಾಶಿ, ವಿಕಾಶ ದೊಡ್ಡಮನಿ, ಪ್ರಕಾಶ ಹೊನಕೇರಿ, ದ್ರೌಪತಿ ಗುರ್ಲಗೊಸರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಅಸಂಖ್ಯಾತ ಸಮಾಜದ ಹಿರಿಯರು ಪಾಲ್ಗೊಂಡಿದ್ದರು. ಮಂಜುನಾಥ ದೊಡ್ಡಮನಿ ನಿರೂಪಿಸಿದರು. ವಿಕಾಶ ದೊಡ್ಡಮನಿ ವಂದಿಸಿದರು.