ಬೇಟಿ ಬಚಾವೋ ಬೇಟಿ ಪಢಾವೋ ಘೋಷಣೆಗೆ ಸೀಮಿತ

| Published : Mar 19 2025, 12:37 AM IST

ಸಾರಾಂಶ

ಮಹಿಳೆಯರ ಮೇಲಿನ ಅಪರಾಧಗಳು ನಿಂತಿಲ್ಲ. ಬದಲಿಗೆ ಮತ್ತಷ್ಟು ವಿಕೃತರೂಪ ಪಡೆದುಕೊಳ್ಳುತ್ತಿವೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧಿಗಳಿಂದಾಗಿ ಸಾಲು-ಸಾಲು ಬಾಣಂತಿಯರ ಸಾವು ಹಾಗೂ ಶಿಶುಮರಣಗಳು ರಾಜ್ಯದ ಜನರನ್ನು ತಲ್ಲಣಗೊಳಿಸಿವೆ.

ಕೊಪ್ಪಳ:

ಬೇಟಿ ಬಚಾವೋ ಬೇಟಿ ಪಢಾವೋ ಘೋಷಣೆಗೆ ಮಾತ್ರ ಸೀಮಿತವಾಗಿದೆ. ವಿಕೃತ ಕೃತ್ಯಗಳಿಂದ ಮಹಿಳೆ ಮತ್ತು ಮಕ್ಕಳ ಜೀವಿಸುವ ಹಕ್ಕು ಕುಸಿತವಾಗಿದೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯ ಕಾರ್ಯದರ್ಶಿ ಶೋಭಾ ಎಸ್. ಹೇಳಿದರು.ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಜರುಗಿದ ಜಿಲ್ಲಾ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರ ಮೇಲಿನ ಅಪರಾಧಗಳು ನಿಂತಿಲ್ಲ. ಬದಲಿಗೆ ಮತ್ತಷ್ಟು ವಿಕೃತರೂಪ ಪಡೆದುಕೊಳ್ಳುತ್ತಿವೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧಿಗಳಿಂದಾಗಿ ಸಾಲು-ಸಾಲು ಬಾಣಂತಿಯರ ಸಾವು ಹಾಗೂ ಶಿಶುಮರಣಗಳು ರಾಜ್ಯದ ಜನರನ್ನು ತಲ್ಲಣಗೊಳಿಸಿವೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 3,350 ಬಾಣಂತಿಯರನ್ನು ಈ ಅವ್ಯವಸ್ಥೆ ಬಲಿ ತೆಗೆದುಕೊಂಡಿದೆ. ಬಂಡವಾಳಶಾಹಿ ವ್ಯವಸ್ಥೆಯು ಅಶ್ಲೀಲ ಸಿನಿಮಾ-ಸಾಹಿತ್ಯ ಮತ್ತು ಮದ್ಯ, ಮಾದಕ ವಸ್ತುಗಳಿಗೆ ವಿದ್ಯಾರ್ಥಿ-ಯುವಜನರನ್ನು ದಾಸರನ್ನಾಗಿ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘಟನೆಯ ರಾಜ್ಯ ಸೆಕ್ರೆಟರಿಯಟ್ ಸದ್ಯಸ್ಯೆ ವಿಜಯಲಕ್ಷ್ಮಿ ಮಾತನಾಡಿ, ಉನ್ನತ ನೀತಿ, ನೈತಿಕತೆ, ಸಂಸ್ಕೃತಿಯ ಆಧಾರದ ಮೇಲೆ ಮಹಿಳೆಯರ ಜ್ವಲಂತ ಸಮಸ್ಯೆಗಳ ವಿರುದ್ಧ ಸತತವಾಗಿ ಹೋರಾಟ ರೂಪಗೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘಟನೆ ಜಿಲ್ಲಾ ಸಂಘಟನಾಕಾರರಾದ ಮಂಜುಳಾ ಮಜ್ಜಿಗಿ, ಮಹಿಳೆಯರ ಹಲವಾರು ಹಕ್ಕೊತ್ತಾಯಗಳನ್ನು ಒಳಗೊಂಡ ಗೊತ್ತುವಳಿ ಮಂಡಿಸಿದರು.

ಕೃಷಿ ವಿಸ್ತರಣಾ ಕೇಂದ್ರದ ವ್ಯವಸ್ಥಾಪಕ ಮೂರ್ತಿ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ಸಂಘಟನಾ ಸಮಿತಿ ರಚಿಸಿಲಾಯಿತು. ಸಮಿತಿ ಅಧ್ಯಕ್ಷರಾಗಿ ಮಂಜುಳಾ ಮಜ್ಜಿಗಿ, ಕಾರ್ಯದರ್ಶಿಯಾಗಿ ಶಾರದಾ ಗಡ್ಡಿ, ಜಂಟಿ ಕಾರ್ಯದರ್ಶಿಯಾಗಿ ಹುಸೇನಬೀ, ಕಾರ್ಯಕಾರಿ ಸಮಿತಿಗೆ 10 ಸದಸ್ಯರು ಹಾಗೂ ಕೌನ್ಸಿಲ್ ಸಮಿತಿಗೆ 6 ಸದಸ್ಯರು ಸೇರಿದಂತೆ ಒಟ್ಟು 19 ಜನರ ಹೊಸ ಸಮಿತಿ ರಚನೆಯಾಯಿತು.