ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲಲಘು ವ್ಯಾಯಾಮ ಹಾಗೂ ನಿಯಮಿತ ನಡಿಗೆಯು ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯವನ್ನು ವೃದ್ಧಿಸುವ ದಿವ್ಯೌಷಧಿ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಡೀನ್ ಹಾಗೂ ಎನ್.ಎಸ್.ಎಸ್ ಘಟಕದ ಸಂಯೋಜನಾಧಿಕಾರಿ ಡಾ.ಎ.ಟಿ.ಶಿವರಾಮು ತಿಳಿಸಿದರು.ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಮಹಾವಿದ್ಯಾಲಯ ಎನ್‌ಎಸ್‌ಎಸ್ ಘಟಕದ ವತಿಯಿಂದ ಆಯೋಜಿಸಿದ್ದ ಲಕ್ಷ್ಯ ಶೀರ್ಷಿಕೆಯ12 ಕಿಮೀ ಕಾಲ್ನಡಿಗೆ ಮತ್ತು ಚಾರಣಕ್ಕೆ ಚಾಲನೆ ನೀಡಿ ಮಾತನಾಡಿ, ಆರೋಗ್ಯವಂತ ಮನುಷ್ಯ ಪ್ರತಿನಿತ್ಯ ಕನಿಷ್ಠ 4 ಕಿಮೀ ಕಾಲ್ನಡಿಗೆಯಲ್ಲಿ ಹೆಜ್ಜೆ ಹಾಕಿದರೆ ಸದೃಢ, ಸ್ವಾಸ್ಥ್ಯ ಹೃದಯ ಹಾಗೂ ದೈಹಿಕ ಕ್ಷಮತೆ ಉತ್ತಮಗೊಳ್ಳುತ್ತದೆ ಎಂದರು. ಕನ್ನಡಿಯಲ್ಲಿ ಮುಖ ನೋಡಿಕೊಂಡಂತೆ ಇಂದಿನ ಈ ಚಾರಣ ನಿಮ್ಮ ದೈಹಿಕ ಕ್ಷಮತೆಯನ್ನು ನೋಡಿಕೊಳ್ಳಲು ಸಹಕಾರಿಯಾಗಿದೆ. ಶಿಕ್ಷಕರಾಗುತ್ತಿರುವ ನೀವು ನಿರಂತರ ಅಭ್ಯಾಸ ರೂಢಿಸಿಕೊಂಡರೆ ಭವಿಷ್ಯದಲ್ಲಿ ಯಶಸ್ವಿ ಅಧ್ಯಾಪಕರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸರ್ಕಾರದ ಯೋಜನೆಯಂತೆ ಶಾಲಾ ಬ್ಯಾಗ್ ರಹಿತ ದಿನವನ್ನು ಸಾರ್ಥಕಗೊಳಿಸಲು ಇಂತಹ ಚಾರಣಗಳು ಸಹಕಾರಿಯಾಗಿ ಪುಸ್ತಕದ ಜ್ಞಾನವನ್ನು ಮಸ್ತಕಕ್ಕೆ ತುಂಬಿಕೊಂಡು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತ ಸಾಗುವುದೇ ಮುಖ್ಯವೆನಿಸಿದೆ ಎಂದು ಹೇಳಿದರು.ಮುಂಜಾನೆ ಬಿ.ಜಿ. ನಗರದಿಂದ ಕಾಲ್ನಡಿಗೆ ಆರಂಭಿಸಿದ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯದ 79 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭೈರಸಂದ್ರ ಗ್ರಾಮದ ಹದ್ದಿನಕಲ್ಲು ಹನುಮಂತರಾಯಸ್ವಾಮಿ ಬೆಟ್ಟಕ್ಕೆ ತೆರಳಿ ಬೆಟ್ಟದ ಮೇಲೆ ಶ್ರಮದಾನದ ಮೂಲಕ ದೇವಾಲಯ ಪ್ರಾಂಗಣದ ಸ್ವಚ್ಛಗೊಳಿಸಿದರು.ದೇವಸ್ಥಾನದ ಪೂಜಾ ಕೈಂಕರ್ಯಕ್ಕೆ ಆಗಮಿಸಿದ್ದ ಸಹಸ್ರಾರು ಭಕ್ತರ ನೆರವಿಗೆ ನಿಂತು ಸ್ವಚ್ಛತೆ ನಿರ್ವಹಿಸುವ ಮೂಲಕ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಭಕ್ತಾದಿಗಳ ಮೆಚ್ಚುಗೆಗೆ ಪಾತ್ರರಾದರು.ಕಾಲ್ನಡಿಗೆ ಜಾಥಾ ಹಾಗೂ ಶ್ರಮದಾನ ಪ್ರಕ್ರಿಯೆಯಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಸಿ.ಎಲ್. ಶಿವಣ್ಣ, ರಾಜಶೇಖರಮೂರ್ತಿ, ಪ್ರಾಧ್ಯಾಪಕರಾದ ಎ.ಎಚ್.ಗೋಪಾಲ್, ಎಂ.ಶೋಭಾ, ಲೋಕೇಶ್ ಕುಮಾರ್, ಎನ್.ಎಸ್.ಸೌಮ್ಯ, ಜಿ.ಹಂಪೇಶ್, ಸುದರ್ಶನ್ ಸೇರಿ ಹಲವರು ಇದ್ದರು.