ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಸಾಮಾನ್ಯ ಆರೋಗ್ಯ ತಪಾಸಣೆ, ದಂತ, ಮೂಳೆ ಹಾಗೂ ಕೀಲು ಸಮಸ್ಯೆಗಳ ತಪಾಸಣೆ ನಡೆಸಲಾಯಿತು.
ಕಂಪ್ಲಿ: ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಪರಿಸರದಲ್ಲಿನ ಬದಲಾವಣೆಗಳಿಂದ ವಿವಿಧ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದ್ದು, ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ವೈದ್ಯ ಡಾ.ಭರತ್ ಪದ್ಮಶಾಲಿ ಸಲಹೆ ನೀಡಿದರು.
ಪಟ್ಟಣದ ಕೂಲಿಕಟ್ಟೆ ಬಸವೇಶ್ವರ ದೇವಸ್ಥಾನದ ಬಳಿ ಹಿಂದೂ ಯುವ ಸೇನೆಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ನಿತ್ಯದ ಒತ್ತಡದ ಜೀವನ, ಅಸಮರ್ಪಕ ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಗಳ ಕೊರತೆಯಿಂದ ಹಲವು ಕಾಯಿಲೆ ಕಾಣಿಸಿಕೊಳ್ಳುತ್ತಿವೆ. ಆರೋಗ್ಯಕರ ಜೀವನಕ್ಕಾಗಿ ಯೋಗ, ಧ್ಯಾನ, ಪ್ರಾಣಾಯಾಮದಂತಹ ಚಟುವಟಿಕೆ ರೂಢಿಸಿಕೊಳ್ಳುವುದರೊಂದಿಗೆ ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕು ಎಂದರು.ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಸಾಮಾನ್ಯ ಆರೋಗ್ಯ ತಪಾಸಣೆ, ದಂತ, ಮೂಳೆ ಹಾಗೂ ಕೀಲು ಸಮಸ್ಯೆಗಳ ತಪಾಸಣೆ ನಡೆಸಲಾಯಿತು. ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ವೈದ್ಯರಿಂದ ಅಗತ್ಯ ಸಲಹೆ ನೀಡಲಾಯಿತು.
ಕಲ್ಮಠದ ಪ್ರಭುಮಹಾಸ್ವಾಮೀಜಿ, ಮುಸ್ಲಿಂ ಧರ್ಮಗುರುಗಳಾದ ಸೈಯ್ಯದ್ ಷಾಹ್ ಡಾ. ನೂರ್ ಅಹ್ಮದ್ ಖಾದ್ರಿ ಹಾಗೂ ಸೈಯ್ಯದ್ ಷಾಹ್ ಮೆಹಮೂದ್ ಖಾದ್ರಿ ಶಿಬಿರಕ್ಕೆ ಚಾಲನೆ ನೀಡಿದರು.ಹಿಂದೂ ಯುವ ಸೇನೆ ಅಧ್ಯಕ್ಷ ಶಿವಕುಮಾರ್ ಅಲಬನೂರು ಮಾತನಾಡಿ, ಸಂಘಟನೆಯಿಂದ ಕೇವಲ ಹಬ್ಬ, ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಜನರ ಅಗತ್ಯಗಳಿಗೆ ಸ್ಪಂದಿಸುವ ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು. ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿಯೂ ಸೇವಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟುಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಿಸಲಾಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.ವೈದ್ಯರಾದ ಡಾ. ಶ್ರದ್ಧಾ ಭರತ್, ಡಾ. ವಿಕ್ರಮ್ ರೈಕರ್, ಡಾ. ಪ್ರವೀಣ್, ಡಾ. ತಸ್ನೀಮ್ ಎಸ್.ಎಂ. ಸೇರಿದಂತೆ ವೈದ್ಯಕೀಯ ತಂಡ ಶಿಬಿರದಲ್ಲಿ ಸೇವೆ ಸಲ್ಲಿಸಿತು.
ಮುಖಂಡರಾದ ಹೊಸಕೋಟೆ ಜಗದೀಶ್, ಎಂ. ಸುಧೀರ್, ಇಸ್ಮಾಯಿಲ್ ಬೇಗ್, ಪ್ರವೀಣ್, ಎ. ನವೀನ್, ಎ. ಬಸವರಾಜ, ಸಂತೋಷ್ ಅಲಬನೂರು, ಎ. ಅವಿನಾಶ್ ಸೇರಿದಂತೆ ಹಿಂದೂ ಯುವ ಸೇನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.