ಮನೆ ಗೋಡೆಯಲ್ಲಿ ಸಂವಿಧಾನ ಪೀಠಿಕೆ ಪ್ರಸ್ತಾವನೆ ಕೆತ್ತಿಸಿದ ಲೈನ್‌ಮ್ಯಾನ್!

| Published : Apr 28 2025, 11:50 PM IST

ಮನೆ ಗೋಡೆಯಲ್ಲಿ ಸಂವಿಧಾನ ಪೀಠಿಕೆ ಪ್ರಸ್ತಾವನೆ ಕೆತ್ತಿಸಿದ ಲೈನ್‌ಮ್ಯಾನ್!
Share this Article
  • FB
  • TW
  • Linkdin
  • Email

ಸಾರಾಂಶ

ಕೊಟ್ಟೂರು ತಾಲೂಕಿನ ಹರಾಳು ಗ್ರಾಮದಲ್ಲಿ ಲೈನ್‌ಮ್ಯಾನ್‌ ದುಮ್ಮಾಡಿ ರಾಮಪ್ಪ ಅವರು ಹೊಸದಾಗಿ ಕಟ್ಟಿಸಿದ ಮನೆಗೆ ಸಂವಿಧಾನ ಕುಟೀರ ಎಂದು ಹೆಸರಿಟ್ಟು, ಗೋಡೆಯ ಮೇಲೆ ಕಲ್ಲಿನಲ್ಲಿ ಸಂವಿಧಾನ ಪೀಠಿಕೆಯ ಪ್ರಸ್ತಾವನೆ ಕೆತ್ತಿಸಿದ್ದಾರೆ. ಬುದ್ಧನ ಸುಂದರ ಮೂರ್ತಿ ಇಟ್ಟಿದ್ದಾರೆ.

ಜಿ. ಸೋಮಶೇಖರ

ಕೊಟ್ಟೂರು: ತಾಲೂಕಿನ ಹರಾಳು ಗ್ರಾಮದಲ್ಲಿ ಲೈನ್‌ಮ್ಯಾನ್‌ ಒಬ್ಬರು ಹೊಸದಾಗಿ ಕಟ್ಟಿಸಿದ ಮನೆಗೆ ಸಂವಿಧಾನ ಕುಟೀರ ಎಂದು ಹೆಸರಿಟ್ಟು, ಗೋಡೆಯ ಮೇಲೆ ಕಲ್ಲಿನಲ್ಲಿ ಸಂವಿಧಾನ ಪೀಠಿಕೆಯ ಪ್ರಸ್ತಾವನೆ ಕೆತ್ತಿಸಿದ್ದಾರೆ.

ಹರಪನಹಳ್ಳಿ ತಾಲೂಕಿನ ಬೆಣ್ಣೆಹಳ್ಳಿಯಲ್ಲಿನ ಕೆಪಿಟಿಸಿಎಲ್ ವಿದ್ಯುತ್ ಉಪಕೇಂದ್ರದಲ್ಲಿ ಲೈನ್‌ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿರುವ ದುಮ್ಮಾಡಿ ರಾಮಪ್ಪ ಅವರ ಸಂವಿಧಾನ ಪ್ರೀತಿ ಈಗ ಎಲ್ಲರ ಗಮನ ಸೆಳೆಯುತ್ತಿದೆ. ನೂತನ ಮನೆಯ ಪ್ರವೇಶ ಕಾರ್ಯಕ್ರಮವನ್ನು ಬಸವ ಜಯಂತಿಯಂದು ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮನೆಯ ಮುಂಭಾದ ಗೋಡೆಗೆ ಬುದ್ಧನ ಸುಂದರ ಮೂರ್ತಿಯನ್ನು ಅಳವಡಿಸಿದ್ದಾರೆ.

