-ಕಡೇಚೂರು ಕೈಗಾರಿಕಾ ಪ್ರದೇಶ: ಹಳ್ಳಿಗಳಲ್ಲಿ ಮಾರಣಾಂತಿಕ ನೀರು । ನೀರಿನಲ್ಲಿ ನೈಟ್ರೇಟ್‌, ಫ್ಲೋರೈಡ್‌ ಮಾರಣಾಂತಿಕ ರಾಸಾಯನಿಕಗಳ ಸೇರ್ಪಡೆ

---

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಕಂಪನಿಗಳಿಂದ ಹೊರಹೊಮ್ಮುವ ವಿಷಾನಿಲದಿಂದಾಗಿ ನೂರಾರು ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆ ಹಾಳಾಗಿರುವುದು ಕೃಷಿ ವಿಜ್ಞಾನಿಗಳಿಂದ ದೃಢಪಟ್ಟ ಬೆನ್ನಲ್ಲೇ, ಈ ಭಾಗದಲ್ಲಿನ ಹತ್ತಾರು ಹಳ್ಳಿಗಳ ಲಕ್ಷಾಂತರ ಜನರಿಗೆ ಜೀವಜಲವೇ ಹಾಲಾಹಾಲ ಅನ್ನೋದು ಪ್ರಯೋಗಾಲಯ ವರದಿಗಳಿಂದ ದೃಢಪಟ್ಟಿರುವುದು ಮತ್ತಷ್ಟೂ ಆಘಾತ ಮೂಡಿಸಿದೆ.


ಕಡೇಚೂರು, ಶೆಟ್ಟಿಹಳ್ಳಿ, ರಾಚನಹಳ್ಳಿ, ದದ್ದಲ್‌, ಸೌರಾಷ್ಟ್ರಹಳ್ಳಿ, ಮಾವಿನಹಳ್ಳಿ, ಚಂದಾಪುರ ಸೇರಿದಂತೆ ವಿವಿಧೆಡೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಪ್ರಯೋಗಾಲಯದ ಅಧಿಕಾರಿಗಳು ಇದೇ ಜೂನ್‌ 18 ರಿಂದ ವಿವಿಧೆಡೆ ನಡೆಸಿದ ಕುಡಿಯುವ ನೀರು ಪ್ರಯೋಗಾಲಯದ ವರದಿಯಲ್ಲಿ ಫ್ಲೋರೈಡ್‌ ಹಾಗೂ ನೈಟ್ರೇಟ್‌ ಸೇರಿದಂತೆ ಕೆಲವು ರಾಸಾಯನಿಕ ಅಂಶಗಳು ಜನ-ಜಲ-ಜೀವ ಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಬಗ್ಗೆ ಅಂಶಗಳು ಪತ್ತೆಯಾಗಿವೆ.

ಫ್ಲೋರೈಡ್‌ ಹಾಗೂ ನೈಟ್ರೇಟ್‌ ಅಂಶಗಳು ಅನುಮತಿಸಬಹುದಾದ ಮಿತಿಗೆ ಸಮೀಪದಲ್ಲಿರುವುದು ನವಜಾತ ಶಿಶುಗಳು ಹಾಗೂ ತಾಯಂದಿರರ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಬಹುದಾದ ಸಾಧ್ಯತೆಗಳ ಆತಂಕ ಎದುರಾಗಿದೆ. ನೈಟ್ರೇಟ್‌ ಅಂಶಗಳು "ಬ್ಲೂ ಬೇಬಿ ಸಿಂಡ್ರೋಮ್‌ " (ನವಜಾತ ಶಿಶುವಿನಲ್ಲಿ ಆಮ್ಲಜನಕ ಕೊರತೆ ಕಂಡುಬರುವ ಹಾಗೂ ಜೀವಕ್ಕೆ ಮಾರಕವಾಗುವ) ಕಾಯಿಲೆಗೆ ಭೀತಿ ಕಂಡುಬಂದಿದೆ.

ಕಳೆದೈದು ವರ್ಷಗಳಿಂದ ನೀರಿನಲ್ಲಿ ರಾಸಾಯನಿಕ ಅಂಶಗಳ ಹೆಚ್ಚಳ ಹಾಗೂ ರಾಸಾಯನಿಕ ತೈಲ ಪ್ರಯೋಗಾಲಯದಲ್ಲಿ ಕಂಡುಬರುತ್ತಿದೆ. ಶೆಟ್ಟಿಹಳ್ಳಿ, ರಾಚನಹಳ್ಳಿ ಮುಂತಾದೆಡೆ ಈ ಅಂಶಗಳು ಮುಂಬರುವ ದಿನಗಳಲ್ಲಿ ಇಲ್ಲಿನ ಜನರು ಸೇರಿದಂತೆ ಇಡೀ ಪರಿಸರ ಮೇಲೆ ಹಾನಿಕಾರಕವಾಗುವ ಸಾಧ್ಯತೆಯಿದೆ. ಅಸಹಜ ವಾಸನೆ, ರುಚಿ, ಬಣ್ಣ ಹಾಗೂ ರಾಸಾಯನಿಕ ಅಂಶಗಳ ಸೇರುವಿಕೆಯಲ್ಲಿ ಹೆಚ್ಚಳವಾಗುತ್ತಿರುವುದು ಕಂಡುಬರುತ್ತಿದೆ. 2022 ರಿಂದ ಇಂತಹ ದೂರುಗಳು ಬಂದಿರಲಿಲ್ಲವಾದರೂ, ಈಗ ಹೆಚ್ಚಳವಾಗುತ್ತಿರುವುದು ಕಂಡುಬಂದಿದೆ.

