ಸಾರಾಂಶ
ಹುಬ್ಬಳ್ಳಿ: ಸತ್ಯ, ಶಾಂತಿ, ಪರೋಪಕಾರ, ದಯೆ, ಕ್ಷಮೆಗಳಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವೇಚ್ಛಾಚಾರದ ಬದುಕಿನಿಂದ ಜೀವನಕ್ಕೆ ಅರ್ಥ ಬರುವುದಿಲ್ಲ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಹೇಳಿದರು.
ಇಲ್ಲಿಯ ಮಕರ ಜ್ಯೋತಿ ಅಯ್ಯಪ್ಪಸ್ವಾಮಿ ಭಕ್ತವೃಂದ, ಪಂಚಾಚಾರ್ಯ ಪುಣ್ಯಾಶ್ರಮ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಯಲ್ಲಾಪೂರ ಓಣಿಯಲ್ಲಿ ಗುರುವಾರ ನಡೆದ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಬದುಕನ್ನು ಸುಂದರ ಮತ್ತು ಸಾರ್ಥಕಗೊಳಿಸುವ ಸಮೂಹವೇ ಧರ್ಮ. ಧರ್ಮವು ಕೇವಲ ಬರಡು ಭೂಮಿಯಾಗಿರಬಾರದು. ಬರೀ ವೈಚಾರ ಆಕಾಶ ಕುಸುಮವಾಗಿರಬಾರದು. ವಿಚಾರ ಮತ್ತು ವಿಶ್ವಾಸಗಳ ಮಧ್ಯದಲ್ಲಿ ಪವಿತ್ರ ಗರಿಕೆಯಾಗಿ ಧರ್ಮವು ಮನುಕುಲ ಕಾಪಾಡಬೇಕು. ವಿಚಾರವು ಬರೀ ವಿಚಾರದ ಮೇಲೆ ನಿಂತ ಧರ್ಮವು ಮೂಢನಂಬಿಕೆಯಾಗುತ್ತದೆ ಎಂದರು.ಆಹಾರ, ನಿದ್ರೆ, ಭಯ, ಸಂಸಾರ ಇವುಗಳು ಎಲ್ಲ ಪ್ರಾಣಿಗಳು ತಮ್ಮ ಬದುಕಿನಲ್ಲಿ ರೂಢಿಸಿಕೊಂಡಿರುತ್ತವೆ. ಮಾನವನಾಗಿ ಧರ್ಮವನ್ನು ಪರಿಪಾಲನೆ ಮಾಡದೆ ಕೇವಲ ಊಟ, ನಿದ್ರೆಗೆ ಮಾತ್ರ ಸೀಮಿತವಾದರೆ, ಪ್ರಾಣಿಗಳಿಗೂ ಮನುಷ್ಯರಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ನಮ್ಮ ಎಲ್ಲ ದುಃಖಗಳು ನಿವಾರಣೆಗೆ ಧರ್ಮವೇ ಧರ್ಮದ ಅಮೃತವನ್ನು ಪ್ರತಿನಿತ್ಯ ಸೇವಿಸುವವನಿಗೆ ಶಾಶ್ವತವಾಗಿ ಸುಖ ಪ್ರಾಪ್ತವಾಗುತ್ತದೆ ಎಂದರು. ಸಾಗರದಿಂದ ಅಗಲಿದ ಹನಿ ಮೋಡದಲ್ಲಿ ವಿಲೀನವಾಗಿ ಮತ್ತೆ ಮಳೆ ರೂಪ ಧರಿಸಿ ಹಳ್ಳ-ಕೊಳ್ಳ, ನದಿ, ಸಮುದ್ರ ಸೇರಿ ಕೊನೆಗೆ ಸಾಗರ ಸೇರುತ್ತದೆ. ಹಾಗೆ ಮಾನವ ಶಿವನಿಂದ ಅಗಲಿ ಬಂದು ಜೀವನದಲ್ಲಿ ಸುಖ ಪಡೆಯಲು ಶಿಶು, ಯುವಕ ಗೃಹಸ್ಥ ಮುಂತಾದ ರೂಪ ಪಡೆದಾಗ ಶಾಶ್ವತ ಶಾಂತಿ, ನೆಮ್ಮದಿ ಪಡೆಯಲು ಸಾಧ್ಯವಾಗುತ್ತದೆ. ಸಮುದ್ರದ ನೀರಿನ ಹನಿ ನದಿಯ ಮೂಲಕ ಹರಿದು ಹೋಗಿ ಸಮುದ್ರ ಸೇರುವಂತೆ ಧರ್ಮದ ಮೂಲಕ ಸಾಗಿದಾಗಲೇ ಜೀವಾತ್ಮ ಪರಮಾತ್ಮನಿಗೆ ಸೇರಲು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಸುಳ್ಳದ ಪಂಚಗ್ರಹ ಹಿರೇಮಠದ ಅಭಿನವ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಶ್ರೀಗಳು, ಗಿರಿಮಲ್ಲೇಶ್ವರ ಮಠದ ಡಾ. ಎ.ಸಿ. ವಾಲಿ ಮಹಾರಾಜರು, ನವನಗರದ ರಾಜಶೇಖರ ಸ್ವಾಮೀಜಿ, ಈಶ್ವರ ಶಿವಾಚಾರ್ಯ ಸ್ವಾಮೀಜಿ, ಪಾಲಿಕೆ ಸದಸ್ಯೆ ಗೀತಾ ಹೊಸಮನಿ, ಪರುತಪ್ಪ ಬಳಗಣ್ಣವರ, ಶಿವನಗೌಡ ಹೊಸಮನಿ, ಅಕ್ಕಮ್ಮ ಕಂಬಳಿ, ವೀರಣ್ಣ ಶಿಂತ್ರಿ ಸೇರಿದಂತೆ ಹಲವರಿದ್ದರು. ಪಂಚಾಚಾರ್ಯ ಪುಣ್ಯಾಶ್ರಮ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಬೆಂಡಿಗೇರಿ ಕಾರ್ಯಕ್ರಮ ನಿರೂಪಿಸಿದರು.