ಎರಡು ಪ್ರತ್ಯೇಕ ಘಟನೆಗಳಲ್ಲಿ ಸುಮುದ್ರ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಒಟ್ಟು ಎಂಟು ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಶನಿವಾರ ಮಧ್ಯಾಹ್ನ ಮುಖ್ಯ ಕಡಲತೀರದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಗೋಕರ್ಣ

ಎರಡು ಪ್ರತ್ಯೇಕ ಘಟನೆಗಳಲ್ಲಿ ಸುಮುದ್ರ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಒಟ್ಟು ಎಂಟು ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಶನಿವಾರ ಮಧ್ಯಾಹ್ನ ಮುಖ್ಯ ಕಡಲತೀರದಲ್ಲಿ ನಡೆದಿದೆ.

ಮಧ್ಯಾಹ್ನ 3.30ರ ಸುಮಾರಿಗೆ ನಾಲ್ವರು ಪ್ರವಾಸಿಗರು ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಜೀವರಕ್ಷಕ ಸಿಬ್ಬಂದಿ ಹರಸಾಹಸ ಮಾಡಿ ದಡಕ್ಕೆ ತಂದು ಜೀವ ಉಳಿಸಿದ್ದಾರೆ.

ಅಭಿಷೇಕ್ ಹನುಮಂತ ವಳಗೇರಿ (21), ಹುಸೇನ್ ಸಾಬ್ (18), ಶಿವರಾಜ್ ಮರಿಯಪ್ಪ ಯಾಟಿ (18), ಮುತ್ತುರಾಜ್ ಮೈಲಾರಪ್ಪ ಕೊಡಲಗಿ (24) ಜೀವಾಪಾಯದಿಂದ ಪಾರಾಗಿ ಬಂದವರು.

ಕೊಪ್ಪಳ ಮೂಲದವರಾದ ಇವರು 12 ಜನ ಪ್ರವಾಸಕ್ಕೆ ಬಂದಿದ್ದು, ಈಜಾಡಲು ತೆರಳಿದಾಗ ಈ ಅವಘಡ ನಡೆದಿದೆ. ಜೀವ ರಕ್ಷಕ ಸಿಬ್ಬಂದಿ ಮೋಹನ ಅಂಬಿಗ, ಶಿವಪ್ರಸಾದ್ ಅಂಬಿಗ, ರೋಷನ್ ಖಾರ್ವಿ ಜೀವ ಉಳಿಸಿದ್ದಾರೆ ಇವರಿಗೆ ಪ್ರವಾಸಿ ಮಿತ್ರ ಸಿಬ್ಬಂದಿಯಾದ ಶೇಖರ್ ಹರಿಕಂತ್ರ, ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಕಮಲಾಕರ್ ಹೊಸ್ಕಟ್ಟ, ದೀಪಕ್ ಗೌಡ, ಚಿದಾನಂದ ಲಕ್ಕುಮನೆ ಸಹಾಯ ಮಾಡಿದ್ದಾರೆ.

ಇದಾದ ಕೆಲವೇ ಹೊತ್ತಿನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಚಿತ್ರದುರ್ಗ ಮೂಲದ 17 ಜನ ಪ್ರವಾಸಿಗರು ಸಮುದ್ರಕ್ಕೆ ಇಳಿದ ವೇಳೆ ನಾಲ್ವರು ಪ್ರವಾಸಿಗರು ಜೀವಾಪಾಯದಲ್ಲಿದ್ದರು. ಇದನ್ನು ಗಮನಿಸಿದ ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿಗಳಾದ ಮೋಹನ ಅಂಬಿಗ, ರೋಷನ್ ಖಾರ್ವಿ, ಶಿವಪ್ರಸಾದ್ ಅಂಬಿಗ ತಕ್ಷಣ ಧಾವಿಸಿ ನಾಲ್ವರನ್ನು ರಕ್ಷಿಸಿದ್ದಾರೆ. ಇವರಿಗೆ ಪ್ರವಾಸಿ ಮಿತ್ರ ಸಿಬ್ಬಂದಿಯಾದ ಶೇಖರ್ ಹರಿಕಂತ್ರ, ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಯಾದ ಚಿದಾನಂದ ಲಕ್ಕುಮನೆ, ಮಹಾಬಲೇಶ್ವರ ಲಕ್ಕುಮನೆ, ಜಗ್ಗು ಹೊಸ್ಕಟ್ಟ, ದೀಪಕ್ ಗೌಡ, ದರ್ಶನ್ ಹರಿಕಂತ್ರ ರಕ್ಷಣಾ ಕಾರ್ಯಕ್ಕೆ ಸಹಾಯ ಮಾಡಿದರು. ಅವಿನಾಶ್ ತಿಪ್ಪೇಸ್ವಾಮಿ (20), ರಘು ತಿಪ್ಪೇಸ್ವಾಮಿ ಚಳ್ಳಿಕೆರೆ (21), ಅಜಯ್ ಗಂಗಪ್ಪ ಚಳ್ಳಿಕೆರೆ (26), ಅಶ್ವತ್ (14) ರಕ್ಷಣೆಗೊಳಗಾದವರು. ಜೀವ ಉಳಿಸಿದ ಜೀವರಕ್ಷಕ ಸಿಬ್ಬಂದಿ ಹಾಗೂ ರಕ್ಷಣಾ ತಂಡಕ್ಕೆ ಪ್ರವಾಸಿಗರು, ಸಾರ್ವಜನಿಕರು ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.