ಸಾರಾಂಶ
ಕನ್ನಡಪ್ರಭ ವಾರ್ತೆ ಅಮೀನಗಡ
ವಿಶಿಷ್ಠ ಪರಂಪರೆಯ ಭಾರತದಲ್ಲಿ ಜನಿಸಿದ, ಸಾಧುಸಂತರ, ಶರಣರ, ಮಹಾತ್ಮರನ್ನು ಇಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ಖಂಡನೀಯ ಎಂದು ಅಮೀನಗಡ ಶ್ರೀ ಪ್ರಭುಶಂಕರೇಶ್ವರ ಗಚ್ಚಿನಮಠದ ಪೀಠಾಧೀಪತಿ ಶಂಕರರಾಜೇಂದ್ರ ಶ್ರೀ ಹೇಳಿದರು.ಪಟ್ಟಣದಲ್ಲಿ ಸೀಗಿಹುಣ್ಣಿಮೆ ನಿಮಿತ್ತ ನಡೆದ ಶಿವಾನುಭವಗೋಷ್ಠಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವರನ್ನು, ಹುತಾತ್ಮರನ್ನು, ಸಾಧು ಶರಣರನ್ನು ಜಾತಿ, ಸಮಾಜಗಳಿಗೆ ಸೀಮಿತಗೊಳಿಸುವ ಮೂಲಕ ಭಾರತೀಯರು ಸಂಕುಚಿತರಾಗುತ್ತಿದ್ದಾರೆ. ಜಗತ್ತಿನ ಒಳಿತಿಗಾಗಿ, ದೇಶಕ್ಕಾಗಿ ಸಮರ್ಪಣೆ ಮಾಡುವಾಗ ಅವರ್‍ಯಾರು ಜಾತಿಮತಪಂಥ ಗಣನೆಗೆ ತೆಗೆದುಕೊಂಡಿಲ್ಲ, ಇಂದಿನ ಕಲುಷಿತ ರಾಜಕಾರಣ ಆಯಾ ಸಮಾಜ ಓಲೈಸುವ ಮೂಲಕ ಸೀಮಿತಗೊಳಿಸಲಾಗುತ್ತಿದೆ. ಇಂದಿನ ಯುವಜನತೆ ಕೇವಲ ಜಾತಿಗೆ ಸೀಮಿತವಾಗದೆ ದೇಶಕ್ಕೆ, ಮನುಕುಲಕ್ಕೆ ದಾರಿದೀಪವಾಗಿರುವ ಯಾವುದೇ ಮಹಾತ್ಮಾರನ್ನು ಸ್ಮರಿಸುವ ಕಾರ್ಯವಾಗಬೇಕು. ಬಿಸಿಲು, ಮಳೆ, ಗಾಳಿ, ನದಿ ನೀರಿಗಿಲ್ಲದ ಭೇಧಭಾವ ನಮಗೇಕೆ, ಸರ್ವರೂ ಮಾನವತೆಗೆ ಗೌರವ ನೀಡಬೇಕು ಎಂದರು.
ವಾಲ್ಮೀಕಿ ರಾಮಾಯಣ ಮತ್ತು ಸಂಸ್ಕೃತಿ ವಿಷಯ ಕುರಿತು ಉಪನ್ಯಾಸ ನೀಡಿದ ಹಿರೇಬಾದವಾಡಗಿ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ಎನ್.ಎಸ್.ಭಾಪ್ರಿ, ಮಹಾನ್ ಸಂತ ವಾಲ್ಮೀಕಿಯವರು ಶ್ರೀರಾಮನನ್ನು ಎಲ್ಲೂ ಪವಾಡ ಪುರುಷ, ದೇವತಾ ಪುರುಷ ಎಂದು ಚಿತ್ರಿಸಿಲ್ಲ. ಅವನೂ ಸಾಮಾನ್ಯ ಮಾನವರಂತೆ ಹುಟ್ಟಿ ಲೌಕಿಕ ಬದುಕು ಕಟ್ಟಿಕೊಂಡು, ಪಿತೃವಾಕ್ಯ ಪರಿಪಾಲನೆ, ಸಹೋದರತ್ವ, ಪ್ರಜಾಪರಿಪಾಲಕ, ಸತ್ಯಪರಿಪಾಲಕ, ಏಕಪತ್ನೀ, ದುಷ್ಠ ಸಂಹಾರ, ಶಿಷ್ಠಪರಿಪಾಲಕನಾಗುವುದರ ಮೂಲಕ ಮರ್ಯಾದ ಪುರುಷೋತ್ತಮ ಶ್ರೀರಾಮನೆನೆಸಿದರು. ಶ್ರೀರಾಮನ ಪ್ರಜಾಪ್ರೀತಿ, ಸರ್ವಸಮಾನತೆ, ಸಮೃದ್ಧ ರಾಷ್ಟ್ರ, ಮೌಲ್ಯಯುತ ನಡೆನುಡಿಗಳೇ ರಾಮರಾಜ್ಯದ ಖ್ಯಾತಿ ಎನಿಸಿತು. ರಾಮಾಯಣ ಕೌಟುಂಬಿಕ ಬದುಕು, ತಾಯಿ-ತಂದೆಯರ ಸೇವೆ, ಸಹೋದರತ್ವ, ತುಂಬು ಕುಟುಂಬದ ಬದುಕು ಕಟ್ಟಿಕೊಡುವ ಸುಸಂಸ್ಕೃತಿ ಕಲಿಸುವ ಮೂಲಕ, ಸರ್ವಕಾಲಕ್ಕೂ ಶೇಷ್ಠ ಕಾವ್ಯ ಎನಿಸಿತು. ಅಂದಿಗೂ ಇಂದಿಗೂ ಎಂದೆದಿಗೂ, ಮನುಷ್ಯನ ಬದುಕಿನ ಮಾರ್ಗಸೂಚಿಯಾಗಿದೆ ಎಂದರು.ಅತಿಥಿಗಳಾಗಿ ನಿವೃತ್ತ ಉಪಪ್ರಾಚಾರ್ಯ ಬಿ.ಬಿ.ತಿಪ್ಪಶೆಟ್ಟಿ ಮಾತನಾಡಿದರು. ನಿವೃತ್ತ ಶಿಕ್ಷಕ ಬಿ.ಎಸ್.ಕಂಠಿ, ಸಂಗಮೇಶ್ವರ ಪಪೂ ಕಾಲೇಜಿನ ಪ್ರಾಚಾರ್ಯ ಎಂ.ಎನ್.ವಂದಾಲ, ಉಪ ಪ್ರಾಚಾರ್ಯ ಆರ್.ಜಿ.ಸನ್ನಿ, ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ, ಸಿರಿಗನ್ನಡ ಪ್ರತಿಷ್ಠಾನದ ಅಧ್ಯಕ್ಷ ಯೋಗೀಶ ಲಮಾಣಿ ಇದ್ದರು. ಸಂಗೀತ ಶಾಲೆಮಕ್ಕಳಿಂದ ಪ್ರಾರ್ಥನಾ ಗೀತೆ, ಶಿವಕುಮಾರ ಹಿರೇಮಠ ನಿರೂಪಣೆ, ರವಿ ರೂಡಗಿ ವಂದಿಸಿದರು.