ವಿದ್ಯಾರ್ಥಿಗಳು ನಾಳಿನ ಸುಖಮಯ ಜೀವನ ಅನುಭವಿಸಬೇಕೆಂದಿದ್ದರೆ, ಇಂದು ಕಷ್ಟದ ದಿನ ಕಳೆಯಲೇಬೇಕು

ಕೊಪ್ಪಳ: ವಿದ್ಯಾರ್ಥಿಗಳು ಸಮಸ್ಯೆ ಮೆಟ್ಟಿ ನಿಲ್ಲಬೇಕು, ಪರೀಕ್ಷೆಗಳಿರಲಿ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ಭಯಪಡಬಾರದು ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ಮ್ಯಾನೇಜರ್ ಹನುಮೇಶ ಗುನ್ನಳ್ಳಿ ಹೇಳಿದರು.

ಅವರು ನಗರದ ಶ್ರೀಗವಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ಮರಿಶಾಂತವೀರ ಮಹಾಸ್ವಾಮೀಜಿ ಪದವಿ ಪೂರ್ವ ಕಾಲೇಜುಗಳ ವಾಣಿಜ್ಯ ವಿಭಾಗದ ಕ್ಯಾಲಿರ್ಸ್‌ ಕ್ಲಬ್ ವತಿಯಿಂದ ನಡೆದ ಸಂಸ್ಕೃತಿ ಪರ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ನಾಳಿನ ಸುಖಮಯ ಜೀವನ ಅನುಭವಿಸಬೇಕೆಂದಿದ್ದರೆ, ಇಂದು ಕಷ್ಟದ ದಿನ ಕಳೆಯಲೇಬೇಕು, ಮೊದಲು ತಂದೆ ತಾಯಿಗಳ ಕಷ್ಟದ ಬದುಕನ್ನು ಅರ್ಥೈಸಿಕೊಂಡು ಅಭ್ಯಾಸ ಮಾಡಿದಲ್ಲಿ ಉಜ್ವಲ ಭವಿಷ್ಯ ದೊರೆಯುತ್ತದೆ ಎಂದರು.

ಭಾರತೀಯ ಸ್ಟೇಟ್ ಬ್ಯಾಂಕ್‌ನ ಚೀಫ್ ಮ್ಯಾನೇಜರ್ ಕುರುವಾ ಪೆದ್ದವೀರೇಶರವರ ಮಾತನಾಡಿ, ವಿದ್ಯಾರ್ಥಿಗಳು ಇಂದು ಸ್ಪರ್ಧಾ ಯುಗದಲ್ಲಿದ್ದಾರೆ. ಅದನ್ನು ಕರಗತ ಮಾಡಿಕೊಂಡು ಹೆಚ್ಚೆಚ್ಚು ಅಧ್ಯಾಯನ ಮಾಡಬೇಕೆಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಪನ್ಯಾಸಕ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್‌ ಮಾತನಾಡಿ, ವಾಣಿಜ್ಯ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ವಿಫುಲವಾಗಿವೆ. ಕೊಪ್ಪಳದಲ್ಲಿ ಕಂಪನಿ-ಕಾರ್ಖಾನೆಗಳು ಹೆಚ್ಚಿರುವುದರಿಂದ ವಿಫುಲ ಅವಕಾಶಗಳಿವೆ, ಅವುಗಳ ಸದುಪಯೋಗ ಪಡೆದುಕೊಳ್ಳಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಅಗಸ್ಟಿನ್‌ ವಿದ್ಯಾರ್ಥಿಗಳು ಶಾಲೆ, ಶಿಕ್ಷಕ ಮತ್ತು ಪರಿಸರ ಗೌರವಿಸಬೇಕು, ಆಗ ಮಾತ್ರ ಒಳ್ಳೆಯ ಸಂಸ್ಕಾರ ಮತ್ತು ಭವಿಷ್ಯ ದೊರೆಯುತ್ತದೆ ಎಂದರು.

ವೇದಿಕೆಯ ಮೇಲೆ ಉಪಪ್ರಾಚಾರ್ಯ ಬಿ.ಎನ್.ಶಿವಯ್ಯ, ವಾಣಿಜ್ಯ ವಿಭಾಗದ ಮುಖ್ಯಸ್ಥ ಕಮಲಾ ಅಳವಂಡಿ ಮತ್ತು ಉಪನ್ಯಾಸಕ ಅಶೋಕ ಓಜಿನಹಳ್ಳಿ, ಪದ್ಮಾವತಿ ಪಾಟೀಲ್, ಗೀತಾ, ಗುರುರಾಜ ವೈ.ಜಿ ಮುಂತಾದವರು ಉಪಸ್ಥಿತರಿದ್ದರು.

ಅನಿತಾ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮಕ್ಕೆ ನಮ್ರತಾ ಸ್ವಾಗತಿಸಿದರೆ ಕೊನೆಗೆ ತನಿಷಾ ವಂದಿಸಿದರು.