ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ವ್ಯಕ್ತಿಯ ವ್ಯಕ್ತಿತ್ವ ರೂಪಿಸಲು ಜೀವನ ಕೌಶಲ್ಯ ತರಬೇತಿ ನೇರವಾಗುತ್ತದೆ ಎಂದು ಯುವ ಸ್ಪಂದನ ಪರಿವರ್ತಕ ಕೆ.ಪಿ.ಸುನಿಲ್ ಅಭಿಪ್ರಾಯಪಟ್ಟರು.ತಾಲೂಕಿನ ಕೊಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಏರ್ಪಡಿಸಿದ್ದ ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿ, ವ್ಯಕ್ತಿಗೆ ವ್ಯಕ್ತಿತ್ವ ಮುಖ್ಯ. ಅಂತಹ ವ್ಯಕ್ತಿತ್ವವನ್ನು ಸಂವಹನ ಕಲೆ, ಸಂಯೋಜನ ಕಲೆ ಹಾಗೂ ಕಲಿಯುವ ಇಚ್ಛೆಯನ್ನು ಆಧರಿಸಿ ರೂಪಿಸಲಾಗುತ್ತದೆ ಎಂದರು.
ಹೊಸ ಜೀವನ ಕಲೆಯನ್ನು ಕಲಿಯುವ ಜೊತೆಗೆ ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಅರಿತುಕೊಳ್ಳಬಹುದು. ಅದಕ್ಕಾಗಿ ಜೀವನ ಕೌಶಲ್ಯ ತರಬೇತಿ ಇಂದಿನ ದಿನಮಾನದಲ್ಲಿ ಯುವ ಪೀಳಿಗೆಗೆ ಅವಶ್ಯಕವಾಗಿದೆ ಎಂದರು.ಇತ್ತೀಚಿಗೆ ಹೆಚ್ಚಿನ ಜನರು ಶಿಕ್ಷಣ ಜೊತೆಗೆ ಜೀವನ ಕೌಶಲ್ಯ ತರಬೇತಿ ನೀಡಲು ಬಯಸುತ್ತಾರೆ. ಆದರೆ, ಜೀವನ ಕೌಶಲ್ಯ ಕಲಿಕೆಯು ಜೀವಮಾನದ ಪ್ರಕ್ರಿಯೆ ಆಗಬೇಕು. ಆಗ ಪ್ರಪಂಚವನ್ನು ಹೊಸ ದೃಷ್ಟಿಕೋನದಿಂದ ನೋಡುವಂತಾಗುತ್ತದೆ ಹಾಗೂ ಜನರ ಜೀವನ ಮಟ್ಟದಲ್ಲಿ ಸುಧಾರಣೆಯಾಗುತ್ತದೆ ಎಂದು ವಿಶ್ಲೇಷಿಸಿದರು.
ಮತ್ತೊರ್ವ ಅತಿಥಿ ಸೌಂದರ್ಯ ವಿದ್ಯಾರ್ಥಿಗಳಿಗೆ ಚಟುವಟಿಗೆ ಮೂಲಕ ಜೀವನ ಕೌಶಲ್ಯ ತರಬೇತಿ ನೀಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಅಣ್ಣಯ್ಯ ತೈಲೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸಂತೋಷ ಆರ್ ಎನ್, ಐ ಕ್ಯೂ ಎಸಿ ಸಂಚಾಲಕ ಡಾ. ಉಮೇಶ್ ಪಾಲ್ಗೊಂಡಿದ್ದರು.ಚಿನ್ನದ ಓಲೆ ನೀಡಿ ಪ್ರಾಮಾಣಿಕತೆ ಮೆರೆದ ಸಾರಿಗೆ ಸಂಚಾರಿ ನಿಯಂತ್ರಕ
ಮಳವಳ್ಳಿ:ಮೈಸೂರಿನಿಂದ ಮಳವಳ್ಳಿಗೆ ಬರುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರು ಮರೆತು ಬಸ್ ಇಳಿದು ಬಿಟ್ಟು ಹೋಗಿದ್ದ ಬ್ಯಾಗ್ ಹಾಗೂ 8 ಗ್ರಾಂ ಚಿನ್ನದ ಓಲೆಯನ್ನು ಸಂಚಾರಿ ನಿಯಂತ್ರಕ ಎಂ.ಸಿ.ಗೌಡ ವಾರಸುದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ. ಮೈಸೂರಿನಿಂದ ಬನ್ನೂರಿಗೆ ಬರುವ ವೇಳೆ ಬನ್ನೂರಿನ ಸಹನಾ ಅವರು ಬಟ್ಟೆಯ ಬ್ಯಾಗ್‌ನಲ್ಲಿ ಸೀರೆ, 8 ಗ್ರಾಂ ಚಿನ್ನದ ಓಲೆಯನ್ನು ಮರೆತು ಬಸ್‌ನಿಂದ ಇಳಿದಿದ್ದರು.ತಕ್ಷಣವೇ ಎಚ್ಚೆತ್ತ ಸಹನಾ ಮಳವಳ್ಳಿಯ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಬಸ್ ಮಳವಳ್ಳಿಗೆ ಬರುತ್ತಿದ್ದಂತೆಯೇ ಬ್ಯಾಗ್‌ನನ್ನು ವಶಕ್ಕೆ ಪಡೆದ ಸಂಚಾರಿ ನಿಯಂತ್ರಕ ಎಂ.ಸಿ.ಗೌಡ ದಾಖಲೆಗಳನ್ನು ಪರಿಶೀಲಿಸಿ ಚಿನ್ನದ ಓಲೆ ಮತ್ತು ಬಟ್ಟೆಗಳನ್ನು ಸಹನಾ ಅವರಿಗೆ ವಾಪಸ್ ನೀಡಿದ್ದಾರೆ.
ಕೆಎಸ್ ಆರ್ ಟಿಸಿ ಅಧಿಕಾರಿಗಳ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.ನಾಳೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯಶ್ರೀರಂಗಪಟ್ಟಣ:ತಾಲೂಕಿನ ಬೆಳಗೊಳ ವ್ಯಾಪ್ತಿಯ 66/11 ಕೆವಿ ವಿದ್ಯುತ್ ಉಪ-ವಿತರಣ ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಮೇ 3ರಂದು ಶುಕ್ರವಾರ ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ )ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಅಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಬೆಳಗೊಳ ವಿದ್ಯುತ್ ವಿತರಣಾ ಕೇಂದ್ರದ ಸುತ್ತ ಮುತ್ತಲಿನ ಬೆಳಗೊಳ, ಕೆ.ಆರ್.ಸಾಗರ, ಹೊಸ ಆನಂದೂರು ಮೊಗರಹಳ್ಳಿ, ಕಾರೆಕುರ, ಕುಪ್ಪೆದಡ, ಕೆಐಡಿಬಿ ಇಂಡಸ್ಟ್ರಿಯಲ್, ಹೊಂಗಹಳ್ಳಿ, ವಾಟರ್ ಸಪ್ಲೆ, ಆನಗನಹಳ್ಳಿ, ಹೊಸ ಉಂಡವಾಡಿ, ಮಜ್ಜಿಗೆಪುರ, ಎಂ.ಎಂ.ಜಿ ಲೇಹಟ್ ಹುಲಿಕೆರೆ ಹೊಸಹಳ್ಳಿ, ಪಾಲಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಶ್ರೀರಂಗಪಟ್ಟಿಣ ಉಪ-ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೋರಿದ್ದಾರೆ.