ಲಿಂಗಾಯತ ಜಾತಿಯಲ್ಲ, ಜಾತಿರಹಿತ ಧರ್ಮ

| Published : Jul 01 2025, 12:48 AM IST

ಲಿಂಗಾಯತ ಜಾತಿಯಲ್ಲ, ಜಾತಿರಹಿತ ಧರ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಚನಗಳು ಮತ್ತು ಬಸವ ತತ್ವಗಳನ್ನು ಜಗತ್ತಿನ ಪ್ರಮುಖ ಐದಾರು ಭಾಷೆಗಳಿಗೆ ಭಾಷಾಂತರಿಸಲು ₹ 5 ಕೋಟಿ ಆರ್ಥಿಕ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಚನಗಳು ಮತ್ತು ಬಸವ ತತ್ವಗಳನ್ನು ಜಗತ್ತಿನ ಪ್ರಮುಖ ಐದಾರು ಭಾಷೆಗಳಿಗೆ ಭಾಷಾಂತರಿಸಲು ₹ 5 ಕೋಟಿ ಆರ್ಥಿಕ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ನನ್ನೊಳಗಿನ ನಾನು ನೀನೇ (My Me is Thee) ಬಸವಣ್ಣನವರ ವಚನಗಳನ್ನು ಇಂಗ್ಲೀಷ್‌ಗೆ ಅನುವಾದಿಸಿರುವ ಡಿವೈಎಸ್ಪಿ ಬಸವರಾಜ ಯಲಿಗಾರ ಅವರ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದರು. ಲಿಂಗಾಯಿತ ಜಾತಿಯಲ್ಲ. ಅದು ಜಾತಿ ರಹಿತ ಧರ್ಮ. ಅಂದು ಕಲ್ಯಾಣ ಕ್ರಾಂತಿ ನಡೆಯದಿದ್ದರೆ ಇಂದು ಇಡೀ ದೇಶವೇ ಬಸವ ಧರ್ಮವಾಗುತ್ತಿತ್ತು. ಪೊಲೀಸ್ ಇಲಾಖೆಯಂಥ ಸದಾ ವ್ಯಸ್ಥವಾಗಿರುವ ಇಲಾಖೆಯಲ್ಲಿ ಕೆಲಸದಲ್ಲಿದ್ದುಕೊಂಡು ಬಸವರಾಜ ಯಲಿಗಾರ ಅವರು ವಚನಗಳನ್ನು ಆಂಗ್ಲಭಾಷೆಗೆ ಅನುವಾದಿಸಿ ಜಗತ್ತಿಗೆ ತಲಪುವಂತೆ ಮಾಡಿರುವುದು ಶ್ಲಾಘನೀಯವಾಗಿದೆ. ಇಂಥ ಬಸವಮುಖಿ ಚಿಂತಕರಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.

ಬಸವ ಕಲ್ಯಾಣದ ಬಸವ ಮಹಾಮನೆ ಸಂಸ್ಥೆಯ ಡಾ.ಸಿದ್ಧರಾಮ ಬೆಲ್ದಾಳ ಮಾತನಾಡಿ, ಬಸವಣ್ಣನ ಯಾವುದೇ ಒಂದು ಸಮುದಾಯ, ಪ್ರದೇಶದ ಸ್ವತ್ತಲ್ಲ. ಬಸವಣ್ಣನವರ ನಿಜವಾದ ಬಸವತತ್ವಗಳು ಇನ್ನೂ ಜಗತ್ತಿಗೆ ತಲುಪಿಲ್ಲ. ಅನೇಕ ಮಠಗಳಿಗೂ ಮುಟ್ಟಿಲ್ಲ. ಬಹುತೇಕರಿಗೆ ಲಿಂಗಪೂಜೆಯ ಪದ್ಧತಿಯೂ ತಿಳಿದಿಲ್ಲ. ಬಸವ ತತ್ವದಂತೆ ಆಯತ, ಲಿಂಗಾಯತ, ಸ್ವಾಯತ್ತ ಸಾಧಿಸಬೇಕು. ಮನುಕುಲದ ತತ್ವಗಳ ಸಾರವನ್ನು ತಿಳಿದುಕೊಂಡು ದೇವರಾಗುವುದೇ ಲಿಂಗಾಯಿತ ಎಂಬುದಾಗಿದೆ. ಧರ್ಮ ಮತ್ತು ಜಾತಿ ಹಾಗೂ ಬಡತನ ಮತ್ತು ಶ್ರೀಮಂತ ಇಂದು ಪ್ರಮುಖ ವಿಷಯಗಳಾಗಿವೆ. ಅದನ್ನು ಬದಿಗಿಟ್ಟು ಎಲ್ಲರನ್ನೂ ಮಾನವೀಯತೆ, ಸಹೋದರತೆಯಿಂದ ಅಪ್ಪಿಕೊಂಡರೆ ಬಸವಣ್ಣನವರು ಸಾರ್ವತ್ರಿಕರಾಗುತ್ತಾರೆ ಎಂದು ಹೇಳಿದರು.

