ಹದಿಹರೆಯದ ಹೆಣ್ಣುಮಕ್ಕಳ ಯೋಗಕ್ಷೇಮಕ್ಕೆ ಪ್ರಾಣಸಖಿ ನೆರವು: ಜಿಲ್ಲಾಧಿಕಾರಿ ಶಿಲ್ಪಾ ನಾಗ್

| Published : Nov 04 2025, 12:30 AM IST

ಹದಿಹರೆಯದ ಹೆಣ್ಣುಮಕ್ಕಳ ಯೋಗಕ್ಷೇಮಕ್ಕೆ ಪ್ರಾಣಸಖಿ ನೆರವು: ಜಿಲ್ಲಾಧಿಕಾರಿ ಶಿಲ್ಪಾ ನಾಗ್
Share this Article
  • FB
  • TW
  • Linkdin
  • Email

ಸಾರಾಂಶ

ನರೇಗಾ, ಸ್ವಚ್ಛ ಭಾರತ್ ಮಿಷನ್ ಸೇರಿದಂತೆ ಇತರೆ ಯೋಜನೆಗಳಡಿ ಎಲ್ಲಾ ಶಾಲೆಗಳಲ್ಲಿಯೂ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಆದರೂ ಕೆಲ ಶಾಲೆಗಳಲ್ಲಿ ನೀರಿನ ಸಮಸ್ಯೆ ಇದೆ. ಹಾಸ್ಟೆಲ್‌ಗಳಲ್ಲಿ ಓದುವ ಕೆಲ ಹೆಣ್ಣುಮಕ್ಕಳಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ತಾಯಿ ಇರುವುದಿಲ್ಲ. ಪ್ರಾಣಸಖಿ ಎಂದರೆ ಪ್ರಾಣ ಸ್ನೇಹಿತೆ ಎಂದರ್ಥ. ನರೇಗಾ, ಸ್ವಚ್ಛ ಭಾರತ್ ಮಿಷನ್ ಸೇರಿದಂತೆ ಇತರೆ ಯೋಜನೆಗಳಡಿ ಎಲ್ಲಾ ಶಾಲೆಗಳಲ್ಲಿಯೂ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಆದರೂ ಕೆಲ ಶಾಲೆಗಳಲ್ಲಿ ನೀರಿನ ಸಮಸ್ಯೆ ಇದೆ. ಹಾಸ್ಟೆಲ್‌ಗಳಲ್ಲಿ ಓದುವ ಕೆಲ ಹೆಣ್ಣುಮಕ್ಕಳಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ತಾಯಿ ಇರುವುದಿಲ್ಲ. ಪ್ರಾಣಸಖಿ ಎಂದರೆ ಪ್ರಾಣ ಸ್ನೇಹಿತೆ ಎಂದರ್ಥ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯಲ್ಲಿ ಹದಿಹರೆಯದ ಹೆಣ್ಣುಮಕ್ಕಳ ಆರೋಗ್ಯ, ಶಿಕ್ಷಣ, ಮಾರ್ಗದರ್ಶನ, ಅಪೌಷ್ಟಿಕತೆಯಲ್ಲಿ ಸುಧಾರಣೆ, ಆತ್ಮವಿಶ್ವಾಸ ಸಬಲೀಕರಣ ಹಾಗೂ ಸಮಗ್ರ ಯೋಗಕ್ಷೇಮಕ್ಕೆ ‘ಪ್ರಾಣಸಖಿ’ ಕಾರ್ಯಕ್ರಮ ನೆರವಾಗಲಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಹಳೆ ಕೆ.ಡಿ.ಪಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತದ ನೇತೃತ್ವದಲ್ಲಿ ಜಿಪಂ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ಜಂಟಿ ಸಹಯೋಗದಲ್ಲಿ ಅನುಷ್ಠಾನಗೊಳಿಸುತ್ತಿರುವ ಪ್ರಾಣಸಖಿ ಕಾರ್ಯಕ್ರಮ ಕುರಿತು ವಿವಿಧ ಶಾಲಾ ಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ೧೦ರಿಂದ ೧೯ರ ವಯೋಮಾನದ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಆರೋಗ್ಯ ಕುರಿತ ಸೀಮಿತ ಅರಿವು, ಪೌಷ್ಟಿಕಾಂಶದ ತಿಳಿವಳಿಕೆಯ ಕೊರತೆ, ಬಾಲ್ಯವಿವಾಹದ ಒತ್ತಡ ಹಾಗೂ ತಮ್ಮ ಭಾವನೆಗಳನ್ನು ಸುರಕ್ಷಿತವಾಗಿ ಅಭಿವ್ಯಕ್ತಪಡಿಸಲು ಅವಕಾಶಗಳ ಸವಾಲನ್ನು ಎದುರಿಸುತ್ತಿರುವುದು ಕಂಡುಬಂದಿದೆ. ಪ್ರಾಣಸಖಿ ಕಾರ್ಯಕ್ರಮವು ಈ ಅಂತರವನ್ನು ಕಡಿಮೆ ಮಾಡಿ ಸಮಗ್ರ ಹಾಗೂ ಮಾನವ ಕೇಂದ್ರಿತ ವಿಧಾನಗಳ ಮೂಲಕ ಸಮಸ್ಯೆಗಳನ್ನು ನಿವಾರಿಸಲು ಸಹಾಯಕವಾಗಲಿದೆ ಎಂದರು.

