ಕೊಂಚ ತಗ್ಗಿದ ವರುಣನ ಅಬ್ಬರ: ಅಲ್ಲಲ್ಲಿ ಹಾನಿ

| Published : Jul 22 2024, 01:16 AM IST

ಕೊಂಚ ತಗ್ಗಿದ ವರುಣನ ಅಬ್ಬರ: ಅಲ್ಲಲ್ಲಿ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ತೀರ್ಥಹಳ್ಳಿ, ಸಾಗರ, ಹೊನಗರ ಸೇರಿದಂತೆ ಹಲವೆಡೆ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಮಳೆ ಬಿಡುವು ನೀಡಿದ್ದು, ಮೋಡ ಕವಿದ ವಾತಾವರಣದ ನಡುವೆ ಬಿಟ್ಟುಬಿಟ್ಟು ಸಾಧಾರಣ ಮಳೆಯಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಳೆದೊಂದು ವಾರದಿಂದ ಅಬ್ಬರಿಸಿದ್ದ ವರುಣ ಭಾನುವಾರ ಕೊಂಚ ಶಾಂತನಾಗಿದ್ದ. ಹೊಸನಗರ, ಸಾಗರ, ತೀರ್ಥಹಳ್ಳಿ ಸೇರಿದಂತೆ ಎಲ್ಲ ಮಳೆ ಪ್ರಮಾಣ ಕಡಿಮೆಯಾಗಿದೆ. ಶನಿವಾರ ತಡರಾತ್ರಿ, ಭಾನುವಾರ ಸಂಜೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.

ತೀರ್ಥಹಳ್ಳಿ, ಸಾಗರ, ಹೊನಗರ ಸೇರಿದಂತೆ ಹಲವೆಡೆ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಮಳೆ ಬಿಡುವು ನೀಡಿದ್ದು, ಮೋಡ ಕವಿದ ವಾತಾವರಣದ ನಡುವೆ ಬಿಟ್ಟುಬಿಟ್ಟು ಸಾಧಾರಣ ಮಳೆಯಾಗಿದೆ. ಮಳೆ ಪ್ರಮಾಣ ಕಡಿಮೆ ಇದ್ದರೂ ಗಾಳಿ ಮಳೆಗೆ ಕೆಲವು ಕಡೆಗಳಲ್ಲಿ ಮನೆ ಜಾನುವಾರು ಕೊಟ್ಟಿಗೆಗಳಿಗೆ ಹಾನಿ ಸಂಭವಿಸಿದೆ. ಸಾಗರ ತಾಲೂಕಿನ ಆನಂಪುರ, ಹೊನಗರ ತಾಲೂಕಿನ ರಿಪ್ಪನ್‌ಪೇಟೆ, ತೀರ್ಥಹಳ್ಳಿ ಭಾಗದಲ್ಲಿ ಮನೆಗಳಿಗೆ ಹಾನಿ ಸಂಭವಿಸಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 27.40 ಮಿ.ಮೀ. ಮಳೆಯಾಗಿದೆ. ಶಿವಮೊಗ್ಗದಲ್ಲಿ 13.30 ಮಿ.ಮೀ, ಭದ್ರಾವತಿ 8.60 ಮಿ.ಮೀ, ತೀರ್ಥಹಳ್ಳಿ 37.90 ಮಿ.ಮೀ, ಸಾಗರದಲ್ಲಿ 41.70 ಮಿ.ಮೀ, ಶಿಕಾರಿಪುರ 12.30 ಮಿ.ಮೀ, ಸೊರಬದಲ್ಲಿ 22.90 ಮಿ.ಮೀ, ಹೊಸನಗರದಲ್ಲಿ 55.10 ಮಿ.ಮೀ ಮಳೆಯಾಗಿದೆ.

ಜಲಾಶಯಗಳಲ್ಲಿ ತಗ್ಗಿದ ಒಳ ಹರಿವು:

ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಜಲಾಶಯಗಳಲ್ಲೂ ಒಳ ಹರಿವಿನ ಪ್ರಮಾಣ ತಗ್ಗಿದೆ. ತುಂಗಾ ಜಲಾಶಯಕ್ಕೆ ಭಾನುವಾರ 53012 ಕ್ಯುಸೆಕ್‌ ನೀರು ಜಲಾಶಯಕ್ಕೆ ಹರಿದು ಬಂದಿದೆ. ಶನಿವಾರ 65796 ಕ್ಯುಸೆಕ್‌ ನೀರು ಹರಿದು ಬಂದಿತ್ತು. ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯೂ ಮಳೆ ಪ್ರಮಾಣ ಕುಗ್ಗಿದ್ದು, ಭದ್ರಾ ಜಲಾಶಯದ ಒಳ ಹರಿವು ಕಡಿಮೆಯಾಗಿದೆ. ಶನಿವಾರ 46876 ಕ್ಯುಸೆಕ್‌ ನೀರು ಜಲಾಶಯಕ್ಕೆ ಹರಿದು ಬಂದಿದ್ದರೆ, ಭಾನುವಾರ 23674 ಕ್ಯುಸೆಕ್‌ ನೀರು ಹರಿದಿದೆ. 186 ಗರಿಷ್ಠ ಮಟ್ಟ ಹೊಂದಿರುವ ಜಲಾಶಯದ ಮಟ್ಟ ಸದ್ಯ 164.4 ಕ್ಕೆ ಏರಿಕೆ ಯಾಗಿದೆ. ಒಟ್ಟು 71.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಈಗ 47.06 ಟಿಎಂಸಿ ನೀರು ಸಂಗ್ರಹವಾಗಿದೆ.ಇನ್ನೂ ಶರಾವತಿ ಜಲಾನಯನ ಪ್ರದೇಶದಲ್ಲೂ ಮಳೆ ಪ್ರಮಾಣ ತಗ್ಗಿದ್ದು, ಲಿಂಗನಮಕ್ಕಿ ಶನಿವಾರ ಜಲಾಶಯಕ್ಕೆ 69724 ಕ್ಯುಸೆಕ್ ನೀರು ಹರಿದು ಬಂದಿದ್ದು, ಭಾನುವಾರ 48793 ಕ್ಯುಸೆಕ್‌ಗೆ ತಗ್ಗಿದೆ. ಗರಿಷ್ಟ 1819 ಅಡಿ ಸಾಮರ್ಥ್ಯದ ಜಲಾಶಯದ ಮಟ್ಟ ಸದ್ಯ 17996.05 ಅಡಿಗೆ ಏರಿಕೆಯಾಗಿದೆ.

ಮನೆ ಬಿದ್ದು ಗಾಯಗೊಂಡಿದ್ದವನ ಆರೋಗ್ಯ ವಿಚಾರಿಸಿದ ಸಂಸದ

ಶಿಕಾರಿಪುರ ತಾಲ್ಲೂಕು ಕಪ್ಪನಹಳ್ಳಿ ಗ್ರಾಮದ ಶಿವಮೂರ್ತಿ ಎಂಬುವವರ ಮನೆಯು ತೀವ್ರ ಮಳೆಯಿಂದ ಕುಸಿದು ಬಿದ್ದಿತ್ತು. ಶಿವಮೂರ್ತಿ ಹಾಗೂ ಕುಟುಂಬದ ಸದಸ್ಯರು ಗಾಯಗೊಂಡು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಸರ್ಕಾರದಿಂದ ಮನೆ ನಿರ್ಮಾಣ ಸೇರಿದಂತೆ ಇನ್ನಿತರ ಅಗತ್ಯ ಅನುದಾನ ಒದಗಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ವಿದ್ಯುತ್‌ ಕಂಬಗಳು ಉರುಳಿ ಮೆಸ್ಕಾಂ ಲಕ್ಷಾಂತರ ರು.ನಷ್ಟ

ಆನಂದಪುರ : ಸ್ಥಳೀಯ ಸುತ್ತಮುತ್ತ ವಾರದಿಂದ ಸುರಿಯುತ್ತಿರುವ ಮಳೆ ಹಾಗೂ ಬೀಸಿದ ಗಾಳಿಯಿಂದಾಗಿ ಗ್ರಾಮೀಣ ಭಾಗದ ರಸ್ತೆಯ ಬದಿಯಲ್ಲಿದ್ದ ಮರಗಳು ಉರುಳಿ ವಿದ್ಯುತ್ ಕಂಬಗಳು ತುಂಡಾಗಿ ಲಕ್ಷಾಂತರ ರು.ನಷ್ಟಗೊಂಡಿದೆ.

ಮಳೆಯೊಂದಿಗೆ ಬೀಸಿದ ಗಾಳಿಯಿಂದ ಇರುವಕ್ಕಿ, ಗೇರ್ ಬೀಸ್, ಮಲಂದೂರ್, ಬಳ್ಳಿ ಬೈಲು, ಹೊಸಗುಂದ, ತಾವರೆಹಳ್ಳಿ, ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ 16 ಹೆಚ್ಚು ವಿದ್ಯುತ್ ಕಂಬಗಳು ಮರುದಿದ್ದು ನಾಲ್ಕು ಲಕ್ಷಕ್ಕೂ ಅಧಿಕ ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ.

ಮುರಿದಂತಹ ಕಂಬಗಳಿಗೆ ಹೊಸ ಕಂಬಗಳನ್ನು ಹಾಕಿ, ಮರಗಳನ್ನು ತೆರವುಗೊಳಿಸಿ ಗ್ರಾಮಾಂತರ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ನೀಡಲು ಮೆಸ್ಕಾಂ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.

