ದುರಾದೃಷ್ಟಕ್ಕೆ ಅಳವಡಿಸಿದ ಬ್ರೇಕ್ ಡ್ಯಾನ್ಸ್ ಹತ್ತಿ ಮನೋರಂಜಿಸಲು ಒಬ್ಬರೂ ಅತ್ತ ಕಡೆ ಸುಳಿದಿಲ್ಲ
ಪ್ರಲ್ಹಾದರೆಡ್ಡಿ ಮಾದಿನಾಳ ಕನಕಗಿರಿ
ಭಾವೈಕ್ಯತೆಯ ಮೊಹರಂನಲ್ಲಿ ಜನರಿಗೆ ಮನೋರಂಜನೆ ನೀಡುವುದರ ಜತೆಗೆ ದುಡಿಯಲು ಮಗ, ಸೊಸೆ, ಮೊಮ್ಮಕ್ಕಳೊಂದಿಗೆ ಲಕ್ಷಾಂತರ ಬೆಲೆಯ ಬ್ರೇಕ್ ಡ್ಯಾನ್ಸ್ ಸಾಮಾನುಗಳೊಂದಿಗೆ ಕಳೆದ ಒಂದೂವರೆ ತಿಂಗಳ ಹಿಂದೆ ಪಟ್ಟಣಕ್ಕೆ ಬಂದಿದ್ದ ವಿಜಯಪುರದ ವೃದ್ಧೆಯ ಕುಟುಂಬವೊಂದು ಕೆಲಸವಿಲ್ಲದೇ ಪರದಾಡುತ್ತಿದೆ.ವಿಜಯಪುರ ಜಿಲ್ಲೆಯ ಚಡಚಣ ಪಕ್ಕದ ಗ್ರಾಮವೊಂದರ ಭಾಗ್ಯಮ್ಮಳ ಕುಟುಂಬ ಈ ರೀತಿ ಪಟ್ಟಣಕ್ಕೆ ಆಗಮಿಸಿ ಸುಮಾರು ಎರಡು ತಿಂಗಳಿಂದ ಕೆಲಸವಿಲ್ಲದೆ ಕುಳಿತಿದೆ. ಈ ಕುಟುಂಬಕ್ಕೆ ಜಾತ್ರೆ, ಉತ್ಸವ ಹಾಗೂ ಎಕ್ಸಿಬಿಷನ್‌ಗಳಲ್ಲಿ ಜನರಿಗೆ ಮನೋರಂಜನೆ ನೀಡುವ ಬ್ರೇಕ್ ಡ್ಯಾನ್ಸ್ ಜೀವನಾಧಾರವಾಗಿದೆ. ಪಟ್ಟಣದಲ್ಲಿ ನಡೆಯುವ ಮೋಹರಂನಲ್ಲಿ ಅತೀ ಹೆಚ್ಚು ಜನ ಸೇರಲಿದ್ದು, ಉತ್ತಮ ದುಡಿಮೆ ಮಾಡಿಕೊಳ್ಳಬಹುದು ಎಂದು ಲಕ್ಷಾಂತರ ಬೆಲೆ ಬಾಳುವ ಸಾಮಗ್ರಿಗಳನ್ನು ಎರಡ್ಮೂರು ಲಾರಿಗಳಲ್ಲಿ ತಂದು ಇಲ್ಲಿನ ಕನಕಾಚಲ ದೇವಸ್ಥಾನ ವ್ಯಾಪ್ತಿಯ ತಾಪಂ ಬಳಿಯ ದೊಡ್ಡದಾದ ಬಯಲಿನಲ್ಲಿ ಅಳವಡಿಸಿದ್ದಾರೆ.