ತಬ್ಲಿಕ್ ಜಮಾತ್ ಮುಖ್ಯಸ್ಥ ಮೌಲಾನಾ ಅಬೂಬಕರ ಮಾತನಾಡಿ, ಜಾತಿ ವ್ಯವಸ್ಥೆ ಹೋಗಲಾಡಿಸಿ ನ್ಯಾಯಕ್ಕಾಗಿ ಬಸವಣ್ಣನವರು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ನಾವು ಬಸವಣ್ಣನವರ ವಚನಗಳನ್ನು ಹಿಂದಿ ಮತ್ತು ಉರ್ದು ಭಾಷೆಗಳಿಗೆ ಅನುವಾದ ಮಾಡಿಸುತ್ತೇವೆ. ಬುದ್ಧ, ಬಸವ, ಅಂಬೇಡ್ಕರ್ ಮತ್ತು ಇಸ್ಲಾಂ ಧರ್ಮಗಳಲ್ಲಿನ ಸಮಾನ ಅಂಶಗಳ ಅಧ್ಯಯನ ನಡೆಸಿ ಗ್ರಂಥ ಪ್ರಕಟಿಸುತ್ತೇವೆ ಎಂದರು.

ಹಿರಿಯ ಸಾಹಿತಿ ದೇವನೂರ ಶಂಕರ ಮಾತನಾಡಿ, ಬಸವಾದಿ ಶರಣರ ವಚನಗಳು ಶರಣ ಸಂಸ್ಕೃತಿಯ ಅರಿವು ಮತ್ತು ಜ್ಞಾನದ ಪ್ರತೀಕವಾಗಿವೆ. ಬದುಕು ಹೂವಿನಂತಿರಬೇಕಾದರೆ ಜಾತಿ, ಧರ್ಮ ಬಿಟ್ಟು ನಾವೆಲ್ಲರೂ ಒಂದೇ ಎಂದು ಜೀವನ ಸಾಗಿಸಬೇಕಿದೆ. ಐರೋಪ್ಯ ರಾಷ್ಟ್ರಗಳು ಕನಸನ್ನು ಕಾಣುವ ಹೊತ್ತಿನಲ್ಲಿ ನಮ್ಮ ಶರಣರು ಸಮಾನತೆಗಾಗಿ ಸಾಮಾಜಿಕ ಕ್ರಾಂತಿ ಮಾಡಿದ್ದರು. ಬದುಕು ಪ್ರದರ್ಶನವಾಗಬಾರದು, ನಿದರ್ಶನವಾಗಬೇಕು ಎಂಬುದನ್ನು ವಚಗಳ ಮೂಲಕ ಸಾರಿದರು ಎಂದು ಸ್ಮರಿಸಿದರು.

ವಿಧಾನ ಪರಿಷತ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ವಚನ ಸಾಹಿತ್ಯ ಕೇವಲ ಚಿಂತಕರಿಗೆ ಎಂಬಂತಾಗಿದ್ದು, ಅದನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕಾಗಿದೆ. ಈ ವಚನ ಸಾಹಿತ್ಯವನ್ನು ಪಠ್ಯಕ್ರಮಗಳಲ್ಲಿ ಅಳವಡಿಸುವ ಮೂಲಕ ಮಕ್ಕಳಲ್ಲಿ ನೈತಿಕ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.