ದುಮ್ಮಾಡಿ ರಾಮಪ್ಪ ಅವರು ಹರಾಳು ಗ್ರಾಮದ ಸರ್ಕಾರಿ ಶಾಲೆ ಬಳಿ ಇರುವ ತನ್ನ ಸ್ವಂತ ಜಾಗದಲ್ಲಿ ನೂತನ ಮನೆ ನಿರ್ಮಿಸಿದ್ದಾರೆ. ಹಾಗೆ ನಿರ್ಮಿಸುವ ವೇಳೆ ಸಂವಿಧಾನದ ಬಗ್ಗೆ ತಮಗಿರುವ ಗೌರವ, ಬದ್ಧತೆಯನ್ನು ಈ ಮೂಲಕ ತೋರ್ಪಡಿಸಿದ್ದಾರೆ. ಸಂವಿಧಾನ ಇಲ್ಲದಿದ್ದರೆ ಯಾರೊಬ್ಬರೂ ಏನನ್ನೂ ಕಂಡುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂಬ ಸೂಕ್ಷ್ಮ ಅಂಶವನ್ನು ಪ್ರಚುರಪಡಿಸಿದ್ದಾರೆ.

ಪದವೀಧರರಾಗಿರುವ ದುಮ್ಮಾಡಿ ರಾಮಪ್ಪ ಸಾವಿರಾರು ಹನಿಗವನಗಳನ್ನು ಬರೆದಿದ್ದಾರೆ. ಆ ಮೂಲಕ ತಮ್ಮ ಸಾಮಾಜಿಕ ಕಾಳಜಿ, ಸಂವಿಧಾನದ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ರಾಮಪ್ಪ ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ನಾವು ಸಂವಿಧಾನ ರಕ್ಷಕರು ಎಂದು ಹೇಳಿಕೊಂಡು ಪುಂಖಾನುಪುಂಖವಾಗಿ ಭಾಷಣ ಮಾಡುವವರ ಮಧ್ಯೆ ಇವರು ಮಾದರಿಯಾಗಿ ನಿಲ್ಲುತ್ತಾರೆ.ಸಂವಿಧಾನ ಕುಟೀರ: ಸಂವಿಧಾನ ಕಾರಣಕ್ಕಾಗಿ ನಾವೆಲ್ಲರೂ ಸರ್ಕಾರಿ ಕೆಲಸ ಮತ್ತಿತರ ಉನ್ನತ ಕೆಲಸವನ್ನು ಪಡೆಯುವ ಮೂಲಕ ಉತ್ತಮ ಬದುಕನ್ನು ರೂಪಿಸಿಕೊಳ್ಳುತ್ತ ಬಂದಿದ್ದೇವೆ. ಈ ಕಾರಣಕ್ಕಾಗಿ ಸಂವಿಧಾನ ಪ್ರಸ್ತಾವನೆಯನ್ನು ನನ್ನ ನೂತನ ಮನೆಯ ಹೊರಗೋಡೆಗೆ ಬರೆಸಿಕೊಂಡಿದ್ದೇನೆ. ಜತೆಗೆ ಮನೆಗೆ ಸಂವಿಧಾನ ಕುಟೀರ ಎಂದು ನಾಮಕರಣ ಮಾಡಿರುವೆ ಎಂದು ಹರಾಳು ಲೈನ್‌ಮ್ಯಾನ್ ದುಮ್ಮಾಡಿ ರಾಮಪ್ಪ ಹೇಳುತ್ತಾರೆ.

ಹರಾಳಿನ ರಾಮಪ್ಪ ತನ್ನ ಮನೆಗೆ ಬಾಗಿಲ ಮಾತಾಗಿ ಸಂವಿಧಾನ ಪ್ರಸ್ತಾವನೆಯನ್ನು ಕೂರಿಸಿರುವುದು ನಿಜಕ್ಕೂ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಪ್ರತಿ ಭಾರತೀಯರ ಮನೆಗಳಲ್ಲಿ ಇದು ನೆಲೆಗೊಳ್ಳಬೇಕು. ಇದು ಸಂವಿಧಾನ ಜಾಗೃತಿ ಮೂಡಿಸುವ ಸಂಕೇತವಾಗಿದೆ ಎಂದು ಲೇಖಕ ಅರುಣ ಜೋಳದ ಕೂಡ್ಲಿಗಿ ಹೇಳಿದರು.