ಧರ್ಮಸ್ಥಳದಂತೆ ಹಾಸನಕ್ಕೂ ಪಾದಯಾತ್ರೆ ಮಾಡಲಿ: ಆಯನೂರು

| Published : Aug 31 2025, 01:08 AM IST

ಸಾರಾಂಶ

ಬಿಜೆಪಿ ಹಾಗೂ ಜೆಡಿಎಸ್‌ನವರು ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸಿದಂತೆ ಹಾಸನಕ್ಕೂ ವಿಪಕ್ಷಗಳು ಪಾದಯಾತ್ರೆ ರೀತಿ ಪ್ರತಿಭಟನಾ ಮೆರವಣಿಗೆ ನಡೆಸಬೇಕು ಎಂದು ಮಾಜಿ ಸಂಸದ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಿಜೆಪಿ ಹಾಗೂ ಜೆಡಿಎಸ್‌ನವರು ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸಿದಂತೆ ಹಾಸನಕ್ಕೂ ವಿಪಕ್ಷಗಳು ಪಾದಯಾತ್ರೆ ರೀತಿ ಪ್ರತಿಭಟನಾ ಮೆರವಣಿಗೆ ನಡೆಸಬೇಕು ಎಂದು ಮಾಜಿ ಸಂಸದ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಅಪ್ರಬುದ್ಧರಾಗಿದ್ದು, ರಾಜಕಾರಣದ ಹೆಜ್ಜೆಗಳನ್ನು ಇಡುತ್ತಿದ್ದಾರೆಯೇ ಹೊರತು, ಧರ್ಮದ ಹೆಜ್ಜೆಗಳಲ್ಲ, ಜನರ ಆಶಯಗಳ ಕಡೆಗೆ ಅವರ ಗಮನವಿಲ್ಲ. ವಿವಾದಗಳೇ ಇವರಿಗೆ ಮುಖ್ಯ ಎಂದು ವಾಗ್ಧಾಳಿ ನಡೆಸಿದರು.

ಇಡೀ ರಾಜ್ಯದಲ್ಲಿ ಅತಿವೃಷ್ಟಿಯಾಗುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಸಮಸ್ಯೆಗಳು ಬೇಕಾದಷ್ಟಿವೆ. ಆದರೆ, ಇವೆಲ್ಲವನ್ನು ಬಿಟ್ಟು ವಿರೋಧ ಪಕ್ಷಗಳು ತಮ್ಮ ಸ್ಥಾನವನ್ನು ಮತ್ತು ವಿವೇಕವನ್ನು ಮರೆತು ಬೇಜವಾಬ್ದಾರಿಯಿಂದ ವರ್ತಿಸಿ ಸದನವನ್ನೇ ವ್ಯರ್ಥಗೊಳಿಸಿದರು. ಬಜೆಟ್ ಮಂಡನೆಯ ಸಂದರ್ಭದಲ್ಲೂ ವಿರೋಧ ಪಕ್ಷವಾಗಿ ಜನರ ಸಮಸ್ಯೆಗಳತ್ತ ಗಮನ ಸೆಳೆಯಲಿಲ್ಲ. ಬೇಡದ ಹನಿಟ್ರ್ಯಾಪ್ ವಿಚಾರ ಮಾತನಾಡಿ ಹಲವು ಬಿಜೆಪಿ ಶಾಸಕರು ಸಸ್ಪೆಂಡ್ ಕೂಡ ಆದರು. ಬಿಜೆಪಿ ಮತ್ತು ಜೆಡಿಎಸ್ ಶಾಸಕರುಗಳಲ್ಲಿ ಪ್ರಬುದ್ಧತೆಯೇ ಇಲ್ಲ. ನಾಯಕತ್ವದ ಪರಿಕಲ್ಪನೆಯೇ ಇಲ್ಲ ಎಂದು ಟೀಕಿಸಿದರು.

