ಹಸಿರು ಪಟಾಕಿಯನ್ನಷ್ಟೇ ಹಚ್ಚಿ: ನರೇಂದ್ರ ಸ್ವಾಮಿ

| Published : Oct 21 2025, 01:00 AM IST

ಸಾರಾಂಶ

ಅತ್ಯಂತ ಕಳಪೆ ಮಟ್ಟದ ವಾಯು ಮಾಲಿನ್ಯ ದೇಶ ರಾಜಧಾನಿ ದೆಹಲಿಯನ್ನು ಕಾಡುತ್ತಿದೆ. ಈ ಅಪಾಯ ನಮ್ಮ ಬೆಂಗಳೂರಿಗೂ ಬಂದೊದಗುವ ಸಾಧ್ಯತೆ ಅತೀ ಹೆಚ್ಚು ಇದೆ. ಇದನ್ನು ತಪ್ಪಿಸಲು ಸಾರ್ವಜನಿಕರು ಕೈ ಜೋಡಿಸಬೇಕಿದ್ದು, ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವುದು ಇಂದಿನ ಅಗತ್ಯ ಎಂದು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹೇಳಿದ್ದಾರೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಅತ್ಯಂತ ಕಳಪೆ ಮಟ್ಟದ ವಾಯು ಮಾಲಿನ್ಯ ದೇಶ ರಾಜಧಾನಿ ದೆಹಲಿಯನ್ನು ಕಾಡುತ್ತಿದೆ. ಈ ಅಪಾಯ ನಮ್ಮ ಬೆಂಗಳೂರಿಗೂ ಬಂದೊದಗುವ ಸಾಧ್ಯತೆ ಅತೀ ಹೆಚ್ಚು ಇದೆ. ಇದನ್ನು ತಪ್ಪಿಸಲು ಸಾರ್ವಜನಿಕರು ಕೈ ಜೋಡಿಸಬೇಕಿದ್ದು, ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವುದು ಇಂದಿನ ಅಗತ್ಯ ಎಂದು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹೇಳಿದ್ದಾರೆ.

‘ಬೆಳಕು ಉರಿಯಲಿ, ಮಾಲಿನ್ಯ ಅಳಿಯಲಿ’ ಎಂಬುದು ನಮ್ಮ ಉದ್ದೇಶ. ಆದಾಗ್ಯೂ ಸಂತೋಷಕ್ಕೆ ಪಟಾಕಿ ಹಚ್ಚಲೇಬೆಕೆನ್ನುವವರು ಹಸಿರು ಪಟಾಕಿ ಹಚ್ಚಿ ಸಂಭ್ರಮದಿಂದ ದೀಪಾವಳಿ ಆಚರಿಸಿ ಎಂದು ಕಿವಿ ಮಾತು ಹೇಳಿದ್ದಾರೆ.

ದೆಹಲಿಯಲ್ಲಿ ಕಳೆದ ವಾರದಿಂದ ವಾಯುಮಾಲಿನ್ಯ ಹೆಚ್ಚಾಗಿದ್ದು, ದೀಪಾವಳಿಯ ಮೊದಲ ದಿನವಾದ ಸೋಮವಾರ ಎಕ್ಯುಐ (ವಾಯು ಗುಣಮಟ್ಟದ ಸೂಚ್ಯಂಕ) 400ರ ಗಡಿ ದಾಟಿದೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ವಾಯುಮಾಲಿನ್ಯ ಅಳೆಯಲು ಮಾಪನ ಕೇಂದ್ರಗಳನ್ನು ಅಳವಡಿಸಿದ್ದೇವೆ. ನಾವೂ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕಕ್ಕೆ ಹತ್ತಿರವಿದ್ದರೂ ಆತಂಕ ಪಡುವ ಅಗತ್ಯವಿಲ್ಲ. ಸಾರ್ವಜನಿಕರು ಕೈ ಜೋಡಿಸಿದರೆ ಅವರ ಸಹಭಾಗಿತ್ವದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಾಡಬಹುದು ಎಂದು ನರೇಂದ್ರ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಪರಿಸರ, ಸಮಾಜದ ಬಗ್ಗೆ ಕಾಳಜಿ ವಹಿಸೋಣ:

ಹಸಿರು ಪಟಾಕಿಯೇ ಹಚ್ಚಬೇಕು. ರಾತ್ರಿ 8 ರಿಂದ 10 ಗಂಟೆ ನಡುವೆಯೇ ಪಟಾಕಿ ಹಚ್ಚಬೇಕು ಎಂಬ ಹಲವು ಉತ್ತಮ ನಿಯಮಗಳಿವೆ. ಈ ನಿಯಮಗಳನ್ನು ಪೊಲೀಸರಂತೆ ಶಿಕ್ಷೆ ವಿಧಿಸಿ ಪಾಲನೆ ಮಾಡುವಂತೆ ಮಾಡುವುದಿಲ್ಲ. ಬದಲಿಗೆ ಜನರೇ ಜಾಗೃತರಾಗಿ ಪರಿಸರ ಸ್ನೇಹಿಯಾಗುವಂತೆ ಕರೆ ನೀಡುತ್ತದೆ ಎಂದು ನರೇಂದ್ರ ಸ್ವಾಮಿ ಹೇಳಿದರು.

