ಸಾರಾಂಶ
ಯಲಬುರ್ಗಾ:ಬಸವಾದಿ ಶಿವಶರಣರು ಕಂಡಂತೆ ಲಿಂಗಾಯತ ಧರ್ಮ ವೈಜ್ಞಾನಿಕ, ಸರಳ ಆಚರಣೆಗಳ ಧರ್ಮವಾಗಿದೆ ಎಂದು ಬೇಲೂರು ಗುರುಬಸವೇಶ್ವರ ಮಠದ ಡಾ. ಮಹಾಂತ ಬಸವಲಿಂಗ ಸ್ವಾಮೀಜಿ ಹೇಳಿದರು.ತಾಲೂಕಿನ ಮರಕಟ್ ಗ್ರಾಮದಲ್ಲಿ ಬಸವ ಕೇಂದ್ರದ ವತಿಯಿಂದ ಶ್ರಾವಣ ಮಾಸದ ನಿಮಿತ್ತ ತಿಂಗಳ ಪರ್ಯಂತ ವಚನಗಳ ನಡಿಗೆ ಮನೆ-ಮನಗಳ ಕಡೆಗೆ ಎನ್ನುವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಪ್ರತಿಯೊಬ್ಬರೂ ಸ್ವಾತಂತ್ರ‍್ಯದಿಂದ ಬದುಕಲು 12ನೇ ಶತಮಾನದ ವಚನಕಾರರು ವಚನ ರಚಿಸಿದ್ದಾರೆ. ಪರತಂತ್ರದ ಆಡಳಿತದಿಂದ ಹೊರಬರಲು, ಪ್ರಜಾತಂತ್ರ ವ್ಯವಸ್ಥೆ ಜಾರಿಗೆ ತರುವಲ್ಲಿ ಬಸವೇಶ್ವರರು ಶ್ರಮಿಸಿದ್ದಾರೆ. ಬಸವಾದಿ ಶರಣರು ತಾಳೆಗರಿಯ ಮೇಲೆ ಬರೆದಿರುವ ವಚನಗಳನ್ನು ಫ.ಗು. ಹಳಕಟ್ಟಿ ಅವರು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಮುದ್ರಿಸಿ ಮನೆ-ಮನೆಗೆ ಹಂಚಿಕೆ ಮಾಡಿದ್ದರಿಂದಲೇ ಎಲ್ಲರೂ ವಚನ ಓದಿ ತಿಳಿದುಕೊಳ್ಳುವಂತಾಗಿದೆ ಎಂದರು.ಶರಣರ ವಚನಗಳು ಲಿಂಗಾಯತದ ಧರ್ಮಗ್ರಂಥ. ಅವುಗಳಲ್ಲಿ ಸಮಾಜಕ್ಕೆ ಬೇಕಾದ ಸರ್ವ ಆಚರಣೆಗಳ ವಿವರಣೆ ಇದೆ. ಆದರೆ, ವಚನಗಳನ್ನು ಅರಿಯದೇ ಅನ್ಯ ಪದ್ಧತಿಗಳ ಪ್ರಭಾವಕ್ಕೆ ಲಿಂಗಾಯತರು ಒಳಗಾಗಿ ನಿಜಾಚರಣೆಗಳನ್ನು ಜಾರಿಗೆ ತರುತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಶರಣರು ತಮ್ಮ ವಚನಗಳಲ್ಲಿ ಸರಳತೆ ಹಾಗೂ ವೈಜ್ಞಾನಿಕತೆಯ ಬಗ್ಗೆ ತಿಳಿಸಿದ್ದಾರೆ. ಮನೆಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ನಿಜಾಚರಣೆ ಮಾಡಬೇಕು ಎಂದರು.ಜಾಗತಿಕ ಲಿಂಗಾಯತ ಮಹಾಸಭಾ ಸದಸ್ಯ ಶಂಕ್ರಪ್ಪ ಬೇವೂರು ಮಾತನಾಡಿದರು. ಈ ವೇಳೆ ಅಮರೇಶಪ್ಪ ಬಳ್ಳಾರಿ, ಶರಣಪ್ಪ ಬ್ಯಾಲಿಹಾಳ, ಬಸವರಾಜಪ್ಪ ಇಂಗಳದಾಳ, ರುದ್ರಪ್ಪ ಮರಕಟ್, ಹಂಪಣ್ಣ ಗೂಡದೂರ, ಹಂಪಣ್ಣ ಗುಡದೂರು, ಹನುಮಗೌಡ ಬಳ್ಳಾರಿ, ಹನುಮಂತಪ್ಪ ಗದ್ದಿ, ರೇಣುಕಪ್ಪ ಮಂತ್ರಿ, ನಾಗನಗೌಡ ಜಾಲಿಹಾಳ, ಮುದಿಯಪ್ಪ ಮೇಟಿ, ಪಾಲಾಕ್ಷಪ್ಪ ಹುಣಶಿಹಾಳ, ಅಶೋಕ ಹರ್ಲಾಪುರ , ಸುರೇಶ ನಾಗಲೀಕರ, ಸಂಗನೌಡ ವಂಕಲಕುಂಟಿ ಸೇರಿದಂತೆ ಮತ್ತಿತರರು ಇದ್ದರು.