ಸಾರಾಂಶ
ಕೊಪ್ಪಳ:
ಬೆಂಗಳೂರಿನ ದೇವನಹಳ್ಳಿ ಬಳಿ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದ್ದಕ್ಕೆ ನಗರದ ಅಶೋಕ ವೃತ್ತದಲ್ಲಿ ಕಾರ್ಖಾನೆ ವಿರೋಧಿ ಹೋರಾಟಗಾರರು, ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ, ಪರಿಸರ ಹಿತರಕ್ಷಣಾ ವೇದಿಕೆ ಸದಸ್ಯರು ವಿಜಯೋತ್ಸವ ಆಚರಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಪ್ರಧಾನ ಸಂಚಾಲಕ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ೧೧೯೮ ದಿನಗಳ ಸುದೀರ್ಘ ಹೋರಾಟದ ನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತಪರ ಎಂಬ ಸಂದೇಶ ನೀಡಿದ್ದು, ೧೭೭೭ ಎಕರೆ ಭೂಮಿಯ ಸ್ವಾಧೀನ ಕೈಬಿಟ್ಟಿರುವುದು ಸ್ವಾಗತಾರ್ಹ. ಅದರಂತೆ ಕೊಪ್ಪಳ ಸೇರಿದಂತೆ ರಾಜ್ಯದ ವಿವಿಧೆಡೆ ಕಾರ್ಖಾನೆ, ಅಭಿವೃದ್ಧಿ ಹೆಸರಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವುದು ಸಹ ಕೈಬಿಡಬೇಕು. ಕೃಷಿ ಭೂಮಿ ಉಳಿಯಬೇಕು, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ತೆಗೆಯಬೇಕು. ದೇವನಹಳ್ಳಿ ಮಾದರಿಯಲ್ಲಿ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಮೋಸದಿಂದ ಬಂದಿರುವ, ಹೆಸರು ಬದಲಿಸಿಕೊಂಡಿರುವ ಬಲ್ಡೋಟಾದ ಬಿಎಸ್‌ಪಿಎಲ್ ಕಾರ್ಖಾನೆ ಸೇರಿದಂತೆ ಜನರಿಗೆ ಮಾರಕವಾಗಿರುವ ಎಲ್ಲ ಕಂಪನಿಗಳನ್ನು ಕೊಪ್ಪಳ ಬಿಟ್ಟು ತೊಲಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಮುಖಂಡ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಆ. ೪ರಂದು ನಗರಕ್ಕೆ ಸಿಎಂ ಸಿದ್ದರಾಮಯ್ಯನವರು ಆಗಮಿಸುತ್ತಿದ್ದು ಅಂದು ಅವರು ಬಲ್ಡೋಟಾ ಹಾಗೂ ಕಿರ್ಲೋಸ್ಕರ್ ವಿಸ್ತರಣೆಗೆ ನೀಡಿರುವ ಅನುಮತಿಯನ್ನು ಅಧಿಕೃತವಾಗಿ ರದ್ದುಗೊಳಿಸಿ ಆದೇಶ ನೀಡಿದರೆ ಅವರ ಜನ್ಮದಿನವನ್ನು ಇಲ್ಲಿನ ಜನರೇ ದೊಡ್ಡಮಟ್ಟದಲ್ಲಿ ಅತ್ಯಂತ ಸಡಗರದಿಂದ ಆಚರಿಸುತ್ತಾರೆ. ಇನ್ನು ದೇವನಹಳ್ಳಿಯ ಹೋರಾಟ ರಾಜ್ಯಕ್ಕೆ ಮಾದರಿಯಾಗಿದ್ದು, ೧೨ ವರ್ಷ ಇಲ್ಲದ ಕಾಳಜಿ ಮತ್ತು ಪ್ರೀತಿ ಕಾರ್ಖಾನೆಗಳಿಗೆ ಈಗ ಉಕ್ಕಿ ಹರಿಯುತ್ತಿದೆ. ಅವರ ಆಸೆ-ಆಮಿಷಗಳಿಗೆ ಜನ ಬಲಿಯಾಗುವುದಿಲ್ಲ, ಅವರ ವಿರುದ್ಧ ಹೋರಾಟ ಇನ್ನಷ್ಟು ತೀವ್ರಗೊಳ್ಳುತ್ತದೆ, ಕಾರ್ಖಾನೆಗಳ ಕಪಟ ಪರಿಸರ ಪ್ರೇಮ ನಮಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಚಳವಳಿ ಮುಖಂಡ ಬಸವರಾಜ ಶೀಲವಂತರ ಮಾತನಾಡಿ, ಸಿದ್ದರಾಮಯ್ಯ ಅವರ ದೇವನಹಳ್ಳಿ ಭೂಮಿ ರೈತರಿಗೆ ಬಿಡುವ ನಿರ್ಣಯವನ್ನು ಸ್ವಾಗತಿಸುತ್ತೇವೆ. ಅದೇ ರೀತಿ ನಮ್ಮಲ್ಲೂ ಮಾಡಲಿ, ಕಾರ್ಖಾನೆ ವಿರೋಧಿ ಹೋರಾಟಗಾರರ ಮನವಿ ಆಲಿಸಿ, ಕೊಪ್ಪಳಕ್ಕೆ ಬರುವ ಮುನ್ನವೇ ಕಾರ್ಖಾನೆ ರದ್ದುಗೊಳಿಸಿದ ಬಗ್ಗೆ ಆದೇಶ ನೀಡಿ ಬರಲಿ ಎಂದರು.
ಸಂಘಟಕರಾದ ಕೆ.ಬಿ. ಗೋನಾಳ, ಮಹಾಂತೇಶ ಕೊತಬಾಳ, ಶರಣು ಗಡ್ಡಿ, ಭೀಮಸೇನ ಕಲಕೇರಿ, ತಿಪ್ಪಯ್ಯಸ್ವಾಮಿ ಹೊಲಗೇರಿ, ಕನಕಪ್ಪ ಪೂಜಾರ, ಬಂದೇನವಾಜ್ ಮಣಿಯಾರ, ಗಾಳೆಪ್ಪ ಮುಂಗೋಲಿ, ಕಾಶಿಮ್ ಸರ್ದಾರ, ನಾಗರಾಜ್ ಜಿ., ಮಕ್ಬೂಲ್ ರಾಯಚೂರು, ಪರಶುರಾಮ ವಣಗೇರಿ ಇಂದರಗಿ, ಮುತ್ತುರಾಜ್ ಹಡಪದ, ಗವಿಸಿದ್ದಪ್ಪ ಹಲಿಗಿ ಕುಣಿಕೇರಿ, ರಮೇಶ ಬೂದಗುಂಪಿ, ಮುದುಕಪ್ಪ ಹೊಸಮನಿ, ಆನಂದ ಗೊಂಡಬಾಳ, ಗವಿಸಿದ್ದಪ್ಪ ಹಂಡಿ ಇದ್ದರು.