(ಲೀಡ್‌) ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಲಿಂಗನಮಕ್ಕಿ ಚಲೋ

| Published : Oct 25 2024, 01:03 AM IST

(ಲೀಡ್‌) ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಲಿಂಗನಮಕ್ಕಿ ಚಲೋ
Share this Article
  • FB
  • TW
  • Linkdin
  • Email

ಸಾರಾಂಶ

ರೈತರಿಂದ ಲಿಂಗನಮಕ್ಕಿ ಚಲೋ ಆರಂಭವಾಯಿತು.

ಕನ್ನಡಪ್ರಭ ವಾರ್ತೆ ಸಾಗರ

ಮಲೆನಾಡಿನ ರೈತರ ಭೂಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಡಾ.ಎಚ್.ಗಣಪತಿಯಪ್ಪ ಸ್ಥಾಪಿತ ಜಿಲ್ಲಾ ರೈತ ಸಂಘ ಮತ್ತು ಮಲೆನಾಡು ರೈತ ಹೋರಾಟ ವೇದಿಕೆ ಇನ್ನಿತರೆ ಸಂಘಟನೆಗಳ ನೇತೃತ್ವದಲ್ಲಿ ಮೂರು ದಿನಗಳಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಗುರುವಾರ ಲಿಂಗನಮಕ್ಕಿ ಜಲಾಶಯ ಚಲೋ ಕಾರ್ಯಕ್ರಮ ಆರಂಭವಾಯಿತು.

ಉಪ ವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಆರ್.ಜಯಂತ್, ಮಲೆನಾಡು ರೈತರು ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಧುಮುಕಿರುವುದು ಅನಿವಾರ್ಯ ಸ್ಥಿತಿಯಾಗಿದೆ. ರಾಜ್ಯದ 9 ಜಿಲ್ಲೆಗಳನ್ನು ವ್ಯಾಪರಿಸಿರುವ ಮಲೆನಾಡು ಪ್ರದೇಶದ ಜನರು ಭೂ ಹಕ್ಕಿಗಾಗಿ ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಲೆನಾಡು ರೈತರ ಪರ ಚರ್ಚೆ ನಡೆಯದೆ ಇರುವುದು ದುರದೃಷ್ಟಕರ ಸಂಗತಿ. ಅಂತಿಮವಾಗಿ ರೈತರು ಜೈಲಿಗೆ ಹೋಗಲು ಸಿದ್ಧರಾಗಿ ಇಂತಹ ಹೋರಾಟ ಕೈಗೆತ್ತಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆಗೂ ಮುನ್ನ ಆಯನೂರಿನಿಂದ ಶಿವಮೊಗ್ಗವರೆಗೆ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಸಮಾರೋಪದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಮ್ಮ ಸರ್ಕಾರ ಬಂದರೆ ಶರಾವತಿ ಮುಳುಗಡೆ ಸಂತ್ರಸ್ತರು ಸೇರಿ ಮಲೆನಾಡು ರೈತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಸರ್ಕಾರ ಬಂದು ಒಂದೂವರೆ ವರ್ಷವಾದರೂ ವಿಧಾನಸಭೆಯಲ್ಲಿ ಈ ವಿಷಯದ ಕುರಿತು ಕನಿಷ್ಟ ಚರ್ಚೆ ನಡೆಯದೆ ಇರುವುದು ಖಂಡನೀಯ. ವಿಧಾನಸಭೆಯಲ್ಲಿ ಮಲೆನಾಡು ಭಾಗದ ರೈತರ ಭೂಸಮಸ್ಯೆ ಚರ್ಚೆ ನಡೆಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ತಕ್ಷಣ ಸಿಎಂ ಸಿದ್ದರಾಮಯ್ಯನವರು ಮಲೆನಾಡು ರೈತರ ಭೂಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮಲೆನಾಡು ರೈತ ಹೋರಾಟ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ತರು, ಅರಣ್ಯ ವಾಸಿಗಳು, ಬಗರ್‌ ಹುಕುಂ ರೈತರ ಸಮಸ್ಯೆ ಬಗೆಹರಿಸುವಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಸಂಪೂರ್ಣ ವಿಫಲವಾಗಿದೆ. ರೈತರು ಅನಿವಾರ್ಯವಾಗಿ ಕಾನೂನು ಭಂಗ ಚಳವಳಿಗೆ ಇಳಿಯುವ ಸ್ಥಿತಿಯನ್ನು ಸರ್ಕಾರವೇ ನಿರ್ಮಾಣ ಮಾಡಿದೆ. ಮಲೆನಾಡು ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿರಂತರವಾಗಿರುತ್ತದೆ. ಮಲೆನಾಡು ರೈತರ ಮೇಲೆ ಪದೇ ಪದೇ ಶೋಷಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾವು ಮಲೆನಾಡು ರಾಜ್ಯ ಬೇಡಿಕೆ ಇರಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿವಾನಂದ ಕುಗ್ವೆ, ರವಿ ಕುಗ್ವೆ, ಪರಮೇಶ್ವರ ದೂಗೂರು, ಎನ್.ಡಿ.ವಸಂತ ಕುಮಾರ್, ಡಾ.ರಾಮಚಂದ್ರಪ್ಪ, ಶ್ರೀಕರ, ಗಣೇಶ್ ಬೆಳ್ಳಿ, ಕುಮಾರ ಗೌಡ, ರಮೇಶ್ ಕೆಳದಿ, ಹೊಯ್ಸಳ ಗಣಪತಿಯಪ್ಪ, ಭದ್ರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಬೇಡಿಕೆ ಈಡೇರಿಸುವವರೆಗೂ ಹೋರಾಟ ನಿಲ್ಲದು: ದಿನೇಶ್‌ ಶಿರವಾಳ

ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಅ.21 ರಿಂದ ಮಲೆನಾಡು ರೈತರ ಭೂ ಹಕ್ಕು ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಸೌಜನ್ಯಕ್ಕೂ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಅಹವಾಲು ಆಲಿಸಿಲ್ಲ. ಈ ಹಿನ್ನೆಲೆಯಲ್ಲಿ ನಾವು ಕೊಟ್ಟ ಭೂಮಿ ಹುಡುಕಿಕೊಳ್ಳುತ್ತೇವೆ ಎಂದು ರೈತರು ಲಿಂಗನಮಕ್ಕಿ ಜಲಾಶಯ ಮುತ್ತಿಗೆ ಹಾಕಲು ಹೊರಟಿದ್ದೇವೆ. ನಮ್ಮ ಬೇಡಿಕೆ ಈಡೇರಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.