ಸಾರಾಂಶ
ಗದಗ: ಪ್ರತಿಯೊಬ್ಬ ವ್ಯಕ್ತಿ ಭೂಮಿ ಮೇಲೆ ಹುಟ್ಟಿ ಬಂದ ನಂತರ ಪ್ರಯತ್ನ ಮತ್ತು ಪರಿಶ್ರಮ ಮೂಲಕ ಯಾವುದಾದರೂ ಒಂದು ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆ ಮಾಡಬೇಕು ಅಂದಾಗ ಮಾತ್ರ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದು ವಿಪ ಸದಸ್ಯ ಎಸ್.ವಿ.ಸಂಕನೂರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಂಕನೂರ ಅಭಿಮಾನಿ ಬಳಗದ ವತಿಯಿಂದ ಸಾಧಕರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.ಡಾ.ಜಿ.ಬಿ. ಬಿಡನಹಾಳ ಮಾತನಾಡಿ, ತಮಗೆ ಬಂದ ರಾಜ್ಯೋತ್ಸವ ಪ್ರಶಸ್ತಿಯನ್ನು ತಂದೆ ತಾಯಿ ಹಾಗೂ ಕಲಿಸಿದ ಗುರುಗಳಿಗೆ ಅರ್ಪಿಸುವುದಾಗಿ ಹೇಳಿದ ಅವರು, ಈ ಸನ್ಮಾನ ಹೆಚ್ಚಿನ ಸಮಾಜ ಸೇವೆ ಮಾಡಲು ಪ್ರೇರಣೆ ನೀಡಿದಂತಾಗಿದೆ ಎಂದರು.
ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸುರೇಶ ಲಮಾಣಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಸಾಧಕ ಆಗಬೇಕು, ವಿನಃ ಬಾಧಕ ಆಗಬಾರದು ಎಂದರು.ಈ ವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ. ಜಿ.ಬಿ. ಬಿಡನಹಾಳ, ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸುರೇಶ ಟಾಕ್ರೆಪ್ಪ ಲಮಾಣಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ನಿವೃತ್ತ ಪ್ರಾ. ಚಂದ್ರಶೇಖರ ವಸ್ತ್ರದ, ಸಂತ ಕನಕ ಗೌರವ ಪ್ರಶಸ್ತಿ ಪಡೆದ ಡಾ. ಎನ್.ಎಂ. ಅಂಬಲಿ, ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲದಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಡಾ. ಉಮೇಶ ಪುರದ, ೨೦೨೨ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಿ.ಜೆ. ಕುಲಕರ್ಣಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಜಿ. ಡಿಪ್ಲೋಮಾ ಇನ್ ಯೋಗಾದಲ್ಲಿ ಬಂಗಾರದ ಪದಕ ಪಡೆದ ಸುಧಾ ಜಿ.ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಡಾ. ಜಿ.ಬಿ. ಪಾಟೀಲ, ಎಂ.ಸಿ.ಕಟ್ಟಿಮನಿ, ವಿವೇಕಾನಂದಗೌಡ ಪಾಟೀಲ, ವಿ.ಎಂ. ಹಿರೇಮಠ ಹಾಗೂ ಬಿ.ಎಫ್. ಪೂಜಾರ ಮಾತನಾಡಿದರು.ಭೀಮಸಿಂಗ್ ರಾಠೋಡ, ಡಾ.ಬಿ.ಎಲ್.ಚವ್ಹಾಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರಾ. ಅಶೋಕ ಅಂಗಡಿ ನಿರೂಪಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಎನ್.ವಿ. ಜೋಷಿ ವಂದಿಸಿದರು.