ಮರ ತೆರವುಗೊಳಿಸುವಂತೆ ಆಗ್ರಹ: ಶಿಕಾರಿಪುರ ರಾಷ್ಟ್ರೀಯ ಹೆದ್ದಾರಿಯ ದಾಸಕೊಪ್ಪ ಗ್ರಾಮದಲ್ಲಿ ಹೆದ್ದಾರಿಯ ಪಕ್ಕದಲ್ಲಿ ಒಣಗಿ ನಿಂತಂತಹ ಸಾಗುವಾನಿ ಮರ ಬೀಳುವ ಹಂತದಲ್ಲಿದ್ದು, ಮರದ ಪಕ್ಕದಲ್ಲಿ ವಿದ್ಯುತ್ ಲೈನ್ ಹಾದು ಹೋಗಿದೆ. ಯಾವುದೇ ಅನಾಹುತ ಸಂಭವಿಸುವ ಮೊದಲು ಅರಣ್ಯ ಇಲಾಖೆಯವರಾಗಲಿ. ಮೆಸ್ಕಾಂ ಇಲಾಖೆಯವರಾಗಲಿ ತಕ್ಷಣವೇ ಮರವನ್ನು ತೆರವುಗೊಳಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಭಾರಿ ಮಳೆಗೆ ರಸ್ತೆ ಮಧ್ಯ ಹಗೇವು

ರಿಪ್ಪನ್‍ಪೇಟೆ: ಸಮೀಪದ ಹುಂಚ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮಠದ ಜಡ್ಡು ಎಸ್.ಸಿ.ಕಾಲೋನಿ-ನಾಗರಹಳ್ಳಿ ಸಂಪರ್ಕದ ಸೇತುವೆ ಭಾರಿ ಮಳೆಗೆ ಕುಸಿದು ರಸ್ತೆ ಮಧ್ಯವೇ ದೊಡ್ಡ ಗಾತ್ರದ ಹಗೇವು ಬಿದ್ದಿದ್ದು ಭಾರಿ ಇದರಿಂದ ರೈತ ನಾಗರೀಕರು ಭಯಬೀತರಾಗಿದ್ದಾರೆ.

ಸಂಪರ್ಕ ರಸ್ತೆಯಲ್ಲಿ ಬೃಹತ್ ಗಾತ್ರದ ಹಗೇವು ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಹುಂಚ ಗ್ರಾಮ ಪಂಚಾಯ್ತಿ ಆಧ್ಯಕ್ಷೆ ಸುಮಂಗಳ ದೇವರಾಜ್ ಮತ್ತು ಗ್ರಾಮ ಪಂಚಾಯ್ತಿ ಸದಸ್ಯ ದೇವೇಂದ್ರ ಜೈನ್,ಪಂಚಾಯ್ತಿ ಅಭಿವೃದ್ಧಿ ಆಧಿಕಾರಿ ರಮೇಶ್ ಹಾಗೂ ಸತೀಶ್ ಇನ್ನಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತುರ್ತು ರಸ್ತೆ ಮಧ್ಯದಲ್ಲಿ ಬಿದ್ದಿರುವ ಹೊಂಡವನ್ನು ತುಂಬಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿ ಉಳಿದಂತೆ ಸಂಪರ್ಕ ಸೇತುವೆಯನ್ನು ಮಳೆ ಕಡಿಮೆ ಯಾಗುತ್ತಿದ್ದಂತೆ ದುರಸ್ತಿಗೊಳಿಸುವುದಾಗಿ ತಿಳಿಸಿದರು.

ಮನೆ ಮೇಲೆ ಮರ ಬಿದ್ದು ಹಾನಿ

ಬ್ಯಾಕೋಡು: ತಾಲೂಕಿನ ಮರಾಠಿ ಗ್ರಾಮದಲ್ಲಿ ಸುರಿದ ಗಾಳಿ ಮಳೆಯ ಅಬ್ಬರಕ್ಕೆ ಶನಿವಾರ ಮುರಳ್ಳಿಯ ರೈತ ಹಾಲು ಅವರ ಮನೆಯ ಹೆಂಚು, ತಗಡಿನ ಶೀಟ್ ಗಳು ಹಾರಿ ಹೋಗಿವೆ. ಮನೆಯಲ್ಲಿದ್ದ ಸಾಮಗ್ರಿಗಳು ನೀರಿನಲ್ಲಿ ತೋಯ್ದು ಹೋಗಿವೆ. ಇದೇ ಗ್ರಾಮದ ರೈತ ಮಾಲು ಅವರ ಮನೆ ಮೇಲೆ ಅಡಿಕೆ ಹಾಗೂ ಬೃಹತ್ ಕಾಡು ಮರ ಮುರಿದು ಬಿದ್ದಿದೆ. ಇನ್ನು ಕೆಲವು ಮನೆಗಳ ಚಾವಣಿ ಹಾರಿದವು. ಇದರಿಂದ ದಿಕ್ಕು ತೋಚದಾಯಿತು ಎಂದು ತೋಡಿಕೊಂಡರು.

ಸದ್ಯ ಘಟನೆ ಬಗ್ಗೆ ಮಾಹಿತಿ ನೀಡಿದರು ಸಹ ಸ್ಥಳೀಯ ಗ್ರಾಮ ಪಂಚಾಯ್ತಿ, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಕೊಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮದ ಹರಿಶ್ ಆಗ್ರಹಿಸಿದ್ದಾರೆ.