ಹೆಣ್ಣುಮಕ್ಕಳಿಗೆ ಸರಿಯಾದ ಮಾರ್ಗದರ್ಶನದಿಂದ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಹದಿಹರೆಯವು ನಿರ್ಣಾಯಕ ಹಂತವಾಗಿದೆ. ಶಾಲೆಗಳಲ್ಲಿ ಸುರಕ್ಷಿತ ಹಾಗೂ ಪೂರಕ ವಾತಾವರಣ ಒದಗಿಸಿ ಅವರ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದ ಜ್ಞಾನ, ಕೌಶಲ ಮತ್ತು ಆತ್ಮವಿಶ್ವಾಸ ವೃದ್ಧಿಗೆ ಪ್ರಾಣಸಖಿ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ವಾರಕ್ಕೊಮ್ಮೆ ಒಂದು ಗಂಟೆ ಶಾಲಾ ಅವಧಿಯಲ್ಲಿ ತರಬೇತಿ ಪಡೆದ ಶಿಕ್ಷಕರು ಮಕ್ಕಳಿಗೆ ಸಂವಾದಾತ್ಮಕ ಪಾತ್ರಾಭಿನಯ, ಚಿತ್ರಕಲೆ ಇನ್ನಿತರ ಚಟುವಟಿಕೆಗಳ ಮೂಲಕ ಪೌಷ್ಟಿಕತೆ, ಮಾನಸಿಕ, ದೈಹಿಕ ಆರೋಗ್ಯ, ಮುಟ್ಟಿನ ನೈರ್ಮಲ್ಯ, ಜೀವನ ಕೌಶಲ್ಯಗಳ ಕುರಿತು ಮುಕ್ತ ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲು ಅವರು ಸಲಹೆ ಮಾಡಿದರು.

ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಆಗಾಗ್ಗೆ ಕಂಡುಬರುತ್ತಿದ್ದು, ಕಳೆದ ವರ್ಷ ೯೭ ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಹೆಣ್ಣು ಮಕ್ಕಳು ೨೦ರ ನಂತರ ಮದುವೆಯಾಗುವ ನಿರ್ಧಾರ ಮಾಡಬೇಕು. ಬಾಲ್ಯವಿವಾಹದಿಂದ ಕಡಿಮೆ ತೂಕದ ಮಕ್ಕಳ ಜನನ, ಅಪೌಷ್ಟಿಕತೆ ಕಾಡಲಿದೆ. ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಾಕಷ್ಟು ಸಮಸ್ಯೆಗಳನ್ನು ಗುರುತಿಸಿದ್ದೇನೆ. ಈ ಎಲ್ಲಾ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲು ಮುಂದಾಗಲಾಗಿದೆ. ಯಾವುದೇ ಸಮಸ್ಯೆ ನಿವಾರಿಸಲು ಜೀವನದಲ್ಲಿ ಗುರಿ ಹೊಂದಬೇಕು. ಸರ್ಕಾರಿ ಸೇವೆ ಮಾಡುವ ಅವಕಾಶ ನಮ್ಮೆಲ್ಲರಿಗೂ ದೊರೆತಿದೆ. ಆದ್ದರಿಂದ ಒಂದಷ್ಟು ಜನರಿಗೆ ಒಳ್ಳೆಯದಾಗಬೇಕು, ಬದಲಾವಣೆಯತ್ತ ಗಮನ ಹರಿಸಬೇಕು ಎಂದರು.

