ಲಿಂಗಾಯತ ಧರ್ಮಕ್ಕಿದೆ 900 ವರ್ಷಗಳ ಇತಿಹಾಸ

| Published : Oct 16 2023, 01:45 AM IST

ಸಾರಾಂಶ

ಸಮಾಜದಲ್ಲಿದ್ದ ಮೂಢನಂಬಿಕೆ, ಬಾಲ್ಯ ವಿವಾಹ ಇಂತಹವುಗಳನ್ನು ಹೋಗಲಾಡಿಸಲು ಬಸವಾದಿ ಶಿವಶರಣರು ಲಿಂಗಾಯತ ಧರ್ಮ ಸ್ಥಾಪಿಸಿದ್ದು, ಇದಕ್ಕೆ 900 ವರ್ಷಗಳ ಇತಿಹಾಸವಿದೆ. ಧರ್ಮ ಎಂಬುದು ರಾಜಕೀಯ ತರ್ಕವಲ್ಲ, ನಂಬಿಕೆಗೆ ಅರ್ಹವಾದ ವಿಚಾರ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಡಿಜಿಪಿ ಶಂಕರ ಬಿದರಿ ಹೇಳಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಸಮಾಜದಲ್ಲಿದ್ದ ಮೂಢನಂಬಿಕೆ, ಬಾಲ್ಯ ವಿವಾಹ ಇಂತಹವುಗಳನ್ನು ಹೋಗಲಾಡಿಸಲು ಬಸವಾದಿ ಶಿವಶರಣರು ಲಿಂಗಾಯತ ಧರ್ಮ ಸ್ಥಾಪಿಸಿದ್ದು, ಇದಕ್ಕೆ 900 ವರ್ಷಗಳ ಇತಿಹಾಸವಿದೆ. ಧರ್ಮ ಎಂಬುದು ರಾಜಕೀಯ ತರ್ಕವಲ್ಲ, ನಂಬಿಕೆಗೆ ಅರ್ಹವಾದ ವಿಚಾರ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಡಿಜಿಪಿ ಶಂಕರ ಬಿದರಿ ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಜಿಲ್ಲೆಯ ನೂತನ ಶಾಸಕರಿಗೆ ಅಭಿನಂದನೆ ಹಾಗೂ ಹಿರಿಯ ಚೇತನರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪುರಾತನ ಇತಿಹಾಸದಲ್ಲಿ 36 ಲಕ್ಷ ವರ್ಷಗಳ ಹಿಂದಿನ ಧರ್ಮ ಯಾವುದಾದರೂ ಇದ್ದರೇ ಅದು ವೀರಶೈವ ಲಿಂಗಾಯತ ಧರ್ಮ. ವೀರಶೈವ ಹಾಗೂ ಲಿಂಗಾಯತ ಎರಡು ಒಂದೇ. ದಾಖಲಾತಿಗಳಲ್ಲಿ ವೀರಶೈವ ಎಂದಷ್ಟೇ ಬರೆಯದೇ ಲಿಂಗಾಯತ ಎಂದು ಹಾಗೂ ಆಯಾ ಸಮಾಜದವರು ವಿವಿಧ ಒಳಪಂಗಡಗಳನ್ನು ಬರೆಯಬೇಕು. ಶರಣ ವರ್ಗ, ಲಿಂಗಾಯತ ವರ್ಗ, ಸಂಸ್ಕೃತ ವರ್ಗಗಳಲ್ಲಿ ಸಂಸ್ಕೃತಿ, ಆಚಾರ, ವಿಚಾರ, ನಂಬಿಕೆ ಒಂದೇಯಾಗಿರುತ್ತವೆ. ದಲಿತರಿಗೆ, ಹಿಂದುಳಿದವರಿಗೆ ಲಿಂಗ ದೀಕ್ಷೆ ಮಾಡುವ ಮೂಲಕ ಲಿಂಗಾಯತ ಧರ್ಮಕ್ಕೆ ಕರೆತರುವ ಕೆಲಸವನ್ನು ಇಂದು ಮಠಗಳು ಮಾಡಬೇಕಿದೆ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್. ಕೋರಿಶೆಟ್ಟರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವೀರಶೈವ ಸಮಾಜದವರು ಸ್ವಾರ್ಥ, ಅಸೂಯೆ ಬಿಟ್ಟು ಒಗ್ಗಟ್ಟಾಗಬೇಕು. ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿದರು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ನೆಗಳೂರಿನ ಗುರುಶಾಂತೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ಹಿರಿಯ ಚೇತನರಿಗೆ, ನೂತನ ಶಾಸಕರಿಗೆ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಲಿತಾ ಹಿರೇಮಠ, ಶಂಭು ಚಕ್ಕಡಿ, ಲಿಂಗರಾಜ ಚಪ್ಪರದಹಳ್ಳಿ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಬಿ. ಸಕ್ರಿ, ಹಿರಿಯ ಚೇತನರಾದ ಕರಬಸಪ್ಪ ಯಲ್ಲಾಪುರ, ಶಿವಮೂರ್ತಿ ಮೆಣಸಿನಹಾಳ, ಉಳಿವೆಪ್ಪ ಕಡ್ಲಿ, ಮಹಾದೇವಕ್ಕ ಭರತನೂರಮಠ, ಮುಖಂಡರಾದ ರಾಜೇಶ ಗುಡಿ, ವಿಶ್ವನಾಥ ಅಂಕಲಕೋಟಿ, ಗುರುಶಾಂತ ಯತ್ನಳ್ಳಿ, ಬಸವರಾಜ ಹಾದಿಮನಿ, ಅಶ್ವಿನಿ ಟೊಂಕದ ಸೇರಿದಂತೆ ಮಹಾಸಭಾದ ಜಿಲ್ಲಾ, ತಾಲೂಕು ಘಟಕಗಳ ಪದಾಧಿಕಾರಿಗಳು ಹಾಗೂ ಸಮಾಜದವರು ಪಾಲ್ಗೊಂಡಿದ್ದರು.

ಮಹಾಸಭಾ ಕಾರ್ಯದರ್ಶಿ ವಿರೂಪಾಕ್ಷಪ್ಪ ಕಡ್ಲಿ ಸ್ವಾಗತಿಸಿದರು. ಪುಷ್ಪಾ ಶೆಲವಡಿಮಠ ನಿರೂಪಿಸಿದರು.

231 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:

2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90 ಹಾಗೂ ಅದಕ್ಕಿಂತಲೂ ಹೆಚ್ಚು ಅಂಕಗಳಿಸಿದ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. 134 ಎಸ್ಸೆಸ್ಸೆಲ್ಸಿ ಹಾಗೂ 97 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 231 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.