ಪಟಾಕಿ ಅಪಾಯಕಾರಿ, ಎಚ್ಚರವಿರಲಿ:

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೈಗಾರಿಕೆಗಳು ಹೆಚ್ಚಾಗುತ್ತಿವೆ. ವಾಹನ, ಕೈಗಾರಿಕೆಗಳಿಂದ ಮಾಲಿನ್ಯ ಹೆಚ್ಚಾಗಿದೆ. ಪಟಾಕಿಯಿಂದ ಇದು ಮತ್ತಷ್ಟು ಹೆಚ್ಚಾಗಿ ಮಕ್ಕಳು, ವೃದ್ಧರು ವಿಶೇಷವಾಗಿ ಅಸ್ತಮಾದಂತಹ ಅನಾರೋಗ್ಯ ಉಳ್ಳವರಿಗೆ ಅಪಾಯಕಾರಿ ಆಗಲಿದೆ. ಪರಿಸರ, ಮನುಷ್ಯರ ಜತೆಗೆ ಪ್ರಾಣಿಗಳ ಮೆಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ದೀಪಾವಳಿಯನ್ನು ಬೆಳಕಿನ ಹಬ್ಬವಾಗಿ ಆಚರಿಸೋಣ ಎಂದು ಹೇಳಿದರು.

ಹಸಿರು ಪಟಾಕಿ ಹಚ್ಚಿ, ನಕಲಿ ಬಗ್ಗೆ ಎಚ್ಚರ:

ಹಸಿರು ಪಟಾಕಿ ಸಾಂಪ್ರದಾಯಿಕ ಪಟಾಕಿಗಿಂತ ಕಡಿಮೆ ಶಬ್ದ ಮಾಲಿನ್ಯ, ವಾಯುಮಾಲಿನ್ಯ ಉಂಟು ಮಾಡುತ್ತವೆ. ಎಷ್ಟು ಡೆಸಿಬಲ್‌ ಶಬ್ದ ಉಂಟು ಮಾಡುತ್ತವೆ ಎಂಬ ಬಗ್ಗೆ ಕಂಪನಿಗಳಿಗೆ ಮಾನದಂಡ ನಿಗದಿ ಮಾಡಿರುತ್ತೇವೆ. ಹೀಗಾಗಿ ಹಸಿರು ಪಟಾಕಿ ಹೆಚ್ಚು ಅಪಾಯಕಾರಿಯಲ್ಲ. ಹೀಗಿದ್ದರೂ ಕೆಲ ಕಡೆ ಹಸಿರು ಪಟಾಕಿ ಎಂದು ನಕಲಿ ಹಸಿರು ಪಟಾಕಿ ಮಾರಾಟ ಮಾಡುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಈ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ತಿಳಿಸಿದ್ದು, ಸಾರ್ವಜನಿಕರೂ ಎಚ್ಚರ ವಹಿಸಬೇಕು ಎಂದು ನರೇಂದ್ರಸ್ವಾಮಿ ಕಿವಿ ಮಾತು ಹೇಳಿದರು.

-ಬಾಕ್ಸ್-

ನೀರಿನ ಮೂಲ ಕಲುಷಿತಗೊಳಿಸಿದ್ರೆ

ಕ್ರಮ: ನರೇಂದ್ರಸ್ವಾಮಿ ಎಚ್ಚರಿಕೆ

ರಾಜ್ಯಾದ್ಯಂತ ವಾಯುಮಾಲಿನ್ಯ, ನೀರಿನ ಮಾಲಿನ್ಯ ಪರಿಶೀಲನೆ ನಡೆಸಲಾಗುತ್ತಿದೆ. ನದಿ ನೀರಿನ ಮೂಲಗಳಿಗೆ ಪ್ರತಿಷ್ಠಿತ ಕಂಪನಿಗಳೇ ಶುದ್ಧೀಕರಣ ಮಾಡದೆ ವಿಷದ ನೀರು ಬಿಡುತ್ತಿವೆ. ಅಂಥ ಕಂಪನಿಗಳ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸುತ್ತಿದ್ದೇವೆ. ನಿಯಮ ಉಲ್ಲಂಘಿಸುವ ಕಂಪನಿಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಿಸಲಾಗುವುದು. ಜತೆಗೆ ಎನ್ವಿರಾನ್‌ಮೆಂಟಲ್‌ ಕಾಂಪೆನ್ಸೇಷನ್‌ ವಿಧಿಸಲಾಗುವುದು. ಈ ಬಗ್ಗೆ ಹೆಚ್ಚೆಚ್ಚು ಪರಿಶೀಲನೆ ನಡೆಸುವಂತೆ ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೂ ಸೂಚಿಸಿದ್ದೇನೆ ಎಂದು ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ತಿಳಿಸಿದರು.-ಬಾಕ್ಸ್-

