ಮಕ್ಕಳಿಗೆ ಸಂಸ್ಕಾರ ನೀಡಿದರೆ ಜೀವನ ಸುಭದ್ರ: ಶಿವಾನಂದ ಶ್ರೀ

| Published : Jan 03 2025, 12:32 AM IST

ಮಕ್ಕಳಿಗೆ ಸಂಸ್ಕಾರ ನೀಡಿದರೆ ಜೀವನ ಸುಭದ್ರ: ಶಿವಾನಂದ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ಮಕ್ಕಳ ಭವಿಷ್ಯದ ಜೀವನ ಕಷ್ಟಕರವಾಗಿದ್ದು, ಅವರಿಗೆ ಆಯಾ ವಯಸ್ಸಿನಲ್ಲಿ ತಕ್ಕ ಸಂಸ್ಕಾರ ನೀಡಿದರೆ ಜೀವನ ಸುಭದ್ರ ವಾಗಿರಲಿದೆ ಎಂದು ಸೊರಬದ ದೊಡ್ಡತಲಗಡ್ಡೆ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ದೀಪೋತ್ಸವ, ಜನಜಾಗೃತಿ ಧರ್ಮಸಭೆಯಲ್ಲಿ ಆಶೀರ್ವಚನ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮಕ್ಕಳ ಭವಿಷ್ಯದ ಜೀವನ ಕಷ್ಟಕರವಾಗಿದ್ದು, ಅವರಿಗೆ ಆಯಾ ವಯಸ್ಸಿನಲ್ಲಿ ತಕ್ಕ ಸಂಸ್ಕಾರ ನೀಡಿದರೆ ಜೀವನ ಸುಭದ್ರ ವಾಗಿರಲಿದೆ ಎಂದು ಸೊರಬದ ದೊಡ್ಡತಲಗಡ್ಡೆ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ರೇಣುಕನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಬುಧವಾರ ಆಯೋಜಿಸಿದ್ದ ದೀಪೋತ್ಸವ, ಜನಜಾಗೃತಿ ಧರ್ಮಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಕ್ಕಳಿಗೆ ಪೋಷಕರು ಉತ್ತಮ ಶಿಕ್ಷಣ ನೀಡಿದರೆ ಬದುಕಿಗೆ ದಾರಿದೀಪವಾಗಲಿದೆ. ಮಕ್ಕಳಿಗೆ ಸಂಸ್ಕಾರ ನೀಡುವ ಜವಾಬ್ದಾರಿ ಪೋಷಕರ ಮೇಲಿದೆ. ಸಂಸ್ಕಾರ, ಸಂಪ್ರದಾಯಗಳೇ ಜೀವನದ ಭದ್ರ ಬುನಾದಿ. ಯಾವುದೇ ವ್ಯಕ್ತಿಗೆ ಯಾವುದೇ ಸಿದ್ಧಿ ಆಗಬೇಕಾದರೆ ಗುರು ಉಪದೇಶ ಅಗತ್ಯ ಎಂದರು.

