ಸಾರಾಂಶ
ಪಟ್ಟಣದಲ್ಲಿ ಟ್ರ್ಯಾಕ್ಟರ್ ಮಾಲೀಕರು- ಚಾಲಕರ ಸಂಘದಿಂದ ಅಂಬಾರಿ ಆನೆ ಅರ್ಜುನನ ಶ್ರದ್ಧಾಂಜಲಿ ಸಭೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಗಡಿ ಕಾಯುವ ಸೈನಿಕರು ತುರ್ತು ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ವೀರ ಮರಣ ಹೊಂದುವಂತೆ ಮೈಸೂರು ಅಂಬಾರಿ ಆನೆ ಅರ್ಜುನ ವೀರ ಮರಣ ಹೊಂದಿದ್ದಾನೆ ಎಂದು ಎನ್.ಆರ್.ಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚೈತನ್ಯ ವೆಂಕಿ ಹೇಳಿದರು.
ಪಟ್ಟಣದ ಜೇಸಿ ವೃತ್ತದಲ್ಲಿ ಟ್ರ್ಯಾಕ್ಟರ್ ಮಾಲೀಕರು ಮತ್ತು ಚಾಲಕರ ಸಂಘದಿಂದ ವೀರ ಮರಣ ಹೊಂದಿದ ಅಂಬಾರಿ ಆನೆ ಅರ್ಜುನನಿಗೆ ಶನಿವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.ಸತತ ಎಂಟು ವರ್ಷಗಳ ಕಾಲ ನಾಡದೇವತೆ ಚಾಮುಂಡೇಶ್ವರಿಯ ಅಂಬಾರಿ ಹೊತ್ತು ಸೇವೆ ಸಲ್ಲಿಸಿದ ಅರ್ಜುನನ ಕಾರ್ಯ ಯಾರೂ ಮರೆಯಲಾಗದ್ದು. ಪುಂಡ ಕಾಡಾನೆ ಸೆರೆ ಸಂದರ್ಭದಲ್ಲಿ ಅಚಾನಕ್ ಆಗಿ ಎದುರಾದ ದಾಳಿಯಲ್ಲಿ ಇತರೆ ಮೂರು ಸಾಕಾನೆಗಳು ಹಾಗೂ ಮಾವುತರು, ಅರಣ್ಯ ಸಿಬ್ಬಂದಿ ಪ್ರಾಣ ಉಳಿಸಿ ವೀರಾವೇಶದಿಂದ ಹೋರಾಡಿ ತನ್ನ ಪ್ರಾಣ ತೆತ್ತಿರುವುದು ಅತ್ಯಂತ ದುಃಖದ ವಿಚಾರ. ಪರಿಸರ ಸಮತೋಲನವಿರಲು ಪ್ರಾಣಿಗಳು, ಮಾನವರ ಸಹಕಾರ ಅಗತ್ಯವಾಗಿದೆ. ಇಬ್ಬರೂ ಒಟ್ಟಾದರೆ ಮಾತ್ರ ಪ್ರಕೃತಿ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಿದೆ. ಪ್ರಕೃತಿ ಉಳಿವಿಗೂ ಪ್ರಾಣಿಯ ಕೊಡುಗೆ ಅತ್ಯಂತ ಹೆಚ್ಚು ಇರಲಿದೆ. ಇಂತಹ ಪ್ರಾಣಿ ಸಂಕುಲದ ಆನೆ ನಮ್ಮನ್ನು ಅಗಲಿರುವುದು ವಿಷಾದನೀಯ ಎಂದರು.
