ಸಾರಾಂಶ
ಶಿರಸಿ: ಬದಲಾದ ಆಹಾರ ಪದ್ಧತಿ ಹಾಗೂ ಜೀವನ ಕ್ರಮದಿಂದ ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದ್ದು, ಮುಂಜಾಗ್ರತಾ ಕ್ರಮದಿಂದ ಹಾಗೂ ಯೋಗ, ಪ್ರಾಣಾಯಾಮ, ಮುದ್ರೆಗಳಿಂದ ಕ್ಯಾನ್ಸರ್ ನಿಗ್ರಹಿಸಬಹುದು. ಸಂತ್ರಸ್ತರು ಕ್ಯಾನ್ಸರ್ ಮರುಕಳಿಸುವ ಸಾಧ್ಯತೆಯಿಂದ ದೂರವಿರಬಹುದು ಎಂದು ಕ್ಯಾನ್ಸರ್ ರೋಗಿಗಳ ಆಪ್ತ ಸಮಾಲೋಚಕಿ, ಪತ್ರಕರ್ತೆ ಕೃಷ್ಣಿ ಶಿರೂರ ತಿಳಿಸಿದರು.ಸ್ಥಳೀಯ ಪ್ರಜ್ವಲ ಟ್ರಸ್ಟ್ ಆಶ್ರಯದಲ್ಲಿ ನಗರದ ಹುಬ್ಬಳ್ಳಿ ರಸ್ತೆಯ ವಿವೇಕಾನಂದನಗರದ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಭಯ ನಿವಾರಣಾ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪ್ರಾಣಾಯಾಮ, ಮುದ್ರಾ ಥೆರಪಿಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.ಕ್ಯಾನ್ಸರ್ ಸಾಂಕ್ರಾಮಿಕ ರೋಗವಲ್ಲ. ನಮ್ಮ ದೇಹದಲ್ಲಿರುವ ಜೀವಕೋಶಗಳೇ ಅನಿಯಂತ್ರಿತವಾಗಿ ಬೆಳೆಯುತ್ತ ಮಾರಕವಾಗಿ ಪರಿಣಮಿಸಲಿದೆ. ಆರಂಭದಲ್ಲೇ ಪತ್ತೆ ಹಚ್ಚಿದಲ್ಲಿ ಕಡಿಮೆ ಸಮಯದಲ್ಲಿ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಪಡೆಯುವುದರೊಂದಿಗೆ ಪ್ರಾಣಾಯಾಮ, ಮುದ್ರೆ ಥೆರಪಿಗಳನ್ನು ಅನುಸರಿಸುವುದರಿಂದ ಪರಿಣಾಮಕಾರಿ ಪ್ರಯೋಜನ ಉಂಟಾಗಲಿದೆ ಎಂದರು.ಮಹಿಳೆಯರನ್ನು ಹೆಚ್ಚಾಗಿ ಬಾಧಿಸುವ ಸ್ತನ ಕ್ಯಾನ್ಸರ್ ಹಾಗೂ ಗರ್ಭಕಂಠದ ಕ್ಯಾನ್ಸರ್ ಮತ್ತು ಪುರುಷರಲ್ಲಿ ಹೆಚ್ಚು ಕಂಡುಬರುವ ಬಾಯಿ ಮತ್ತು ಗಂಟಲು ಕ್ಯಾನ್ಸರ್‌ನ ಲಕ್ಷಣಗಳು ಹಾಗೂ ಅವುಗಳ ಚಿಕಿತ್ಸಾ ಕ್ರಮಗಳನ್ನು ವಿವರಿಸಿದರು.ಪ್ರಜ್ವಲ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಕಾರ್ಯಾಗಾರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು, ಮಾತೃ ಮಂಡಳಿಯ ಅಧ್ಯಕ್ಷೆ ವಿಜಯಾ ಶೆಟ್ಟಿ ಸ್ವಾಗತಿಸಿದರು. ಭಾರತಿ ಎಸ್. ಹೆಗಡೆ ವಂದಿಸಿದರು.ಸಾಲ್ಕಣಿಯಲ್ಲಿ ಕಾರ್ಯಾಗಾರ: ಸಾಲ್ಕಣಿಯ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಕೂಡ ಕ್ಯಾನ್ಸರ್ ಭಯ ನಿವಾರಣಾ ಕಾರ್ಯಾಗಾರ ನಡೆಯಿತು. ಕ್ಯಾನ್ಸರ್ ಸಂತ್ರಸ್ತರು, ಸಾರ್ವಜನಿಕರೂ ಪ್ರಯೋಜನ ಪಡೆದುಕೊಂಡರು. ಪ್ರಜ್ವಲ್ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಅನಸೂಯಾ ಹೆಗಡೆ ಸ್ವಾಗತಿಸಿದರು. ಸದಸ್ಯರಾದ ಸುಮಾ ಹೆಗಡೆ, ಶ್ರೀಧರ್ ಹೆಗಡೆ, ಗಜಾನನ ನಾಯ್ಕ, ಆಶಾ ಕಾರ್ಯಕರ್ತೆಯರು ಇದ್ದರು. ಪಿಡಿಒ ಲತಾ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಾಳೆ
ದಾಂಡೇಲಿ: ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಈ ಬಾರಿ ಗ್ರಾಮೀಣ ಪ್ರದೇಶವಾದ ಆಲೂರು ಗ್ರಾಮದಲ್ಲಿ ನಡೆಸಲು ಕಸಾಪ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ಸಮ್ಮೇಳನದ ಸಿದ್ಧತಾ ಸಭೆಯು ಆಲೂರಿನ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಜ. 29ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ.ತಹಸೀಲ್ದಾರ್ ಶೈಲೇಶ ಪರಮಾನಂದ ಅವರ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಟಿ.ಸಿ. ಹಾದಿಮನಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ.ಎನ್. ವಾಸರೆ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾರಾಯಣ ನಾಯ್ಕ, ಕಾರ್ಯದರ್ಶಿಗಳಾದ ಗುರುಶಾಂತ ಜಡೆಹಿರೇಮಠ, ಪ್ರವೀಣ ನಾಯ್ಕ, ಕೋಶಾಧ್ಯಕ್ಷ ಶ್ರೀಮಂತ ಮದರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.