ನಾಳೆಯಿಂದ ಜೀವನ ದರ್ಶನ ಪ್ರವಚನ

| Published : Sep 13 2024, 01:42 AM IST

ಸಾರಾಂಶ

ಸೆ. 14ರಿಂದ ಸೆ. 24ರ ವರೆಗೆ ಜರುಗಲಿರುವ ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಗಳ ಮಠಾಧೀಶರು, ಗಣ್ಯರು ಪಾಲ್ಗೊಳ್ಳಲಿದ್ದಾರೆ

ಮುಂಡರಗಿ: ಈ ಬಾರಿ ಮುಂಡರಗಿಯಲ್ಲಿ ಸೆ. 14ರಿಂದ ಸೆ. 24ರ ವರೆಗೆ ಹಾನಗಲ್ ಶ್ರೀ ಗುರು ಕುಮಾರೇಶ್ವರರ ಜಯಂತಿ ಜರುಗಲಿದ್ದು, ಸೆ. 14ರಿಂದ ಜೀವನ ದರ್ಶನ ಪ್ರವಚನ ಜರುಗಲಿದೆ ಎಂದು ಶ್ರೀಮಠದ ಉತ್ತರಾಧಿಕಾರಿ ಜ.ಡಾ. ಮಲ್ಲಿಕಾರ್ಜುನ ಸ್ವಾಮಿಜಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಡರಗಿ ಅನ್ನದಾನೀಶ್ವರ ಮಠಕ್ಕೂ ಲಿಂ. ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ಸ್ವಾಮೀಜಿ ಅವರಿಗೂ ಅವಿನಾಭಾವ ಸಂಬಂಧ ಇದೆ. ಹೀಗಾಗಿ ಅವರ 157ನೇ ಜಯಂತಿಯನ್ನು ಮುಂಡರಗಿಯಲ್ಲಿ ಮಾಡಬೇಕೆನ್ನುವುದು ಜ. ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ಅವರ ಇಚ್ಛೆಯಾಗಿತ್ತು ಎಂದು ಹೇಳಿದರು.

ಸೆ. 14ರಿಂದ ಸೆ. 24ರ ವರೆಗೆ ಜರುಗಲಿರುವ ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಗಳ ಮಠಾಧೀಶರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸೆ. 14ರಂದು ಅಣ್ಣಿಗೇರಿಯ ಯಳಂದೂರ ಬಸವಲಿಂಗ ಸ್ವಾಮಿಗಳ ಗದ್ದುಗೆಯಿಂದ ಹಾನಗಲ್ಲ ಶ್ರೀ ಗುರು ಕುಮಾರ ಸ್ವಾಮಿಗಳ ಜ್ಯೋತಿ ಹೊರಟು ಅದೇ ದಿನ ಸಂಜೆ 5 ಗಂಟೆಗೆ ಮುಂಡರಗಿ ಪಟ್ಟಣ ತಲುಪಲಿದೆ. ಗದಗ ರಸ್ತೆಯ ಕೋರ್ಟ್ ಬಳಿ ಜ್ಯೋತಿ ಸ್ವಾಗತಿಸಿಕೊಂಡು, ಆನಂತರ ಬೈಕ್ ರ್‍ಯಾಲಿ ಮೂಲಕ ಶ್ರೀ ಅನ್ನದಾನೀಶ್ವರ ಮಠಕ್ಕೆ ಆಗಮಿಸುತ್ತದೆ. ಆನಂತರ ಸಂಜೆ 7 ಗಂಟೆಗೆ ಹಾನಗಲ್ಲ ಶ್ರೀ ಗುರು ಕುಮಾರೇಶ್ವರರ ಜೀವನ ದರ್ಶನ ಪ್ರವಚನ ಆರಂಭಗೊಳ್ಳಲಿದೆ.