ರಾಜ್ಯ ಸರ್ಕಾರ ಮೈಸೂರಿನ ಚಾಮುಂಡೇಶ್ವರಿ ದೇಗುಲದ ಸುತ್ತಮುತ್ತಲಿನ ಯಾವುದಾದರೂ ಪ್ರದೇಶದಲ್ಲಿ ಅರ್ಜುನನ ಸ್ಮಾರಕ, ಉದ್ಯಾನವನ ನಿರ್ಮಾಣ ಮಾಡಬೇಕು ಎಂಬುದು ಅರ್ಜುನನ ಅಭಿಮಾನಿಗಳ ಒತ್ತಾಸೆಯಾಗಿದೆ. ಮುಂದಿನ ದಿನಗಳಲ್ಲಿ ವಿಶೇಷತೆಯಿಂದ ಕೂಡಿದ ಅರ್ಜುನನ ಸ್ಮಾರಕ ನಿರ್ಮಾಣವಾಗಿ ಅದು ಪ್ರವಾಸಿ ತಾಣವಾಗಬೇಕು. ಎಲ್ಲರ ನೆನಪಿನಲ್ಲಿ ಅರ್ಜುನ ಸದಾ ಇರಬೇಕು ಎಂಬುದು ನಮ್ಮ ಆಶಯ ಎಂದರು.ಹಿರಿಯ ಕ್ರೀಡಾಪಟು ಒ.ಡಿ.ಸ್ಟೀಫನ್ ಮಾತನಾಡಿ, ಅಂಬಾರಿ ಆನೆ ಅರ್ಜುನನ ದಿಢೀರ್ ನಿಧನ ಎಲ್ಲರ ಮನಸ್ಸನು ತೀವ್ರ ಘಾಸಿಗೊಳಿಸಿದೆ. ಹಲವರು ಇನ್ನೂ ಸಹ ಆ ನೋವಿನಿಂದ ಹೊರಬಂದಿಲ್ಲ. ಸಕಲೇಶಪುರ ಭಾಗದಲ್ಲಿ ಪುಂಡಾನೆ ಹಾವಳಿಯಿಂದ ಜನರಿಗೆ ಉಂಟಾದ ತೊಂದರೆ ನಿವಾರಿಸಲು ಅದರ ಸೆರೆಗಾಗಿ ಬಂದಿದ್ದ ಅರ್ಜುನ ಕಾರ್ಯಾಚರಣೆಯಲ್ಲಿ ಯಶಸ್ಸು ಕಾಣದೆ ಮೃತಪಟ್ಟಿರುವುದು ಕನ್ನಡಿಗರಿಗೆ ನೋವು ತಂದಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಅರ್ಜುನನ ಜನನ ಇದೇ ನಾಡಿನಲ್ಲಾಗಬೇಕು ಎಂಬುದು ಹಲವರ ಹಾರೈಕೆ ಎಂದರು.
ಟ್ರ್ಯಾಕ್ಟರ್ ಚಾಲಕರ ಸಂಘದ ಅಧ್ಯಕ್ಷ ತಿಪ್ಪೇಶ್ ಅಕ್ಷರನಗರ, ಸಂಘದ ಸದಸ್ಯರಾದ ಅಣ್ಣಪ್ಪ, ಅಂತೋಣಿ, ಭೋಜಪೂಜಾರಿ, ರಾಜು, ಲಕ್ಷ್ಮಣ, ಮುಕುಂದ, ಮಹೇಶ್, ಕುಮಾರ್, ಅಭಿಲಾಶ್, ಅಬೂಬಕರ್ ಸಿದ್ದಿಕ್, ಶರತ್ ಮತ್ತಿತರರು ಹಾಜರಿದ್ದರು. ೦೯ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ಟ್ರ್ಯಾಕ್ಟರ್ ಚಾಲಕರು, ಮಾಲೀಕರ ಸಂಘದಿಂದ ವೀರ ಮರಣ ಹೊಂದಿದ ಅಂಬಾರಿ ಆನೆ ಅರ್ಜುನನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಚೈತನ್ಯ ವೆಂಕಿ, ಒ.ಡಿ.ಸ್ಟೀಫನ್, ತಿಪ್ಪೇಶ್, ಅಂತೋಣಿ, ಭೋಜ, ರಾಜು, ಲಕ್ಷ್ಮಣ ಇದ್ದರು.