ಇದೇ ಜೂ.8 ರಂದು ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಇಲಾಖೆ ಸಚಿವರು ನಡೆಸಿ ವೀಡಿಯೋ ಕಾನ್ಫೆರೆನ್ಸ್ ಸಭೆಯಲ್ಲಿ ಕಡೇಚೂರು ಬಾಡಿಯಾಳ ನೀರಿನ ಪ್ರಯೋಗಾಲಯ ವರದಿ ನಡೆಸುವಂತೆ ಸೂಚಿಸಲಾಗಿದ್ದ ಹಿನ್ನೆಲೆಯಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ.

ಕೆಮಿಕಲ್‌ ಫಾರ್ಮಾಗಳಿಂದ ಹೊರಹೊಮ್ಮುವ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ, ನೇರವಾಗಿ ಚರಂಡಿಗಳ ಮೂಲಕ ಹಳ್ಳಕ್ಕೆ ಬಿಡುತ್ತಿರುವ ದೂರುಗಳ ಹಿನ್ನೆಲೆ ಸ್ಥಳಕ್ಕೆ ಜಿ.ಪಂ. ನ ಅಂದಿನ ಸಿಇಒ ಲವೀಶ ಒರಡಿಯಾ ನೇತೃತ್ವದ ಅಧಿಕಾರಿಗಳ ತಂಡ ಹಳ್ಳದ ನೀರಿನ ಮಾದರಿ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಯೋಗಾಲಯಕ್ಕೆ ಕಳುಹಿಸಿತ್ತು.

ಅದರ ಫಲಿತಾಂಶ ಮತ್ತಷ್ಟೂ ಆಘಾತ ಮೂಡಿಸಿದೆ. ಕಡೇಚೂರು ಭಾಗದಲ್ಲಿ ಜೀವರಾಸಾಯನಿಕ ಆಮ್ಲಜನಕ ಬೇಡಿಕೆ (ಕೆಮಿಕಲ್‌ ಆಕ್ಸಿಜನ್‌ ಡಿಮಾಂಡ್‌ ) ಪ್ರತಿ ಲೀಟರಿಗೆ 2400 ಹಾಗೂ 1920 ಮಿಲಿಗ್ರಾಂ ಕಂಡುಬಂದಿದೆ. ಅನುಮತಿಸಬಹುದಾದ ಮಿತಿ ಕುಡಿವ ನೀರಿನಲ್ಲಿ ಸೊನ್ನೆಯಿಂದ 10ಮಿಲಿಗ್ರಾಂ ಇರಬೇಕು. ಹಾಗೆಯೇ, ಬಯೋಕೆಮಿಕಲ್ ಆಕ್ಸಿಜನ್ ಡಿಮಾಂಡ್‌ 700 ಮತ್ತು 500 ಮಿಲಿಗ್ರಾಂ ಪ್ರತಿ ಲೀಟರಿಗೆ ಕಂಡುಬಂದಿದೆ. ಇದು ಕುಡಿವ ನೀರಿಗೆ 2 ರಿಂದ 5 ಮಿಲಿಗ್ರಾಂ ಇರಬೇಕು. ಕುಡಿಯುವುದಿರಲಿ, ಇಲ್ಲಿನ ನೀರು ಬಳಸಿದರೂ ವಿಷಕಾರಿಯಾಗಿದೆ ಅನ್ನೋದು ತಜ್ಞರ ಅಭಿಪ್ರಾಯ.

ಈ ಎಲ್ಲ ಅಂಶಗಳನ್ನು ಗಮನಿಸಿದಾಗ, ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಫಾರ್ಮಾ ಕಂಪನಿಗಳಿಂದ ವಿಷಕಾರಿ ಅನಿಲ, ತ್ಯಾಜ್ಯ ಬಿಡುಗಡೆ ಹಿನ್ನೆಲೆ ಹದಗೆಟ್ಟ ವಾತಾವರಣ ತಡೆಯದಿದ್ದರೆ ಜನ-ಜಲ ಹಾಗೂ ಜಲಚರಗಳು ಹಾಗೂ ಜೀವ ಸಂಕುಲ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾದ ದುಸ್ಥಿತಿ ಎದುರಾಗಬಹುದು ಎಂದೆನ್ನಲಾಗಿದೆ.

ಫೋಟೊ

21ವೈಡಿಆರ್3 : ಅಂದಿನ ಸಿಇಒ ಆಗಿದ್ದ ಲವೀಶ ಒರಡಿಯಾ ಅವರು ಕಡೇಚೂರು ಪ್ರದೇಶಕ್ಕೆ ಭೇಟಿ ನೀಡಿದ್ದರು.

21ವೈಡಿಆರ್‌4 : ತ್ಯಾಜ್ಯ ಹಳ್ಳಕ್ಕೆ ಸೇರಿದಾಗ ಸಂಗ್ರಹಿಸಿದ ನೀರಿನ ಮಾದರಿ ಕುರಿತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಯೋಗಾಲಯದ ವರದಿ.