ಲೀಲಾವತಿ ದೇಗುಲ ಮಾದರಿ ಕೆಲಸ: ಮುನಿಯಪ್ಪ ಪ್ರಶಂಸೆ

| Published : Dec 06 2024, 08:59 AM IST

ಸಾರಾಂಶ

ದಾಬಸ್‍ಪೇಟೆ: ತಾಯಿಯನ್ನೇ ದೇವತೆಯಾಗಿಸಿ ಲೀಲಾವತಿಯವರ ಸೇವೆ ಉಳಿಯುವಂತೆ ಮಾಡಿದ ವಿನೋದ್‍ರಾಜ್ ಅವರ ಜೊತೆ ಸರ್ಕಾರ ಸದಾ ಇರಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.

ದಾಬಸ್‍ಪೇಟೆ: ತಾಯಿಯನ್ನೇ ದೇವತೆಯಾಗಿಸಿ ಲೀಲಾವತಿಯವರ ಸೇವೆ ಉಳಿಯುವಂತೆ ಮಾಡಿದ ವಿನೋದ್‍ರಾಜ್ ಅವರ ಜೊತೆ ಸರ್ಕಾರ ಸದಾ ಇರಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.

ಸೋಲದೇವನಹಳ್ಳಿ ಗ್ರಾಮದಲ್ಲಿ ಡಾ.ಲೀಲಾವತಿಯವರ ದೇಗುಲವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ರಂಗಭೂಮಿಯಿಂದ ಚಲನಚಿತ್ರಗಳವರೆಗೂ 6 ದಶಕಗಳ ಕಾಲ ಕಲಾಸೇವೆ ಸಲ್ಲಿಸಿದ ಡಾ.ಲೀಲಾವತಿಯವರು ಸಾಮಾಜಿಕ ಸೇವೆಯಲ್ಲೂ ಮುಂಚೂಣಿಯಲ್ಲಿದ್ದರು ಎಂದು ಹೇಳಿದರು.

ತಾಯಿ-ಮಗನ ಬಾಂಧವ್ಯದ ನೆನಪು ಶಾಶ್ವತ:

ಆದಿಚುಂಚನಗಿರಿ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಲೀಲಾವತಿಯವರು ಕಲಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರ. ಮಗನನ್ನು ಅನಾಥನನ್ನಾಗಿಸದೇ ಕೋಟ್ಯಂತರ ಅಭಿಮಾನಿಗಳ ಮಡಿಲಿಗೆ ಹಾಕಿದ್ದಾರೆ. ಮಗ ತಾಯಿಗಾಗಿ ದೇಗುಲ ನಿರ್ಮಿಸಿದ್ದು, ತಾಯಿ ಮಗನ ಗಟ್ಟಿಯಾದ ಸಂಬಂಧಕ್ಕೆ ಶಕ್ತಿಯಾಗಿದೆ. ಮಗ ನಿರ್ಮಿಸಿದ ಲೀಲಾವತಿಯವರ ದೇಗುಲ ಕಲಾವಿದರಿಗೆ ಕಲಿಕೆಯ ಪಾಠಶಾಲೆಯಾಗಲಿದೆ. ಪ್ರಕೃತಿಯ ಮಡಿಲಿನಲ್ಲಿ ತಾಯಿಯ ಆಸೆಯಂತೆ ಬದುಕಿ ತಾಯಿಗಾಗಿ ದೇಗುಲವನ್ನು ನಿರ್ಮಿಸಿ, ಸಾರ್ಥಕ ಕೆಲಸ ಮಾಡಿದ್ದು ತಾಯಿ- ಮಗನ ಭಾಂದವ್ಯದ ನೆನಪು ಶಾಶ್ವತವಾಗಿ ಉಳಿಯಲಿದೆ ಎಂದರು.

