ವಿನಯ ಕುಲಕರ್ಣಿ ರೀತಿ ಅಸೂಟಿಗೆ ಗೆಲುವು ನಿಶ್ಚಿತ..!

| Published : Apr 30 2024, 02:07 AM IST

ಸಾರಾಂಶ

ಬಿಜೆಪಿ ಅಭ್ಯರ್ಥಿ ಜೋಶಿ ಅವರ ಭಯದಿಂದ ಬಹಳಷ್ಟು ಜನರು ನೇರವಾಗಿ ಅವರನ್ನು ತಿರಸ್ಕರಿಸದೇ ಇದ್ದರೂ ಒಳಗೊಳಗೆ ಈ ಬಾರಿ ಜನರು ತಮಗೆ ಬೆಂಬಲ ಸೂಚಿಸುತ್ತಾರೆ.

ಧಾರವಾಡ:

ಈಗಾಗಲೇ ಧಾರವಾಡ ಲೋಕಸಭಾ ಕ್ಷೇತ್ರದ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಭರ್ಜರಿ ಪ್ರಚಾರ ಮುಗಿಸಿರುವ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಸೋಮವಾರ ನಗರದ 1ರಿಂದ 9 ವಾರ್ಡ್‌ಗಳಲ್ಲಿ ಮತದಾರರೊಂದಿಗೆ ನೇರಾ ನೇರ ಭೇಟಿಯೊಂದಿಗೆ ಮತಯಾಚಿಸಿದರು.

ಅಸೂಟಿ ಅವರನ್ನು ಬೆಂಬಲಿಸಿ ವಾರ್ಡ್‌ಗಳಲ್ಲಿ ಬಿರು ಬಿಸಿಲಿನಲ್ಲೂ ಪ್ರಚಾರ ನಡೆಸಿದ ಶಿವಲೀಲಾ ಕುಲಕರ್ಣಿ, ಕ್ಷೇತ್ರದ ಜನರು ಈ ಬಾರಿ ಬದಲಾ‍ವಣೆ ಬಯಸಿದ್ದಾರೆ. ಮತ ಪತ್ರ ಹಾಗೂ ಗ್ಯಾರಂಟಿ ಕಾರ್ಡ್‌ಗಳೊಂದಿಗೆ ವಾರ್ಡ್ ಒಂದರ ವಿವಿಧ ನಗರಗಳ ಪ್ರಮುಖ ಬೀದಿಗಳಲ್ಲಿ ಮತಯಾಚನೆ ಮಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲಿಸಲು ಮನವಿ ಮಾಡಿಕೊಂಡರು.

ನಗರ, ಗ್ರಾಮೀಣ ಪ್ರದೇಶದ ಪ್ರಚಾರ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಸೂಟಿ ಅವರಿಗೆ ಅದ್ಭುತ ಬೆಂಬಲ, ಸ್ಪಂದನೆ ಸಿಗುತ್ತಿದೆ. ಮಹಿಳೆಯರು, ಯುವಕರು ಸೇರಿದಂತೆ ಕ್ಷೇತ್ರದ ಜನರು ಈ ಬಾರಿ ಕಾಂಗ್ರೆಸ್‌ ಕೈ ಹಿಡಿಯಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮತದಾನಕ್ಕೆ ಇನ್ನು ಏಳೇ ದಿನಗಳು ಉಳಿದಿದ್ದು ಇಷ್ಟು ದಿನಗಳಲ್ಲಿ ಕಾಂಗ್ರೆಸ್‌ ಪ್ರಚಾರದಲ್ಲಿ ಅಸೂಟಿ ಪರ ಜನರು ತೋರಿದ ಕಾಳಜಿ ನೋಡಿದರೆ ಉತ್ತಮ ಅಂತರದಲ್ಲಿ ಜಯ ಗಳಿಸುತ್ತಾರೆ ಎಂಬ ನಂಬಿಕೆ ನಮಗಿದೆ. ಪ್ರಚಾರ ಸಮಯದಲ್ಲಿ ವಿನಯ ಕುಲಕರ್ಣಿ ಅವರನ್ನು ನೆನೆಯುತ್ತಿರುವ ಮತದಾರರು ಅವರನ್ನು ಗೆಲ್ಲಿಸಿದ ರೀತಿಯಲ್ಲಿಯೇ ಅಸೂಟಿಗೂ ಬೆಂಬಲ ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ ಎಂದರು.

ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ಜೋಶಿ ಅವರ ಭಯದಿಂದ ಬಹಳಷ್ಟು ಜನರು ನೇರವಾಗಿ ಅವರನ್ನು ತಿರಸ್ಕರಿಸದೇ ಇದ್ದರೂ ಒಳಗೊಳಗೆ ಈ ಬಾರಿ ಜನರು ತಮಗೆ ಬೆಂಬಲ ಸೂಚಿಸುತ್ತಾರೆ ಎಂಬ ಮಾಹಿತಿ ಇದೆ. ಈ ಬಾರಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಲು ಜನರು ತೀರ್ಮಾನಿಸಿದ್ದಾರೆ. ತವರೂರು ನವಲಗುಂದದಲ್ಲಿ ಜನರು ಪ್ರಚಾರಕ್ಕೆ ಬರಬೇಡಿ. ನಿಮ್ಮನ್ನು ಗೆಲ್ಲಿಸುವ ಗುರಿ ನಮ್ಮದು. ಈ ಕ್ಷೇತ್ರ ಬಿಟ್ಟು ಬೇರೆಡೆ ಪ್ರಚಾರ ಮಾಡಿ ಎಂದು ಭರವಸೆ ನೀಡಿದ್ದಾರೆ. ಪಕ್ಷದ ಶಾಸಕರು, ನಾಯಕರು, ಕಾರ್ಯಕರ್ತರು ಬಿರು ಬಿಸಿಲಿನಲ್ಲೂ ತಮ್ಮ ಪರ ಪ್ರಚಾರಕ್ಕೆ ಇಳಿದಿದ್ದು ಮತ್ತಷ್ಟು ಧೈರ್ಯ ಬಂದಿದೆ

ಎಂದು ಹೇಳಿದರು.ಧಾರವಾಡದ ಅರ್ಜಂಟ ನಗರ, ಕಮಲಾಪೂರ ಮತ್ತು ವಾರ್ಡ್ 5ರ ಸಿದ್ಧಾರೂಢ ಕಾಲನಿ ಮುಖಂಡರ ಮತ್ತು ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆ ಮತ್ತು ಪಾದಯಾತ್ರೆ ನಡೆಯಿತು. ವಾರ್ಡಿನ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು, ಮತಪತ್ರ ಹಾಗೂ ಗ್ಯಾರಂಟಿ ಕಾರ್ಡ್‌ಗಳೊಂದಿಗೆ ವಾರ್ಡ್ ಒಂದರ ವಿವಿಧ ನಗರಗಳ ಪ್ರಮುಖ ಬೀದಿಗಳಲ್ಲಿ ಮತಯಾಚನೆ ಮಾಡಲಾಯಿತು.

ಮುಖಂಡರಾದ ಅರವಿಂದ ಏಗನಗೌಡರ, ಎಸ್‌.ಸಿ. ಸಿಗ್ಲಿ ಹಿರೇಮಠ, ಎಸ್‌.ಆರ್‌. ಬಾಳನಗೌಡ್ರ, ಎಚ್.ಎಂ. ಹೂಗಾರ, ಸುರೇಶ ಕುರಡಿಕೇರಿ, ರಮೇಶ ಹಣಮರಟ್ಟಿ, ಸಂತೋಷ ಮೇಟಿ, ಕೃಷ್ಣ ರಣಜಿ, ಕಿಶೋರ ಬಡಿಗೇರ, ನಿಜಾಮ್ ರಾಯಿ ಹಾಗೂ ಬಡಾವಣೆಗಳ ಹಿರಿಯರು ಇದ್ದರು.