ಅಮೇರಿಕದ ಫ್ಲೋರಿಡಾದ ಪ್ರಾಧ್ಯಾಪಕ ಗಿಲ್ ಬೆನ್ ಹೆರೂತ್ ಮಾತನಾಡಿ, ಇಸ್ರೆಲ್ ನನ್ನ ಜನ್ಮಭೂಮಿ. ಬಸವಣ್ಣನವರ ವಚನ ಸಾಹಿತ್ಯದಿಂದ ಪ್ರೇರಿತನಾಗಿದ್ದೇನೆ. ನನ್ನ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಈ ಸಾಹಿತ್ಯ ಹೇಳುತ್ತೇನೆ. ಬಸವರಾಜ ಯಲಿಗಾರ ರಚಿಸಿರುವ ಗ್ರಂಥ ಕರ್ನಾಟಕ, ಭಾರತವಷ್ಟೇ ಅಲ್ಲ, ಜಗತ್ತಿಗೂ ಮಹತ್ವದ ಕೊಡುಗೆ ಎಂದು ಹೇಳಿದರು.

ಬೆಂಗಳೂರು ಅಕ್ಕನಮನೆ ಪ್ರತಿಷ್ಠಾನದ ಲೇಖಕಿ ಸಿ.ಸಿ.ಹೇಮಲತ, ಸಾಹಿತಿ ಬಸವರಾಜ ಯಲಿಗಾರ ಮಾತನಾಡಿದರು. ಸಾಹಿತಿ ಬಿ.ಆರ್.ಬನಸೋಡೆ, ಶಿಲ್ಪಾ ಬಸವರಾಜ ಯಲಿಗಾರ ದಂಪತಿಯನ್ನು ಗೌರವಿಸಲಾಯಿತು. ಎಸ್ಪಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಸಾಹಿತಿ ರಾಜಶೇಖರ ಮಠಪತಿ(ರಾಗಂ), ಶಿಕ್ಷಕ ಅಶೋಕ ಹಂಚಲಿ, ನ್ಯಾಯವಾದಿ ಮಹ್ಮದಗೌಸ್ ಹವಾಲ್ದಾರ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರಿಫ್, ಪೊಲೀಸ್ ಅಧಿಕಾರಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಎಎಸ್ಐ ಧಾರವಾಡ ಮುಖ್ಯಸ್ಥ ರಮೇಶ ಮೂಲಿಮನಿ ಮುಂತಾದವರು ಉಪಸ್ಥಿತರಿದ್ದರು. ಡಾ.ಮಹಾಂತೇಶ ಬಿರಾದಾರ ಸ್ವಾಗತಿಸಿದರು. ದಿಕ್ಷಾ ಮತ್ತು ದಿವ್ಯ ಭಿಸೆ ಭರತ ನಾಟ್ಯ ಪ್ರದರ್ಶಿಸಿದರು. ಸಾಕ್ಷಿ ಹಿರೇಮಠ ವಚನ ಗಾಯನ ಹೇಳಿದರು. ಸಾನಿಯಾ ಜಿದ್ದಿ ನಿರೂಪಿಸಿದರು. ಶರಣು ಸಬರದ ವಂದಿಸಿದರು.

-----

ಕೋಟ್‌

ಮುಗ್ದ ಬಸವಾನುಯಾಯಿಗಳಿಂದ 12ನೇ ಶತಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿಯನ್ನು ಇತಿಹಾಸದಿಂದ ಅಳಿಸಿ ಹಾಕಲು ಬಸವಣ್ಣನವರನ್ನು ಎತ್ತುಗಳಿಗೆ ಹೋಲಿಸುವ ವ್ಯವಸ್ಥಿತ ಕೆಲಸ ನಡೆದಿದೆ. ಕೆಲವರು ಈಗಲೂ ಸುಳ್ಳು ವಚನಗಳನ್ನು ಸೇರಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಯಾರ ವಿರುದ್ಧವೂ ಇಲ್ಲ. ಆದರೆ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ನಾವು ರಕ್ಷಿಸುತ್ತೇವೆ.

- ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