ನರೇಗಾ, ಸ್ವಚ್ಛ ಭಾರತ್ ಮಿಷನ್ ಸೇರಿದಂತೆ ಇತರೆ ಯೋಜನೆಗಳಡಿ ಎಲ್ಲಾ ಶಾಲೆಗಳಲ್ಲಿಯೂ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಆದರೂ ಕೆಲ ಶಾಲೆಗಳಲ್ಲಿ ನೀರಿನ ಸಮಸ್ಯೆ ಇದೆ. ಹಾಸ್ಟೆಲ್‌ಗಳಲ್ಲಿ ಓದುವ ಕೆಲ ಹೆಣ್ಣುಮಕ್ಕಳಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ತಾಯಿ ಇರುವುದಿಲ್ಲ. ಪ್ರಾಣಸಖಿ ಎಂದರೆ ಪ್ರಾಣ ಸ್ನೇಹಿತೆ ಎಂದರ್ಥ. ಮಹಿಳಾ ಶಿಕ್ಷಕರೇ ಮಕ್ಕಳಿಗೆ ಸ್ನೇಹಿತರಾಗುವ ಮೂಲಕ ಮಕ್ಕಳಿಗೆ ತಂದೆ- ತಾಯಿಯಾಗಬೇಕು. ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಬೇಕು. ಅದಕ್ಕಾಗಿ ಈಗಿನಿಂದಲೇ ಶಿಕ್ಷಕರು ಪರಿಶ್ರಮ ಹಾಕಬೇಕು. ಕಾರ್ಯಕ್ರಮದಿಂದ ಸಾಕಷ್ಟು ಹೆಣ್ಣುಮಕ್ಕಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಆರು ತಿಂಗಳಿನಿಂದ ೬ ವರ್ಷದ ಅಂಗನವಾಡಿ ಮಕ್ಕಳ ವಾಕ್ ಮತ್ತು ಶ್ರವಣ ಸಮಸ್ಯೆ ಗುರುತಿಸಿ ಪರಿಹರಿಸುವ ಸಲುವಾಗಿ ಇಡೀ ರಾಜ್ಯದಲ್ಲಿಯೇ ಮೊದಲಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ‘ಪ್ರಯಾಸ್’ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ಪ್ರಾಣಸಖಿಯೂ ಯಶಸ್ವಿಯಾಗಬೇಕು. ಪ್ರಯಾಸ್ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಕಿವಿ, ಮಾತಿನ ದೋಷವುಳ್ಳ ೩೭ ಸಾವಿರ ಮಕ್ಕಳನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಈ ಪೈಕಿ ೧೬ ಸಾವಿರ ಮಕ್ಕಳಿಗೆ ಸಮಸ್ಯೆ ಇರುವುದು ತಿಳಿದುಬಂದಿದೆ. ಕಳೆದ ವಾರ ಗುಂಡ್ಲುಪೇಟೆ ತಾಲೂಕಿನಲ್ಲಿ ಸ್ಕ್ರೀನಿಂಗ್ ಆರಂಭಿಸಲಾಗಿದ್ದು, ಫೆಬ್ರವರಿ ೨೦೨೬ರೊಳಗೆ ಶ್ರವಣ, ವಾಕ್ ದೋಷ ಮುಕ್ತ ಜಿಲ್ಲೆಯಾಗಿಸಲು ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು. ಇದೇ ವೇಳೆ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಜಾನ್ ಶಾಂತಕುಮಾರ್ ಅವರು ಪಿ.ಪಿ.ಟಿ ಹಾಗೂ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಪ್ರಾಣಸಖಿ ಕಾರ್ಯಕ್ರಮದ ಕುರಿತು ಸಮಗ್ರ ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಕಾಂತ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಐಎಚ್ ಸಿಆರ್ ಎಫ್ ಸಂಸ್ಥೆಯ ಮಲ್ಲಿಕಾರ್ಜುನ, ವಿಘ್ನೇಶ್, ಕಾರ್ತಿಕೇಯ ಗೋಪಿನಾಥನ್, ಪಲ್ಲವಿ, ಧನಲಕ್ಷ್ಮೀ, ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

--

‘ಪ್ರಾಣಸಖಿ ಕಾರ್ಯಕ್ರಮ ಅನುಷ್ಠಾನದಿಂದ ಶಾಲೆಗಳಲ್ಲಿ ನಿರ್ಮಿಸಲಾದ ಸುರಕ್ಷಿತ ಸ್ಥಳಗಳಲ್ಲಿ ಹದಿಹರೆಯದ ಬಾಲಕಿಯರಿಗೆ ಮುಟ್ಟಿನ ನೈರ್ಮಲ್ಯ, ವಿಶ್ರಾಂತಿ, ಆರೋಗ್ಯ ಸಂಬಂಧಿತ ಮಾಹಿತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಶಾಲೆಗಳು, ವಿದ್ಯಾರ್ಥಿ ನಿಲಯಗಳಲ್ಲಿ ಶುಚಿ ಪ್ಯಾಡ್ ಒದಗಿಸಲಾಗುತ್ತದೆ. ಮುಟ್ಟಿನ ದಿನಗಳಲ್ಲಿ ಹೆಣ್ಣುಮಕ್ಕಳು ೪- ೫ ದಿನ ಶಾಲೆಗೆ ಗೈರಾಗುತ್ತಾರೆ. ಇದರಿಂದ ಶಾಲಾ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳ ಭಾಗವಹಿಸುವಿಕೆ ಕುಂಠಿತವಾಗಿ ಕಲಿಕೆಗೆ ತೊಂದರೆಯಾಗಲಿದೆ. ಹೆಣ್ಣುಮಕ್ಕಳು ಪ್ರತಿದಿನವು ಶಾಲೆಗೆ ಬರುವಂತಾಗಬೇಕು. ಪ್ರಾಣಸಖಿ ಕಾರ್ಯಕ್ರಮದಿಂದ ನೈರ್ಮಲ್ಯ ಅಭ್ಯಾಸಗಳ ಅರಿವಿನಿಂದ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗಲಿದೆ.’

ಶಿಲ್ಪಾ ನಾಗ್, ಜಿಲ್ಲಾಧಿಕಾರಿ