ಏಕ ಬಳಕೆ ಪ್ಲಾಸ್ಟಿಕ್ ನಿಷೇಧಕ್ಕೆ ಕೈ ಜೋಡಿಸಿ

ಏಕಬಳಕೆ ಪ್ಲಾಸ್ಟಿಕ್‌ ನಿಷೇಧವಾಗಿದ್ದರೂ ಹೋಟೆಲ್‌ಗಳಲ್ಲಿ, ಕೆಲ ದೇವಾಲಯಗಳಲ್ಲೂ ಬಿಸಿ ಆಹಾರ, ಪ್ರಸಾದವನ್ನು ಪ್ಲಾಸ್ಟಿಕ್‌ ಪ್ಲೇಟ್‌, ಪ್ಯಾಕೇಜಿಂಗ್‌ ಬಾಕ್ಸ್‌ಗಳಲ್ಲಿ ನೀಡಿ ಕ್ಯಾನ್ಸರ್‌ಗೆ ದಾರಿ ಮಾಡಿಕೊಡಲಾಗುತ್ತದೆ.

ಪ್ರತಿ ದಿನ ಸುಮಾರು 10 ಲಕ್ಷ ಹಾಲು, ಮೊಸರಿನ ಪ್ಯಾಕೆಟ್‌ ಬಳಕೆ ಆಗುತ್ತದೆ. ತುದಿಯನ್ನು ಕಟ್‌ ಮಾಡಿ (ಎರಡು ಭಾಗ) ಬಿಸಾಡಲಾಗುತ್ತದೆ. ಚಿಕ್ಕ ಪ್ಲಾಸ್ಟಿಕ್‌ ತುಂಡು ರೀಸೈಕಲ್‌ ಮಾಡಲು ಸಾಧ್ಯವಿಲ್ಲ. ಚಿಕ್ಕ ಚಿಕ್ಕ ಅಲಕ್ಷ್ಯದಿಂದಲೂ ಪರಿಸರಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ. ಹೀಗಾಗಿ ಪ್ಲಾಸ್ಟಿಕ್‌ಗೆ ಜನರೇ ನೋ ಹೇಳಬೇಕು ಎಂದು ಪಿ.ಎಂ. ನರೇಂದ್ರಸ್ವಾಮಿ ಕರೆ ನೀಡಿದರು.

-ಬಾಕ್‌-

ಮಾಲಿನ್ಯ ತಡೆಗೆ ಮಂಡಳಿ ಸರ್ವ ಸನ್ನದ್ಧ

ರಾಜ್ಯದಲ್ಲಿ ಈವರೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಮಪರ್ಕವಾಗಿ ಕೆಲಸ ಮಾಡುತ್ತಿಲ್ಲ ಎಂಬ ಅಪವಾದವಿತ್ತು. ಮಂಡಳಿಯಲ್ಲಿ 780 ಮಂಜೂರಾದ ಹುದ್ದೆಗಳಿಗೆ 240 ಮಂದಿ ಮಾತ್ರ ಇದ್ದಾರೆ. ಹೀಗಾಗಿ ಖಾಲಿ ಇರುವ ಹುದ್ದೆಗಳ ಶೇ.80 ರಷ್ಟು ಭರ್ತಿಗೆ ಕ್ರಮ ಕೈಗೊಂಡಿದ್ದೇವೆ. ಹಾಲಿ ಇದ್ದವರಿಗೆ ಬಡ್ತಿ ನೀಡಿದ್ದೇವೆ. 71 ಹೊಸ ವಾಹನ ನೀಡಿ ನೈತಿಕ ಸ್ಥೈರ್ಯ ತುಂಬಿದ್ದೇವೆ. ಸುವರ್ಣ ಮಹೋತ್ಸವ ಮುಗಿದ ಬಳಿಕ ರಾಜ್ಯಾದ್ಯಂತ ಮಾಲಿನ್ಯ ನಡೆಸುವ ಕಂಪನಿಗಳ ಮೇಲೆ ದಾಳಿ ಮಾಡಲಾಗುವುದು. ಎಂತಹದ್ದೇ ಪ್ರಭಾವಿ ಆಗಿದ್ದರೂ ಬಿಡುವುದಿಲ್ಲ ಎಂದು ನರೇಂದ್ರ ಸ್ವಾಮಿ ಎಚ್ಚರಿಕೆ ನೀಡಿದರು.