ಧರ್ಮಸ್ಥಳಕ್ಕೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಪಾದಯಾತ್ರೆ ಮಾಡುತ್ತಾರಂತೆ. ಇವರ ಈ ಹೆಜ್ಜೆಗಳು ರಾಜಕಾರಣದ ಹೆಜ್ಜೆಗಳೇ ಹೊರತು, ಧರ್ಮದ ಹೆಜ್ಜೆಗಳಲ್ಲ. ಈ ಹಿಂದೆ ಇವರು ಹಾಸನಕ್ಕೆ ಏಕೆ ಪಾದಯಾತ್ರೆ ಮಾಡಲಿಲ್ಲ. ಹಾಸನದಲ್ಲಿ ಇವರದೇ ಪಕ್ಷದ ಮುಖಂಡನೊಬ್ಬನ ಅತ್ಯಾಚಾರಗಳು, ಅನಾಚಾರಗಳು ನಡೆದವು. ಈ ನಾಯಕರಿಗೆ ರಾಜಕೀಯ ಚಹರೆಯೇ ಇಲ್ಲದ ವಿವಾದಗಳನ್ನು ಸೃಷ್ಟಿಸುವುದೇ ಚಾಳಿಯಾಗಿದೆ ಎಂದು ದೂರಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೊದಲು ಧರ್ಮಸ್ಥಳದ ಬಗ್ಗೆ ಮಾತನಾಡಿದರು. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಎಂಬ ಮಾತನ್ನು ಇವರ ಹೇಳಿದ ಮೇಲೆ ಬಿಜೆಪಿಯವರಿಗೆ ಜ್ಞಾನೋದಯವಾಯಿತು. ಧರ್ಮಸ್ಥಳದ ಬಗ್ಗೆ ಏನಾದರೂ ಮತ್ತೆ ಪ್ರೀತಿ ಹುಟ್ಟಿದ್ದರೆ ಅದಕ್ಕೆ ಸರ್ಕಾರವೇ ಕಾರಣ. ಹೆಗ್ಗಡೆಯವರು ದೋಷಮುಕ್ತರಾಗುತ್ತಾರೆ. ತಪ್ಪು ಮಾಡಿದ್ದರೆ ಶಿಕ್ಷೆಯೂ ಆಗಲಿ ಎಂದು ಹೇಳಿದರು.

ನಾಡಹಬ್ಬ ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ಬಿಜೆಪಿಯವರು ವಿನಾಕಾರಣ ಅಪಸ್ವರ ಎತ್ತುತ್ತಿದ್ದಾರೆ. ಒಬ್ಬ ಮಹಿಳೆ ಎಂಬ ಕಾರಣಕ್ಕೆ ಇದನ್ನು ಒಪ್ಪುತ್ತಿಲ್ಲ. ಈ ಹಿಂದೆ ನಿಸಾರ್ ಅಹ್ಮದ್ ಅವರನ್ನು ಒಪ್ಪಿದ್ದವರು ಈಗ ಯಾಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮೈಸೂರು ಮಹಾರಾಜರೇ ತಮ್ಮ ಮೆರವಣಿಗೆಯಲ್ಲಿ ಆಗಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಅಂಬಾರಿ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ರಾಜ ಪದ್ಧತಿ ರದ್ಧಾದ ಮೇಲೆ ಇದು ನಾಡಹಬ್ಬವಾಗಿದೆ. ಬಾನು ಮುಷ್ತಾಕ್ ಮೆರವಣಿಗೆಗೆ ಚಾಲನೆ ನೀಡುತ್ತಾರೆ. ಅವರನ್ನು ಧರ್ಮದ ಪ್ರತಿನಿಧಿಯಾಗಿ ಆಯ್ಕೆಮಾಡಿಲ್ಲ. ಕನ್ನಡದ ಭಾಷೆಯನ್ನು ಪ್ರಪಂಚದ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಕ್ಕೆ ಆಯ್ಕೆ ಮಾಡಲಾಗಿದೆ. ನಾನು ಚಾಮುಂಡಿಗೆ ಹರಕೆ ಹೊತ್ತಿದ್ದೆ ಈಗ ಅದನ್ನು ತೀರಿಸಲೆಂದೇ ನನ್ನನ್ನು ಆಯ್ಕೆಮಾಡಿದ್ದಾರೆ ಎಂದು ಬಾನು ಹೇಳಿದ್ದಾರೆ. ಸಾಹಿತ್ಯದ ಸಂದರ್ಭದಲ್ಲಿ ಬಂಡಾಯ, ದಲಿತ ಎಂಬ ಎಲ್ಲಾ ವಿರೋಭಾಸಗಳಿವೆ. ಅದನ್ನೇ ಇಟ್ಟುಕೊಂಡು ಈಗ ಟೀಕಿಸುವುದು ಸರಿಯಲ್ಲ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್, ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್, ಜಿಲ್ಲಾ ವಕ್ತಾರ ರಮೇಶ್ ಶಂಕರಘಟ್ಟ, ಪ್ರಮುಖರಾದ ಜಿ.ಡಿ. ಮಂಜುನಾಥ್, ಧೀರರಾಜ್ ಹೊನ್ನವಿಲೆ, ಮಂಜುನಾಥ ಬಾಬು, ಆರ್. ರಾಜಶೇಖರ್, ಹಾಲೇಶ್, ಸ್ಟೆಲ್ಲಾ ಮಾರ್ಟಿನ್, ಪ್ರತಾಪ್, ಬಸವರಾಜ್ ಇತರರು ಹಾಜರಿದ್ದರು.