ಗ್ರಾಮೀಣ ಜನರು ಅನುಸರಿಸುವ ಕುಂಬಾರಿಕೆ, ಟೈಲರಿಂಗ್, ಬುಟ್ಟಿ ನೇಯುವುದು, ಚರ್ಮ ಹದ ಮಾಡುವುದು, ಜ್ಯೂಸ್ ತಯಾರಿಕೆ, ಅಗರಬತ್ತಿ ಕಾರ್ಖಾನೆ ಸೇರಿದಂತೆ ಹಲವಾರು ಸ್ವ ಉದ್ಯೋಗ ಸೃಷ್ಟಿಸಿಕೊಂಡು ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ಕೇಂದ್ರ ತೆರೆಯಲು, ಆಯೋಗದ ವತಿಯಿಂದ ಸಬ್ಸಿಡಿ ಸಾಲ ಸೌಲಭ್ಯ ಜೊತೆಗೆ ಸಂಬಂಧಿಸಿದ ಉದ್ಯಮಗಳ ತರಬೇತಿ ನೀಡುತ್ತದೆ.
ಕನ್ನಡಪ್ರಭ ವಾರ್ತೆ ನಂಜನಗೂಡು
ಕೇಂದ್ರ ಸರ್ಕಾರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಮೂಲಕ ಗ್ರಾಮೀಣ ಜನರು ಸ್ವಉದ್ಯೋಗ ಸೃಷ್ಟಿಸಿಕೊಳ್ಳಲು ತರಬೇತಿ, ಜೊತೆಗೆ ಸಬ್ಸಿಡಿ ಸಾಲ ಸೌಲಭ್ಯ ಸೇರಿದಂತೆ ಹಲವಾರು ಸವಲತ್ತುಗಳನ್ನು ವಿತರಿಸುತ್ತಿದೆ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢಗೊಳ್ಳಬೇಕು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಹಾಯಕ ನಿರ್ದೇಶಕ ಲಿಂಗದೊರೆ ಕರೆ ನೀಡಿದರು.ಪಟ್ಟಣದ ಗೌರಿಘಟ್ಟದ ಬೀದಿಯಲ್ಲಿರುವ ನಾಯಕ ಸಮುದಾಯ ಭವನದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಏರ್ಪಡಿಸಿದ್ದ ರಾಜ್ಯ ಮಟ್ಟದ ಗ್ರಾಮೋದ್ಯೋಗ ಅರಿವು ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಜನರು ಅನುಸರಿಸುವ ಕುಂಬಾರಿಕೆ, ಟೈಲರಿಂಗ್, ಬುಟ್ಟಿ ನೇಯುವುದು, ಚರ್ಮ ಹದ ಮಾಡುವುದು, ಜ್ಯೂಸ್ ತಯಾರಿಕೆ, ಅಗರಬತ್ತಿ ಕಾರ್ಖಾನೆ ಸೇರಿದಂತೆ ಹಲವಾರು ಸ್ವ ಉದ್ಯೋಗ ಸೃಷ್ಟಿಸಿಕೊಂಡು ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ಕೇಂದ್ರ ತೆರೆಯಲು, ಆಯೋಗದ ವತಿಯಿಂದ ಸಬ್ಸಿಡಿ ಸಾಲ ಸೌಲಭ್ಯ ಜೊತೆಗೆ ಸಂಬಂಧಿಸಿದ ಉದ್ಯಮಗಳ ತರಬೇತಿ ನೀಡುವುದಲ್ಲದೆ. ಟೈಲರಿಂಗ್ ಯಂತ್ರ, ಅಗರಬತ್ತಿ ತಯಾರಿಕಾ ಯಂತ್ರ ಸೇರಿದಂತೆ ಅನೇಕ ಯಂತ್ರಗಳನ್ನು ಉಚಿತವಾಗಿ ನೀಡಿ ಉತ್ತೇಜನ ನೀಡಲಾಗುತ್ತದೆ, ಗ್ರಾಮೀಣ ಭಾಗದ ಮಹಿಳೆಯರು ಮತ್ತು ವಿದ್ಯಾವಂತ ನಿರುದ್ಯೋಗಿ ಯುವಕರು ಪ್ರಧಾನ ಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ ( ಪಿಎಂಇಜಿಪಿ)ಯ ಮೂಲಕ ಅರ್ಜಿ ಸಲ್ಲಿಸಿ ಸವಲತ್ತುಗಳನ್ನು ಪಡೆದುಕೊಂಡು ಸ್ವ ಉದ್ಯೋಗವನ್ನು ಅನುಸರಿಸುವ ಮೂಲಕ ಆರ್ಥಿಕವಾಗಿ ಸದೃಢಗೊಳ್ಳಬೇಕು ಎಂದರು.24ರಂದು ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ:
ಡಿ.24 ರಂದು ಬೆಂಗಳೂರಿನ ಎಚ್.ಎಂ.ಟಿ. ಮೈದಾನದ ಆವರಣದಲ್ಲಿ ರಾಜ್ಯ ಗ್ರಾಮೀಣ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವತಿಯಿಂದ ಕರಕುಶಲ ವಸ್ತುಗಳ ಮತ್ತು ಗ್ರಾಮೀಣ ಉದ್ಯೋಗದ ಮೂಲಕ ತಯಾರಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ಎಲ್ಲರೂ ಈ ಪ್ರದರ್ಶನದಲ್ಲಿ ಭಾಗಿಯಾಗಿ ಸದಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಗಂಗಾ ಚಾರಿಟಬಲ್ ಟ್ರಸ್ಟ್ ನಿರ್ದೇಶಕ ರಾಜ್ ಕಾಮಯ್ಯ ಮಾತನಾಡಿ, ಗ್ರಾಮೀಣ ಭಾಗದ ಜನರನ್ನು ಆರ್ಥಿಕವಾಗಿ ಸದೃಢಗೊಳಿಸುವ ಉದ್ದೇಶದಿಂದ ಗಂಗಾ ಚಾರಿಟೇಬಲ್ ಟ್ರಸ್ಟ್ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ), ಕೃಷಿ ಇಲಾಖೆ, ಪಶು ಇಲಾಖೆ, ರೇಷ್ಮೆ ಇಲಾಖೆಯ ಸಹಯೋಗದೊಂದಿಗೆ ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ತರಬೇತಿ ಮತ್ತು ಗ್ರಾಮೀಣ ಉದ್ಯೋಗದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಸಿಂಧುವಳ್ಳಿ ಗ್ರಾಪಂ ಅಧ್ಯಕ್ಷ ಹೊಣಕಾರ ನಾಯಕ, ದಿವ್ಯಶ್ರೀ, ಹೆಡತಲೆ ಮಹೇಶ್, ರಂಗಸ್ವಾಮಿ, ಕುಂಬ್ರಹಳ್ಳಿ ಮಹೇಶ್, ಗ್ರಾಪಂ ಸದಸ್ಯ ರಾಜು, ಮುಖಂಡರಾದ ಮಹೇಶ್, ಪ್ರಕಾಶ್ ಮಹಿಳೆಯರು ಇದ್ದರು.