ರಕ್ತದಾನ ಶಿಬಿರ:

ಲೀಲಾವತಿಯವರ ಸ್ಮರಣಾರ್ಥ ರಕ್ತದಾನ ಶಿಬಿರ ನಡೆಯಿತು. ಸೋಲದೇವನಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಯುವಕರು, ಪೊಲೀಸರು, ಪತ್ರಕರ್ತರು, ಕಲಾವಿದರು ರಕ್ತದಾನ ಮಾಡುವ ಮೂಲಕ ಸಾರ್ಥಕ ಕೆಲಸದಲ್ಲಿ ಕೈ ಜೋಡಿಸಿದರು.

ಹಿರಿಯ ಕಲಾವಿದರಿಗೆ ಸನ್ಮಾನ:

ಲೀಲಾವತಿ ದೇಗುಲಕ್ಕೆ ಹಿರಿಯ ಹಾಗೂ ಸಹ ಕಲಾವಿದರು ಭೇಟಿ ನೀಡಿ ದರ್ಶನ ಪಡೆದರು. ಇದೇ ವೇಳೆ ಪ್ರಮುಖ ಹಿರಿಯ ಕಲಾವಿದರಾದ ಹೊನ್ನವಳ್ಳಿ ಕೃಷ್ಣ, ಉಮೇಶ್, ಲಕ್ಷ್ಮೀದೇವಿ, ಬ್ಯಾಂಕ್ ಜನಾರ್ಧನ್, ಗುರುಪ್ರಸಾದ್ ಪತ್ನಿ, ಶೈಲಶ್ರೀ ಸುದರ್ಶನ್, ಮುದ್ದುರಾಜ್ ಸೇರಿದಂತೆ ಅನೇಕರಿಗೆ ಆರ್ಥಿಕ ನೆರವು ನೀಡಿ ಸನ್ಮಾನಿಸಲಾಯಿತು.

ಕೋಟ್...................

ಹುಟ್ಟಿನಿಂದ ಇಲ್ಲಿಯವರೆಗೂ ಅಮ್ಮನ ಮಾರ್ಗದರ್ಶನದಲ್ಲಿಯೇ ಬದುಕಿದ್ದೇನೆ. ವರ್ಷದಿಂದ ತಾಯಿಯಿಲ್ಲದೆ ಬಹಳಷ್ಟು ನೋವಿನಿಂದ ನರಳಿದ್ದೇನೆ. ಎಲ್ಲಾ ಕಲಾವಿದರು, ಅಭಿಮಾನಿಗಳಿಗೆ ಅಮ್ಮನ ದೇಗುಲ ವೀಕ್ಷಿಸಲು ಮುಕ್ತ ಅವಕಾಶವಿದೆ. ಇದು ನನ್ನ ಪಾಲಿನ ಪವಿತ್ರ ಸ್ಥಳ.

-ವಿನೋದ್ ರಾಜ್, ನಟ

ಪೋಟೋ 6 : ಸೋಲದೇವನಹಳ್ಳಿ ಗ್ರಾಮದಲ್ಲಿ ಡಾ.ಲೀಲಾವತಿ ದೇಗುಲವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಲೋಕಾರ್ಪಣೆಗೊಳಿಸಿ ಪುಷ್ಪನಮನ ಸಲ್ಲಿಸಿದರು.

ಪೋಟೋ 7 :

ಲೀಲಾವತಿಯವರ ದೇಗುಲದಲ್ಲಿ ಅವರ ಸಮಾಧಿಗೆ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಪುಷ್ಪನಮನ ಸಲ್ಲಿಸಿದರು.

ಪೋಟೋ 8 :

ಸಚಿವ ಕೆ.ಎಚ್ ಮುನಿಯಪ್ಪ ಅವರು ದೇಗುಲದಲ್ಲಿ ನಿರ್ಮಿಸಿರುವ ಲೀಲಾವತಿ ಪೋಟೋಗಳನ್ನು ವೀಕ್ಷಿಸಿದರು.