ಸಾಂಸ್ಕೃತಿಕ ಶ್ರೀಮಂತಿಕೆ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಡಬೇಕು

| Published : Apr 30 2024, 02:07 AM IST

ಸಾಂಸ್ಕೃತಿಕ ಶ್ರೀಮಂತಿಕೆ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಡಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಸಾಂಸ್ಕೃತಿಕ ಶ್ರೀಮಂತಿಕೆಯ ನೆಲೆಗಟ್ಟಿನಲ್ಲಿ ಬದುಕನ್ನು ಕಟ್ಟಿಕೊಡಬೇಕು ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಹೊಸದುರ್ಗ: ಮಕ್ಕಳಿಗೆ ಸಾಂಸ್ಕೃತಿಕ ಶ್ರೀಮಂತಿಕೆಯ ನೆಲೆಗಟ್ಟಿನಲ್ಲಿ ಬದುಕನ್ನು ಕಟ್ಟಿಕೊಡಬೇಕು ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಎಸ್.ಎಸ್ ರಂಗಮಂದಿರದಲ್ಲಿ ಆಯೋಜಿಸಿದ್ದ ಮಕ್ಕಳ ಹಬ್ಬ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

ಮಕ್ಕಳು ಸದಾ ಲವಲವಿಕೆಯಿಂದ, ಚಟುವಟಿಕೆಯಿಂದ ಅನೇಕ ಪ್ರಶ್ನೆಗಳನ್ನು ಕೇಳುವರು. ಮಕ್ಕಳ ಜೀವನ ಸೌಭಾಗ್ಯ. ಮನುಷ್ಯ ಯಾವಾಗಲೂ ಮಗುವಾಗಿರಬೇಕು. ಮಗುವಿನ ಮುದ್ಧತೆ ಇದ್ದರೆ ಬದುಕಿನಲ್ಲಿ ಸಂತೋಷ ಕಾಣಬಹುದು. ಮಕ್ಕಳ ಮನಸ್ಸು ಹಸಿ ಗೋಡೆ ಇದ್ದಂತೆ. ಅವರಿಗೆ ಏನೇ ವಿಷಯ ಕಲಿಸಿದರೂ ತಕ್ಷಣ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಎಂತಹ ವಿಷಯಗಳನ್ನು ಬಿತ್ತಬೇಕು ಎನ್ನುವ ಅರಿವು ಬಿತ್ತುವಂಥವರಿಗೆ ಇರಬೇಕು ಎಂದರು.

ಪ್ರೊ.ಚಂದ್ರಶೇಖರ್ ಮಾತನಾಡಿ, ಮಕ್ಕಳ ಪ್ರತಿಭೆಗೆ ನೀರೆರೆದು ಅದನ್ನು ಪೋಷಣೆ ಮಾಡುತ್ತಿರುವ ಸಾಣೇಹಳ್ಳಿ ಶ್ರೀಗಳು ಹಾಗೂ ಶ್ರೀಮಠ ಸಾಧನೆಗೆ ಯಾವುದೇ ಮಿತಿ ಇಲ್ಲ. ಅದು ಸಾಧಕನ ಸ್ವತ್ತು. ಮಕ್ಕಳನ್ನು ಪ್ರೀತಿಸಬೇಕು. ಅವರ ತುಂಟತವನ್ನು ನೋಡಿ ಸಂತೋಷ ಪಡಬೇಕು. ಬುದ್ಧಿವಂತರಿಗಿಂತ ಹೃದಯವಂತರು ಬೇಕು. ಹೃದಯವಂತಿಕೆ ಕಲೆಗಳ ಮೂಲಕ ಲಭಿಸುತ್ತದೆ. ಬರೀ ಓದುತ್ತಾ ಹೋದರೆ ಯಾಂತ್ರಿಕ ವ್ಯಕ್ತಿಯಾಗುವರು ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಿ.ಭರತ್, ಎಲ್ಲಾ ಪೋಷಕರು ಚಿಕ್ಕಮಕ್ಕಳು ಹೇಗೆ ಯೋಚನೆ ಮಾಡಬೇಕು ಎನ್ನುವುದು ಕಲಿಸಿಕೊಡಬೇಕು. ಆಗ ಮಗುಮುಂದೆ ಅಂದುಕೊಂಡ ಸಾಧನೆಯನ್ನು ಮಾಡಲಿಕ್ಕೆ ಸಾಧ್ಯ. ಮಕ್ಕಳು ಈಗಿನಿಂದಲೇ ಗುರಿಯನ್ನು ದೊಡ್ಡದಾಗಿಟ್ಟುಕೊಳ್ಳಬೇಕು. ಎಲ್ಲ ಕೆಲಸಗಳಲ್ಲೂ ತನ್ನದೇ ಆದ ಜವಾಬ್ದಾರಿ ಇದೆ. ಯಾವುದೇ ಕೆಲಸ ಮೇಲಲ್ಲ, ಕೀಳಲ್ಲ ಪ್ರತಿಯೊಬ್ಬರು ದಿನಚರಿಗೆ ತಕ್ಕಂತೆ ಯೋಜನೆ ಹಾಕಿಕೊಂಡು ಕಾರ್ಯರೂಪಕ್ಕೆ ತರಬೇಕು. ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಗೆಳೆಯರ ಬಳಗವನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು. ಒಳ್ಳೆಯ ಪುಸ್ತಕಗಳನ್ನು ಓದಿದರೆ, ಹಾಡನ್ನು ಕೇಳಿದರೆ ಮನಸ್ಸು ಒತ್ತಡದಿಂದ ದೂರವಿರಬಹುದು ಎಂದರು.ನಾಟಕಗಳು: ನಾಯಿ ಮರಿ, ಗೋರುಕಾನ, ಪುಟ್ಟ ಕತೆ, ಬುದ್ಧಿವಂತ ಮಂಕಿ, ನಚಿಕೇತಾಗ್ನಿ ಪ್ರದರ್ಶನಗೊಂಡವು. ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ವೇದಿಕೆಯ ಮೇಲೆ ಶಿಬಿರದ ಸಂಚಾಲಕ ನಟರಾಜ ಹೊನ್ನವಳ್ಳಿ ಇದ್ದರು. ರಾಜು ಬಿ ಸ್ವಾಗತಿಸಿ ನಿರೂಪಿಸಿದರು.