ಕಾಂಗ್ರೆಸ್ ಪಕ್ಷದ ಮುಖಂಡರ ಉತ್ಸಾಹ, ಹುರುಪು, ಪದವೀಧರರ ಬೆಂಬಲ ಎಲ್ಲವೂ ಒಟ್ಟುಗೂಡಿದ್ದು, ಮೋಹನ ಲಿಂಬಿಕಾಯಿ ಅವರು ಮೊದಲ ಸುತ್ತಿನಲ್ಲಿಯೇ ಅತೀ ಹೆಚ್ಚು ಪ್ರಾಶಸ್ತ್ಯ ಮತ ಪಡೆಯುವ ಮೂಲಕ ಗೆಲವು ಸಾಧಿಸಲಿದ್ದಾರೆ.
ಧಾರವಾಡ:
ಕಾಂಗ್ರೆಸ್ ಪಕ್ಷದ ಮುಖಂಡರ ಉತ್ಸಾಹ, ಹುರುಪು, ಪದವೀಧರರ ಬೆಂಬಲ ಎಲ್ಲವೂ ಒಟ್ಟುಗೂಡಿದ್ದು, ಮೋಹನ ಲಿಂಬಿಕಾಯಿ ಅವರು ಮೊದಲ ಸುತ್ತಿನಲ್ಲಿಯೇ ಅತೀ ಹೆಚ್ಚು ಪ್ರಾಶಸ್ತ್ಯ ಮತ ಪಡೆಯುವ ಮೂಲಕ ಗೆಲವು ಸಾಧಿಸಲಿದ್ದಾರೆ ಎಂಬ ಭರವಸೆ ಇದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.ಕಾಂಗ್ರೆಸ್ ಅಭ್ಯರ್ಥಿಯಾಗಿ ಮೋಹನ ಲಿಂಬಿಕಾಯಿ ಅವರು ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಚುನಾವಣೆ ಗೆಲುವಿನ ಸಂಕೇತವಾಗಿ ನಾವೆಲ್ಲರೂ ಒಗ್ಗಟ್ಟಾಗಿ ಬಂದಿರುವುದು ಕಂಡು ಬರುತ್ತಿದೆ. ಈ ಹಿಂದೆ ಲಿಂಬಿಕಾಯಿ ಹಾಗೂ ನಾವು ಪ್ರತಿಸ್ಪರ್ಧಿಯಾಗಿ ಹೋರಾಟ ಮಾಡಿದ್ದು, ಇದೀಗ ಎರಡು ಶಕ್ತಿಗಳು ಒಂದಾಗಿವೆ. ಈ ಚುನಾವಣೆ ಮೂಲಕ ಶಕ್ತಿ ಪ್ರದರ್ಶನ ಸಹ ಪ್ರದರ್ಶಿಸಲಿದ್ದೇವೆ. ಈ ಕ್ಷೇತ್ರ ಈ ಬಾರಿ ಕಾಂಗ್ರೆಸ್ಸಿನ ಪಾಲಾಗುವುದು ನಿಶ್ಚಿತ ಎಂದರು.
ಪ್ರಸ್ತುತ ರಾಷ್ಟ್ರದಲ್ಲಿ ಯುವ ಜನಾಂಗ ಬಿಜೆಪಿ ವಿರೋಧವಾಗಿದ್ದು ಕಾಂಗ್ರೆಸ್ ಪರವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಹುಸಿ ಭರವಸೆ, ತಪ್ಪು ನಿರ್ಧಾರ, ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದೋಷ, ನಿರುದ್ಯೋಗ ಹೆಚ್ಚಾಗಿರುವುದು ಯುವಕರ ಮನಸ್ಸಿನ ಮೇಲೆ ತೀವ್ರ ಘಾಸಿ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿಗೆ ಬಂಬಲ ಸಿಗಲಿದೆ. ಇದರೊಂದಿಗೆ ಹಳೆ ಪಿಂಚಣಿ ಜಾರಿ, 72 ಸಾವಿರ ಹುದ್ದೆ ತುಂಬುವ ನಿರ್ಣಯದ ಜತೆಗೆ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಬದಲಾವಣೆಗಳನ್ನು ಗುರುತಿಸಿ ಪ್ರಜ್ಞಾವಂತರು ಬೆಂಬಲಿಸುತ್ತಿರುವ ಕಾರಣ ಈ ಚುನಾವಣೆಯಲ್ಲಿ ಲಿಂಬಿಕಾಯಿಗೆ ಗೆಲವು ನಿಶ್ಚಿತ ಎಂದು ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.ಯುವ ನಿಧಿ ಸಹಾಯ:
ಪಂಚ ಗ್ಯಾರಂಟಿಗಳಲ್ಲಿ ಒಂದಾದ ಯುವ ನಿಧಿ ಯೋಜನೆಯು ರಾಜ್ಯದ ಯುವ ಜನತೆಯ ಸಂಕಷ್ಟಗಳಿಗೆ ಪರಿಹಾರ ಒದಗಿಸಿದೆ. ಯುವಕರಲ್ಲಿ, ನಿರುದ್ಯೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಿದೆ. ಈ ವರೆಗೆ ಅನೇಕ ಸರ್ಕಾರಗಳು ನಿರುದ್ಯೋಗಿ ಯುವಕರ ಬಗ್ಗೆ ಗಮನ ಹರಿಸಿರಲಿಲ್ಲ. ಕಾಂಗ್ರೆಸ್ ಪಕ್ಷ ಗಮನ ಹರಿಸಿದ್ದು, ಅವರ ಬದುಕಿನಲ್ಲಿ ಭರವಸೆ ಮೂಡಿಸಿರುವ ಹಿನ್ನೆಲೆಯಲ್ಲಿ ಲಿಂಬಿಕಾಯಿ ಅವರ ಗೆಲುವಿಗೆ ಸಂಶಯವೇ ಬೇಡ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು. ಜತೆಗೆ, ಉತ್ತರ ಕನ್ನಡದಲ್ಲಿ ಒಂದು ಸುತ್ತಿನ ಸಭೆ ನೆಡಸಿದ್ದು, ಹೆಚ್ಚು ಮತಗಳೂ ಈ ಜಿಲ್ಲೆಯಿಂದಲೂ ಬರಲಿವೆ ಎಂದರು.