ರೇಣುಕನಗರದಲ್ಲಿ ಕಳೆದ 32 ವರ್ಷಗಳಿಂದ ಅಯ್ಯಪ್ಪಸ್ವಾಮಿ ಉತ್ಸವ, ಅನ್ನಸಂತರ್ಪಣೆಯನ್ನು ವಿಜೃಂಭಣೆಯಿಂದ ನಡೆಸಿ ಕೊಂಡು ಬರುತ್ತಿರುವುದು ಶ್ಲಾಘನೀಯ. ಅಯ್ಯಪ್ಪ ವ್ರತಾಚರಣೆಗೆ ಬಹಳ ಮಹತ್ವವಿದ್ದು, ಕಠಿಣ ವ್ರತವಿದ್ದಲ್ಲಿ ಮಾತ್ರ ಪೂಜಾ ಫಲ ಸಿದ್ಧಿಯಾಗಲು ಸಾಧ್ಯ ಎಂದರು.ರಾಜ್ಯ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಮಾಲತೇಶ್ ಸಿಗಸೆ ಮಾತನಾಡಿ, ಇಂದಿನ ಮುಂದುವರೆದ ದಿನಗಳಲ್ಲಿ ಯುವಕರನ್ನು ಪಬ್, ಬಾರುಗಳಲ್ಲಿ ನೋಡಬೇಕಾಗುತ್ತಿರುವುದು ನಮ್ಮ ಬದುಕಿನ ಕಾಲಘಟ್ಟದ ದುರಂತ ಎಂದು ವಿಷಾಧಿಸಿದರು.ಲೌಕಿಕವಾದ ಜಗತ್ತಿನಲ್ಲಿ ಎಲ್ಲ ಆಸೆ, ಆಕಾಂಕ್ಷೆಗಳನ್ನು ಬಿಟ್ಟು ಅಯ್ಯಪ್ಪ ಮಾಲಾಧಾರಣೆ ಮಾಡಿ ಧಾರ್ಮಿಕ ಆಚರಣೆ ಕೈ ಗೊಂಡಾಗ ಮಾತ್ರ ಬದುಕಿಗೆ ಉತ್ತಮ ಅರ್ಥ ದೊರೆಯಲಿದೆ. ಅಯ್ಯಪ್ಪಸ್ವಾಮಿ ಪೂಜೆ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದು, ಜಾತಿ, ಮತ, ಪಂಥದ ಬೇದ ತೊರೆದು ಎಲ್ಲರೂ ಒಗ್ಗೂಡಿ ಪೂಜೆಯಲ್ಲಿ ಪಾಲ್ಗೊಳ್ಳಲು ಅಯ್ಯಪ್ಪ ವೃತ ಪೂರಕ. ವ್ರತಾಚರಣೆ ಸಂದರ್ಭದಲ್ಲಿ ದುರಭ್ಯಾಸಗಳನ್ನು ದೂರ ಮಾಡಿಕೊಂಡು ಅವುಗಳಿಂದ ಮುಕ್ತಿಹೊಂದಲು ಸಹಕಾರಿ ಎಂದರು.ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಆರ್.ಡಿ.ರವೀಂದ್ರ ಮಾತನಾಡಿ, ಸಮಾಜದಲ್ಲಿ ಇಂದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ. ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ನೀಡಿದಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ. ಹಿಂದಿನ ಕಾಲದಲ್ಲಿ ಉತ್ತಮ ಶಿಕ್ಷಣ, ಸಂಸ್ಕಾರ ದೊರೆಯುತಿತ್ತು. ಆದರೆ ಅದು ಇಂದು ಮರೆಯಾಗಿದೆ. ಇಂದಿನ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕಾದ ಜವಾಬ್ದಾರಿ ಶಿಕ್ಷಕರು, ಪೋಷಕರ ಮೇಲಿದೆ. ಈ ನಿಟ್ಟಿನಲ್ಲಿ ಮೌಲ್ಯಯುತ ಶಿಕ್ಷಣದ ಪುಸ್ತಕ ಶಿಕ್ಷಣ ಇಲಾಖೆಯಿಂದ ತಯಾರಾಗುತ್ತಿದೆ. ಮುಂದಿನ ವರ್ಷದಿಂದ ಅದು ಜಾರಿಗೆ ಬರಲಿದೆ.