ಜ. ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಜಿ ಅವರ ನೇತೃತ್ವ ಹಾಗೂ ಲಿಂಗನಾಯಕನಹಳ್ಳಿ ಚನ್ನವೀರ ಸ್ವಾಮಿಗಳ ಅಧ್ಯಕ್ಷತೆ ಹಾಗೂ ಚಿದಾನಂದ ಸ್ವಾಮಿಗಳು, ನಂದಿವೇರಿಮಠ ಶಿವಕುಮಾರ ಸ್ವಾಮಿಗಳು, ಡಾ. ಹಿರಿಯ ಶಾಂತವೀರ ಸ್ವಾಮಿಗಳ ಸಮ್ಮುಖದಲ್ಲಿ ರೋಣ ಶಾಸಕ ಜಿ.ಎಸ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಗುಡೂರ ಇಳಕಲ್ ಪಂ. ಅನ್ನದಾನೀಶ್ವರ ಶಾಸ್ತ್ರಿಗಳು ವಚನ ಮಾಡಲಿದ್ದಾರೆ ಎಂದರು.

ಜ.ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ವೀರಶೈವ ಸಮಾಜ ಕಟ್ಟುವಲ್ಲಿ ಹಾಗೂ ಶಿವಯೋಗ ಮಂದಿರ ಕಾರ್ಯಚಟುವಟಿಕೆಗೆ ತಮ್ಮದೆ ಆದ ದೊಡ್ಡ ಕೊಡುಗೆ ನೀಡಿದ ಹಾನಗಲ್ಲ ಶ್ರೀ ಗುರು ಕುಮಾರೇಶ್ವರರು ಬೆಳಗಾವಿ ಕೆಎಲ್‌ಇ, ಬಾಗಲಕೋಟೆ, ಬಸವೇಶ್ವರರ ವಿದ್ಯಾವರ್ಧಕ, ಬಳ್ಳಾರಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ, ಸಂಸ್ಕೃತ ಪಾಠಶಾಲೆ, ಗದುಗಿನ ಪಂಚಾಕ್ಷರಿ ಮಠದ ಅಂಧರ ಬಾಳಿಗೆ ಬೆಳಕಾಗಿ ರಾಜ್ಯದ ಉದ್ದಗಲಕ್ಕೂ ತಮ್ಮ ಸೇವೆ ಮುಡುಪಾಗಿಟ್ಟಿದ್ದರು. ಅಂಥವರ ಸ್ಮರಣೆ ಮಾಡುವುದೆಂದರೆ ಅದೊಂದು ಪುಣ್ಯದ ಕೆಲಸವಾಗಿದ್ದು, ಶ್ರೀಮಠದಲ್ಲಿ ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸವ ಸಂದರ್ಭದಲ್ಲಿ ಈ ಕಾರ್ಯಕ್ರಮ ಸಂದರ್ಭೋಚಿತವಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.

ಸೆ. 15ರಿಂದ ಪ್ರತಿ ದಿನ ಎರಡು ಗ್ರಾಮಗಳಿಗೆ ಹಾಗೂ ಪಟ್ಟಣದ ಒಂದು ವಾರ್ಡಿಗೆ ತೆರಳಿ ಸದ್ಭಾವನಾ ಪಾದಯಾತ್ರೆ ನಡೆಸಲಾಗುವುದು. ಈ ಸಂದರ್ಭದಲ್ಲಿ ಭಕ್ತರಿಗೆ ಉಚಿತವಾಗಿ ರುದ್ರಾಕ್ಷಿ ಧಾರಣೆ ಮಾಡಲಾಗುವುದು. ಸೆ. 16ರಂದು ಹೂವಿನಹಡಗಲಿ ತಾಲೂಕಿನ ರಾಜವಾಳ ಗ್ರಾಮದಲ್ಲಿ ತುಂಗಭದ್ರಾ ನದಿ ತೀರದಲ್ಲಿ ಅನ್ನದಾನೀಶ್ವರ ಮಠದ ಜೀರ್ಣೋದ್ಧಾರ ಕಾರ್ಯಕ್ರಮದ ಅಡಿಗಲ್ಲು ಸಮಾರಂಭ ಜರುಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಾನಗಲ್ ಕುಮಾರೇಶ್ವರ ಶಿವಯೋಗಿಗಳವರ 157ನೇ ಜಯಂತಿ ಮಹೋತ್ಸವ ಸಮಿತಿ ಅಧ್ಯಕ್ಷ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯಸ್ವಾಮಿಗಳು, ನಿರಂಜನ ದೇವರು, ಚನ್ನಬಸವ ದೇವರು, ಶಿವಾನಂದ ದೇವರು, ಡಾ. ಬಿ.ಜಿ. ಜವಳಿ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಉಪಸ್ಥಿತರಿದ್ದರು.