ಸಾರಾಂಶ
ಕುಡಿತವೆಂಬ ಚಟ ಇಡೀ ಬದುಕನ್ನೇ ಸರ್ವನಾಶದತ್ತ ಕೊಂಡೊಯುತ್ತದೆ. ಕುಡಿತಕ್ಕೆ ದಾಸನಾದ ವ್ಯಕ್ತಿ ತನ್ನೆಲ್ಲಾ ಜೀವನದ ಮೌಲ್ಯ ಮರೆತು ಕುಡಿತಕ್ಕೆ ಮಾತ್ರ ಸೀಮಿತನಾಗುತ್ತಾನೆ ಎಂದು ಜಿಲ್ಲಾ ನಿರ್ದೇಶಕ ವಿನಯ್‌ಸುವರ್ಣ ತಿಳಿಸಿದರು.
ಕನ್ನಡಪ್ರಭವಾರ್ತೆ ಚಳ್ಳಕೆರೆ
ಕುಡಿತವೆಂಬ ಚಟ ಇಡೀ ಬದುಕನ್ನೇ ಸರ್ವನಾಶದತ್ತ ಕೊಂಡೊಯುತ್ತದೆ. ಕುಡಿತಕ್ಕೆ ದಾಸನಾದ ವ್ಯಕ್ತಿ ತನ್ನೆಲ್ಲಾ ಜೀವನದ ಮೌಲ್ಯ ಮರೆತು ಕುಡಿತಕ್ಕೆ ಮಾತ್ರ ಸೀಮಿತನಾಗುತ್ತಾನೆ ಎಂದು ಜಿಲ್ಲಾ ನಿರ್ದೇಶಕ ವಿನಯ್‌ಸುವರ್ಣ ತಿಳಿಸಿದರು.ಅವರು, ನಗರದ ಬಸವೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ, ಗಾಂಧಿ ಸ್ಮೃತಿ ಮತ್ತು ವ್ಯಸನ ಮುಕ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕೇವಲ ಪ್ರತಿನಿತ್ಯ ಕುಡಿದು ಅವಾಚ್ಯಶಬ್ದಗಳಿಂದ ಎಲ್ಲರನ್ನೂ ನಿಂದಿಸುವ ಮೂಲಕ ಬೇರೆಯವರ ನೆಮ್ಮದಿಗೂ ಕಂಟಕಪ್ರಾಯನಾಗುತ್ತಾನೆ. ಇಂತಹ ಕುಡಿತದ ಚಟದಿಂದ ಲಕ್ಷಾಂತರ ಜನರನ್ನು ಮದ್ಯಪಾನ ಮುಕ್ತರನ್ನಾಗಿ ಮಾಡಿದ ಕೀರ್ತಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸಲ್ಲುತ್ತದೆ ಎಂದರು.ಕಳೆದ ಹಲವಾರು ವರ್ಷಗಳಿಂದ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವ್ಯಸನ ಮುಕ್ತ ಸಮಾವೇಶದ ಮೂಲಕ ಸಮಾಜಕ್ಕೆ ಕಂಟಕಪ್ರಾಯರಾಗಿ ಕಾಡುವ ಕುಡುಕರಲ್ಲೂ ಜಾಗೃತಿ ಮೂಡಿಸಿ, ಉತ್ತಮ ಬದುಕು ಕಂಡುಕೊಳ್ಳಲು ಸಹಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು.
ಉಪನ್ಯಾಸ ನೀಡಿದ ಬ್ರಹ್ಮಚೈತನ್ಯ ನಾಮಸಾಧನ ಟ್ರಸ್ಟ್ ಅಧ್ಯಕ್ಷ ಪಿ. ರವೀಂದ್ರನಾಥ, ಗಾಂಧೀಜಿಯವರ ತತ್ವಾದರ್ಶಗಳನ್ನು ಯಾರು ತಮ್ಮ ಬದುಕಿನಲ್ಲಿ ರೂಢಿಸಿಕೊಂಡು ಹೋಗುತ್ತಾರೋ ಅವರು ಸಾರ್ಥಕತೆಯತ್ತ ಹೆಜ್ಜೆ ಇಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಕುಡಿತದ ಚಟಕ್ಕೆ ಯುವ ಜನರೂ ಸಹ ಮಾರುಹೋಗುತ್ತಿದ್ದಾರೆ ಎಂದು ವಿಷಾದಿಸಿದರು.ಇದು ಮುಂದಿನ ದಿನಗಳಲ್ಲಿ ಸಮಾಜಕ್ಕೆ ದೊಡ್ಡ ಕಂಟಕವಾಗಿ ಕಾಡುತ್ತದೆ. ಆದ್ದರಿಂದ ಎಲ್ಲರೂ ಸೇರಿ ವ್ಯಸನಮುಕ್ತ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಬೇಕಿದೆ. ಮಹಾತ್ಮ ಗಾಂಧೀಜಿಯವರ ಆದರ್ಶಗಳು ಎಲ್ಲರನ್ನು ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರೇಪಿಸುತ್ತದೆ. ಅವರ ತತ್ವ, ಸಿದ್ಧಾಂತ, ಆಚಾರ, ವಿಚಾರಗಳು ನಮ್ಮಲ್ಲಿ ಉಂಟಾದಾಗ ಮಾತ್ರ ನಾವು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಾಣಿಜ್ಯೋದ್ಯಮಿ ಎನ್.ಟಿ. ಪ್ರಕಾಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜೈತುಂಬಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್, ಬಿ.ಸಿ. ಸಂಜೀವಮೂರ್ತಿ, ಯು.ಎಸ್. ವಿಷ್ಣುಮೂರ್ತಿರಾವ್, ಎಂ.ಎನ್. ಮೃತ್ಯುಂಜಯ, ನೇತಾಜಿ ಪ್ರಸನ್ನ, ಕಿಶೋರ್‌ಶೆಟ್ಟಿ, ಕೆ.ಎಂ. ಜಗದೀಶ್, ಯೋಜನಾಧಿಕಾರಿ ಶಶಿಕಲಾ, ದೊಡ್ಡರಂಗಪ್ಪ, ಕೆ.ಎಂ. ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.