ವಿದ್ಯಾರ್ಥಿಗಳಿಗೆ ಕೆಲವೇ ದಿನಗಳಲ್ಲಿ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ಪೋಷಕರು ತಮ್ಮ ಮನೆಗಳಲ್ಲಿ ಟಿವಿಗಳನ್ನು ಬಂದ್ ಮಾಡಿ ಮಕ್ಕಳಿಗೆ ಕಲಿಯಲು ಅವಕಾಶ ನೀಡಬೇಕಿದೆ. ಮೊಬೈಲ್‌ಗಳಿಂದಲೂ ದೂರವಿರುವಂತೆ ಮಾಡಬೇಕಿದೆ. ಮಕ್ಕಳ ಕೈಗೆ ಪುಸ್ತಕವನ್ನು ನೀಡಿದರೆ ಮಾತ್ರ ಅವರ ಬದುಕು ಹಸನಾಗಲು ಸಾಧ್ಯವಿದೆ ಎಂದರು.ಚಿತ್ರನಟ ಕಾಫಿ ಗಿರೀಶ್ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಲು ಸವಾಲು, ಕಷ್ಟಗಳೇ ಪ್ರೇರಣೆಯಾಗಲಿದ್ದು, ಕಷ್ಟ ಪಟ್ಟಾಗ ಮಾತ್ರ ಯಾವುದಾದರೂ ಸ್ಥಾನಮಾನ, ಗೌರವ ದೊರೆಯಲು ಸಾಧ್ಯ. ರೇಣುಕನಗರದ ಅಯ್ಯಪ್ಪಸ್ವಾಮಿ ಸಮಿತಿ ಯವರು ಅಚ್ಚುಕಟ್ಟಾಗಿ ಸಂಸ್ಕಾರ, ಸಂಪ್ರದಾಯ ಬದ್ಧವಾಗಿ ಪೂಜಾ ವಿಧಿಗಳನ್ನು 32 ವರ್ಷಗಳಿಂದ ಆಚರಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.ಶಿಕ್ಷಕ ಆರ್.ಡಿ.ರವೀಂದ್ರ ಅವರಿಗೆ ಅಯ್ಯಪ್ಪಸ್ವಾಮಿ ವಿದ್ಯಾರತ್ನ ಪ್ರಶಸ್ತಿ ಹಾಗೂ ನಟ ಕಾಫಿ ಗಿರೀಶ್ ಅವರಿಗೆ ಅಯ್ಯಪ್ಪಸ್ವಾಮಿ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 18ನೇ ವರ್ಷದ ಶಬರಿಮಲೆ ಯಾತ್ರೆ ಕೈಗೊಂಡ ಶಂಕರ ಆಚಾರ್ಯ, ವಾಸು ದೇವ್, ವಿಶ್ವನಾಥ್, ರಾಜೇಶ್ ಹಾಗೂ ವಿವಿಧ ಕ್ರೀಡೆಯಲ್ಲಿ ರಾಷ್ಟ್ರ, ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಸ್ಥಳೀಯ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಆರ್.ಡಿ.ಮಹೇಂದ್ರ, ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್, ಪ್ರಮುಖರಾದ ಎಂ.ಆರ್.ರವೀಂದ್ರ, ಎಂ.ಆರ್.ಬಾಲಕೃಷ್ಣ, ಪ್ರಭಾಕರ್ ಪ್ರಣಸ್ವಿ, ಸುಬ್ರಮಣ್ಯ ಭಟ್, ನಾಗರಾಜ್, ಸಹದೇವ್ ಸಾಗರ್, ಕಮಲಮ್ಮ, ಕುಮಾರ್ ಅಕ್ಷರನಗರ, ನಾಮ ಮಂಜು, ಬಿ.ಜಗದೀಶ್ಚಂದ್ರ, ರವೀಂದ್ರ ಆಚಾರ್ಯ, ಪ್ರಕಾಶ್ ಆಚಾರ್ಯ, ಸಿ.ಎಸ್.ಮಹೇಶ್ಚಂದ್ರ, ಪ್ರಕಾಶ್ ಬನ್ನೂರು, ರುದ್ರಯ್ಯ, ರಾಕೇಶ್ ಮತ್ತಿತರರು ಹಾಜರಿದ್ದರು. ೦೨ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ರೇಣುಕನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ಜನಜಾಗೃತಿ ಧರ್ಮಸಭೆಯಲ್ಲಿ ಚಿತ್ರನಟ ಕಾಫಿ ಗಿರೀಶ್ ಅವರಿಗೆ ಅಯ್ಯಪ್ಪಸ್ವಾಮಿ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಶಿವಾನಂದ ಶಿವಾಚಾರ್ಯರು, ಆರ್.ಡಿ.ಮಹೇಂದ್ರ, ಮಾಲತೇಶ್ ಸಿಗಸೆ, ಪ್ರಭಾಕರ್ ಪ್ರಣಸ್ವಿ, ಆರ್.ಡಿ.ರವೀಂದ್ರ ಇದ್ದರು.