ಸಾರಾಂಶ
ಮಲೆನಾಡಿನ ಮುಂಗಾರು ಯೋಧರು ಕಾರ್ಯಕ್ರಮದಲ್ಲಿ ಮೆಸ್ಕಾಂ ಲೈನ್ ಮ್ಯಾನ್ ಗಳಿಗೆ ಸನ್ಮಾನ
ಕನ್ನಡಪ್ರಭವಾರ್ತೆ, ನರಸಿಂಹರಾಜಪುರದಿನದ 24 ಗಂಟೆಯೂ ಜೀವದ ಹಂಗು ತೊರೆದು ಕೆಲಸ ಮಾಡುವ ಮಲೆನಾಡಿನ ಲೈನ್ ಮ್ಯಾನ್ ಗಳು ದೇಶದ ಗಡಿ ಕಾಯುವ ಯೋಧರಂತೆ ಕೆಲಸ ಮಾಡುತ್ತಾರೆ ಎಂದು ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜ್ ಪ್ರಶಂಸೆ ವ್ಯಕ್ತಪಡಿಸಿದರು.
ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮೆಸ್ಕಾಂ ಕಚೇರಿ ಆವರಣದಲ್ಲಿ ಮಲೆನಾಡಿನ ಮುಂಗಾರು ಯೋಧರು ಕಾರ್ಯಕ್ರಮದಡಿ 3 ಜನ ಲೈನ್ ಮ್ಯಾನ್ ಗಳಿಗೆ ಸನ್ಮಾನ ಹಾಗೂ ಎಲ್ಲಾ 30 ಲೈನ್ ಮ್ಯಾನ್ ಗಳಿಗೆ ಅಭಿನಂದನಾ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪ್ರಸ್ತುತ ರೈತರು ಹಾಗೂ ಇತರ ನಾಗರಿಕರು ವಿದ್ಯುತ್ ಮೇಲೆ ಅವಲಂಭಿತರಾಗಿದ್ದಾರೆ. ವಿದ್ಯುತ್ ಕೆಲಸ ಮಾಡುವ ಲೈನ್ ಮ್ಯಾನ್ ಗಳು ಎಚ್ಚರಿಕೆ ಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕಸಾಪ ಕೇವಲ ಸಾಹಿತ್ಯ, ಪುಸ್ತಕ, ಸಂಸ್ಕೃತಿಗೆ ಮಾತ್ರ ಸೀಮಿತವಾಗಿರದೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಕಾರ್ಯಕ್ರಮ ನಡೆಸಿ ಉತ್ತಮ ಕೆಲಸ ಮಾಡುವವರನ್ನು ಅಭಿನಂದಿಸಿದ್ದೇವೆ. ಇದೇ ಮೊದಲ ಬಾರಿಗೆ ಕಸಾಪದಿಂದ ಮೆಸ್ಕಾಂ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡುವ ಲೈನ್ ಮ್ಯಾನ್ ಗಳನ್ನು ಅಭಿನಂದಿಸಿ ಸನ್ಮಾನಿಸಿದ್ದೇವೆ. ಲೈನ್ ಮ್ಯಾನ್ ಗಳು ಹಗಲು, ರಾತ್ರಿ ಕೆಲಸ ಮಾಡಿ ಎಲ್ಲರಿಗೂ ಬೆಳಕು ನೀಡುತ್ತಾರೆ. ಮಲೆನಾಡಿನಲ್ಲಿ ಮಳೆ, ಗಾಳಿ ನಡುವೆ ಕೆಟ್ಟ ಹವಾಮಾನದಲ್ಲಿ ಲೈನ್ ಮ್ಯಾನ್ ಗಳು ಕೆಲಸ ಮಾಡಿ ಜನರಿಗೆ ವಿದ್ಯುತ್ ನೀಡುತ್ತಾರೆ. ಲೈನ್ ಮ್ಯಾನ್ ಗಳನ್ನು ಬಯ್ಯುವುದು ಸರಿ ಅಲ್ಲ ಎಂದರು.
ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, ಇತಿಹಾಸದಲ್ಲೇ ಮೊದಲ ಬಾರಿಗೆ ಕಸಾಪದಿಂದ ಮೆಸ್ಕಾಂ ಇಲಾಖೆಯಲ್ಲಿ ಲೈನ್ ಮ್ಯಾನಗಳಿಗೆ ಸನ್ಮಾನಿಸಿ ಅವರಿಗೆ ಆತ್ಮ ಸ್ಥೈರ್ಯ ತುಂಬಲಾಗಿದೆ. ದಿನದ 24 ಗಂಟೆಯಲ್ಲಿ 10 ನಿಮಿಷ ವಿದ್ಯುತ್ ಹೋದರೂ ಲೈನ್ ಮ್ಯಾನ್ ಗಳನ್ನು ಬಯ್ಯಲಾಗುತ್ತಿದೆ. ಪ್ರತಿಯೊಬ್ಬರೂ ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು.ಅಲ್ಲದೆ ಪ್ರತಿ ನಿತ್ಯ ಕನ್ನಡ ದಿನ ಪತ್ರಿಕೆಗಳನ್ನು ಓದುತ್ತಾ ಬಂದರೆ ಸ್ಥಳೀಯ ಹಾಗೂ ರಾಜ್ಯ ಮಟ್ಟದ ಸುದ್ದಿ ತಿಳಿಯುತ್ತದೆ ಎಂದರು.ತಾಲೂಕು ಕರವೇ ಅಧ್ಯಕ್ಷ ಹರ್ಷ ಮಾತನಾಡಿ, ಎಲ್ಲರಿಗೂ ಬೆಳಕು ನೀಡುವ ಮೆಸ್ಕಾಂ ಸಿಬ್ಬಂದಿ ತೆರೆ ಹಿಂದೆ ಕೆಲಸ ಮಾಡುತ್ತಾರೆ. ಮಲೆನಾಡು ಭಾಗದಲ್ಲಿ ವಿಪರೀತ ಮಳೆ,ಗಾಳಿ ಇರುವುದರಿಂದ ದಿನದ 24 ಗಂಟೆಯೂ ವಿದ್ಯುತ್ ಲೈನ್ ಮ್ಯಾನ್ ಕೆಲಸ ಮಾಡಬೇಕಾಗುತ್ತದೆ. ಅವರನ್ನು ಸನ್ಮಾನಿಸುವುದರಿಂದ ಅವರ ಇನ್ನಷ್ಟು ಕೆಲಸಕ್ಕೆ ಪ್ರೇರಣೆಯಾಗಲಿದೆ ಎಂದರು.
ಮೆಸ್ಕಾಂ ಇಲಾಖೆ ಸಹಾಯಕ ಕಾರ್ಯಪಾಲಕ ಗೌತಮ್ ಉದ್ಘಾಟಿಸಿದರು. ಅತಿಥಿಗಳಾಗಿ ನಾಗಲಾಪುರ ಗ್ರಾಪಂತಿ ಸದಸ್ಯ ಕೆ.ಗಂಗಾಧರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೆಇಬಿ ಲೈನ್ ಮ್ಯಾನ್ ಗಳಾದ ಮಡಬೂರು ವ್ಯಾಪ್ತಿಯ ಸೋಮ ಲಿಂಗ, ನ.ರಾ.ಪುರ ಪಟ್ಟಣದ ವ್ಯಾಪ್ತಿಯ ಎಸ್.ಆರ್.ಶಿವರಾಜ, ಬಿ.ಎಚ್.ಕೈಮರ ವ್ಯಾಪ್ತಿಯ ರಂಗಸ್ವಾಮಿ ಅವರನ್ನು ಸನ್ಮಾನಿಸಲಾಯಿತು. 30 ಲೈನ್ ಮ್ಯಾನ್ ಗಳಿಗೆ ಅಭಿನಂದನಾ ಪತ್ರ ನೀಡಲಾಯಿತು. ಮೆಸ್ಕಾಂ ಇಲಾಖೆ ಸಹಾಯಕ ಅಭಿಯಂತರ ಸುರೇಶ್, ತಾ.ಕಸಾಪ ಕಾರ್ಯದರ್ಶಿ ನಂದಿನಿ ಆಲಂದೂರು ಇದ್ದರು.