ಆದರೆ, ಅವರ ದುರಾದೃಷ್ಟಕ್ಕೆ ಅಳವಡಿಸಿದ ಬ್ರೇಕ್ ಡ್ಯಾನ್ಸ್ ಹತ್ತಿ ಮನೋರಂಜಿಸಲು ಒಬ್ಬರೂ ಅತ್ತ ಕಡೆ ಸುಳಿದಿಲ್ಲ. ಇದರಿಂದ ಅಳವಡಿಸಿದ ಬೃಹತ್ ಯಂತ್ರಗಳು ಒಂದು ದಿನವೂ ಆರಂಭಗೊಂಡಿಲ್ಲ. ಇದರಿಂದ ಸಾವಿರಾರು ರು. ಖರ್ಚು ಮಾಡಿ ತಂದ ಬಾಡಿಗೆ ಹಣಕ್ಕೂ ಸಂಕಷ್ಟ ಎದುರಾಗಿದೆ. ಅಲ್ಲದೇ ತುಂಬು ಕುಟುಂಬ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಬೇರೆಡೆಗೆ ತೆರಳಬೇಕೆಂದರೆ ಈ ವರ್ಷ ಅಧಿಕವಿದ್ದರಿಂದ ಎರಡು ತಿಂಗಳು ಆಷಾಢವಿದೆ. ಈ ವೇಳೆಯಲ್ಲಿ ಜಾತ್ರೆ, ಉತ್ಸವಗಳು ನಡೆಯುವುದಿಲ್ಲ. ಶ್ರಾವಣ ಮಾಸದಲ್ಲಿಯೂ ಬ್ರೇಕ್ ಡ್ಯಾನ್ಸ್ ನಡೆಸುವಷ್ಟು ದೊಡ್ಡ ಜಾತ್ರೆ, ಉತ್ಸವಗಳು ಇಲ್ಲವಾಗಿದ್ದು, ದುಡಿಮೆ ಇಲ್ಲದಂತಾಗಿದೆ. ಮಳೆ ಗಾಳಿಯಿಂದ ಸಾಮಾನುಗಳು ಹಾಳಾಗದಂತೆ ನೋಡಿಕೊಳ್ಳಲು ಅನಿವಾರ್ಯವಾಗಿ ಅಳವಡಿಸಿದ್ದರಲ್ಲಿ ಕೆಲವಷ್ಟನ್ನು ಬಿಚ್ಚಿಟ್ಟಿದ್ದಾರೆ.ಭಾವುಕಳಾದ ಭಾಗ್ಯಮ್ಮ: ಪ್ರತಿ ವರ್ಷ ಮಾರ್ಚ್- ಏಪ್ರಿಲ್ ವೇಳೆ ನಡೆಯುವ ಇಲ್ಲಿನ ಪ್ರಸಿದ್ಧ ಶ್ರೀಕನಕಾಚಲಪತಿಯ ಜಾತ್ರೆಯಲ್ಲಿ ಮನೋರಂಜನೆ ನೀಡಲು ಬಂದಿದ್ದ ಈ ಭಾಗ್ಯಮ್ಮ ಕುಟುಂಬ ಸೇರಿ ಇವರ ಸಂಬಂಧಿಕರ ನಾಲ್ಕೈದು ಕುಟುಂಬಗಳು ೨೦೨೦ರಲ್ಲಿ ಇಡೀ ಪ್ರಪಂಚವನ್ನೇ ಕಾಡಿದ ಕೊರೋನಾ ಲಾಕ್‌ಡೌನ್‌ನಲ್ಲಿ ಇಲ್ಲಿಯೇ ಸಿಲುಕಿಕೊಂಡಿದ್ದವು. ಜಾತ್ರೆಯೂ ಇಲ್ಲದೇ ದುಡಿಮೆಯೂ ಇಲ್ಲದೇ ಬೇರೆಡೆಗೂ ತೆರಳಲು ಅವಕಾಶವಿಲ್ಲದಿದ್ದರಿಂದ ಸುಮಾರು ಐದಾರು ತಿಂಗಳು ಈ ಕುಟುಂಬಗಳು ನೆಲೆಯೂರಿದ್ದವು. ಆಗ ಇಲ್ಲಿನ ಜನ ಆಹಾರ ಪದಾರ್ಥ ನೀಡಿದ್ದರು. ನಮಗೂ ಗೊತ್ತಿಲ್ಲದಿದ್ದರೂ ಸಣ್ಣ ಪುಟ್ಟ ಕೆಲಸಕ್ಕೆ ಕರೆದುಕೊಂಡು ಮಾನವೀಯತೆ ಮೆರೆದದ್ದನ್ನು ಭಾಗ್ಯಮ್ಮ ನೆನಪಿಸಿಕೊಂಡರು. ಆದರೆ, ಆಗ ಎಲ್ಲಿ ಓಡಾಡಲು ಅವಕಾಶವಿರಲಿಲ್ಲ. ಇದೀಗ ಎಲ್ಲ ಇದ್ದರೂ ಕೆಲಸವಿಲ್ಲದೇ ಹೊತ್ತು ಕಳೆಯುವುದು ಕಷ್ಟವಾಗಿದೆ ಎಂದು ಭಾಗ್ಯಮ್ಮ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದಳು.
ಮೋಹರಂ ಹಬ್ಬದಲ್ಲಿ ದುಡಿಯಬಹುದು ಎಂದು ಬಂದು ಎರಡು ತಿಂಗಳಾಗಿದೆ. ಕೆಲಸವಿಲ್ಲದಿದ್ದರಿಂದ ಖಾಲಿ ಕುಳಿತಿದ್ದೇವೆ. ಇಲ್ಲಿ ಇರಲಿಕ್ಕೆ ಎಲ್ಲ ವ್ಯವಸ್ಥೆಯಿದೆ. ಆದರೆ, ಜೀವನ ನಡೆಸುವುದು ಕಷ್ಟಕರವಾಗಿದೆ. ಬೇರೆ ಕೆಲಸ ನಮಗೆ ಬರುವುದಿಲ್ಲ. ದಿನ ಊಟ, ನಿದ್ರೆ ಮಾಡಿ ಹೊತ್ತು ಕಳೆಯಬೇಕಾಗಿದೆ. ಬೇರೆಡೆ ಹೋಗಲು ಕಾರ್ಯಕ್ರಮ ಹುಡುಕುತ್ತಿದ್ದಾರೆ ಎಂದು ವೃದ್ಧೆ ಭಾಗ್ಯಮ್ಮ ತಿಳಿಸಿದ್ದಾರೆ.