ಇಷ್ಟಲಿಂಗ ಮರೆತ ಲಿಂಗಾಯರು ಅಲ್ಪಸಂಖ್ಯಾತರು ಆಗುತ್ತಿದ್ದಾರೆ: ನಿಜಗುಣಾನಂದ ಮಹಾಸ್ವಾಮೀಜಿ

| Published : Mar 24 2025, 12:33 AM IST

ಇಷ್ಟಲಿಂಗ ಮರೆತ ಲಿಂಗಾಯರು ಅಲ್ಪಸಂಖ್ಯಾತರು ಆಗುತ್ತಿದ್ದಾರೆ: ನಿಜಗುಣಾನಂದ ಮಹಾಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣ ನೀಡಿದ ಇಷ್ಟಲಿಂಗವನ್ನು ಮರೆತಿರುವ, ನಿರ್ಲಕ್ಷ್ಯ ಮಾಡಿದ್ದರ ಫಲವಾಗಿ ಇಂದು ಲಿಂಗಾಯತರು ರಾಜ್ಯದಲ್ಲಿ ಅಲ್ಪಸಂಖ್ಯಾತರು ಆಗುತ್ತಿದ್ದಾರೆ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಮಹಾಸ್ವಾಮಿಗಳು ವಿಷಾಧಿಸಿದರು.

ಹುಬ್ಬಳ್ಳಿ: ಬಸವಣ್ಣ ನೀಡಿದ ಇಷ್ಟಲಿಂಗವನ್ನು ಮರೆತಿರುವ, ನಿರ್ಲಕ್ಷ್ಯ ಮಾಡಿದ್ದರ ಫಲವಾಗಿ ಇಂದು ಲಿಂಗಾಯತರು ರಾಜ್ಯದಲ್ಲಿ ಅಲ್ಪಸಂಖ್ಯಾತರು ಆಗುತ್ತಿದ್ದಾರೆ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಮಹಾಸ್ವಾಮಿಗಳು ವಿಷಾಧಿಸಿದರು.

ಭಾನುವಾರ ಉಣಕಲ್ ಸಿದ್ದಪ್ಪಜ್ಜನ ಜಾತ್ರೆಯ 8ನೇ ದಿನದ ಪ್ರವಚನ ನೀಡಿದ ಅವರು, ಕೊರಳಲ್ಲಿ ಸಿಲುಬೆ ಧರಿಸಿದ ಕ್ರೈಸ್ತರು ವಿಶ್ವದಗಲ ಹಬ್ಬಿದರೆ, ವೈಜ್ಞಾನಿಕ ತಳಹದಿಯಲ್ಲಿ ರೂಪಿತವಾದ ಮತ್ತು ಸರ್ವರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಕ್ರಾಂತಿಕಾರಕ ಇಷ್ಟಲಿಂಗವನ್ನು ಕೊರಳಿಂದ ಬಿಚ್ಚಿಟ್ಟ ಲಿಂಗಾಯತರು ಕರ್ನಾಟಕದಲ್ಲೇ ಅಲ್ಪಸಂಖ್ಯಾತರು ಆಗುತ್ತಿದ್ದಾರೆ ಎಂದರು.

ಏಸು ಶಿಲುಬೆಗೇರಿ ಪ್ರಾಣ ಬಿಟ್ಟಾಗ ಕೇವಲ ನಾಲ್ಕುಜನ ಮಾತ್ರ ಆತನ ಅನುಯಾಯಿಗಳು ಇದ್ದರು. ಅದೇ ಶಿಲುಬೆಯನ್ನು ಭಕ್ತಿ, ಶ್ರದ್ಧೆಯಿಂದ ಕೊರಳಲ್ಲಿ ಧರಿಸಿದ ಅವರು ಏಸುವಿನ ಬೋಧನೆಗಳನ್ನು ಪ್ರಚಾರ ಮಾಡುತ್ತ ಇಂದು ಜಗತ್ತಿನ ಎಲ್ಲ ದೇಶಗಳಲ್ಲಿ ಕ್ರೈಸ್ತರು ಇರುವಂತೆ ಮಾಡಿದ್ದಾರೆ. ಅಷ್ಟು ದೊಡ್ಡಮಟ್ಟದಲ್ಲಿ ಕ್ರೈಸ್ತ ಧರ್ಮ ಹಬ್ಬಿದೆ. ಇದು ಲಿಂಗಾಯತರಿಗೆ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.

ಕಲ್ಯಾಣಕ್ರಾಂತಿ ಆದಾಗ ಲಕ್ಷ ಲಕ್ಷ ಬಸವ ಅನುಯಾಯಿ ಇಷ್ಟಲಿಂಗಧಾರಿ ಶರಣರು ಇದ್ದರು. ಇಷ್ಟಲಿಂಗ ಜಾತಿಸೂಚಕವಲ್ಲ, ಧಾರ್ಮಿಕ ಸ್ವಾತಂತ್ರ್ಯದ ಸಂಕೇತ. ಅಕ್ಕ ನಾಗಲಾಂಬಿಕೆಗೆ ಇಲ್ಲದ ಜನಿವಾರ ನನಗೇಕೆ ಎಂದು ಜನಿವಾರ ಬಿಸಾಕಿ ಇಷ್ಟಲಿಂಗ ಧರಿಸಿದ ಬಸವಣ್ಣ, ಸಮಾನತೆ, ಶರಣ ತತ್ವದಲ್ಲಿ ನಂಬಿಕೆ ಇಟ್ಟ ಎಲ್ಲರಿಗೂ ಅದನ್ನು ನೀಡಿದ. 12 ಸಾವಿರ ವೇಶ್ಯೆಯರಿಗೆ ಇಷ್ಟಲಿಂಗ ಕಟ್ಟಿ ಶರಣೆಯರನ್ನಾಗಿ ಮಾಡಿದ. ಗುಡಿ ಸಂಸ್ಕೃತಿಯಿಂದ ಅಸಮಾನತೆಗೆ ತುತ್ತಾದ ಎಲ್ಲ ಸಮುದಾಯವನ್ನು ಇಷ್ಟಲಿಂಗ ನೀಡಿ ಲಿಂಗಾಯತ ಧರ್ಮಕ್ಕೆ ಬರಮಾಡಿಕೊಂಡ. ಇಂಥ ಪವಿತ್ರ, ದೈವ ದರ್ಶನ ಮಾಡಿಸುವ ಇಷ್ಟಲಿಂಗವನ್ನು ಇಂದು ಬಹಳಷ್ಟು ಲಿಂಗಾಯತರು ಮರೆತಿದ್ದಾರೆ ಎಂದು ನೊಂದು ನುಡಿದರು.

ಇಷ್ಟಲಿಂಗದಿಂದ ದೃಷ್ಟಿಯೋಗ:

ಗುರುಗಳಲ್ಲಿ ಕುಕ್ಕುಟನ್ಯಾಯ, ಮತ್ಸ್ಯನ್ಯಾಯ ಮತ್ತು ಕೂರ್ಮನ್ಯಾಯ ಎಂದು ಮೂರುಪ್ರಕಾರದ ಗುರುಗಳು ಇರುತ್ತಾರೆ. ಆತ್ಮಜ್ಞಾನ ಅನುಗ್ರಹಿಸುವ ಗುರುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅಂದಾಗ ನಮ್ಮ ಇಷ್ಟಾರ್ಥ ಪ್ರಾಪ್ತವಾಗುತ್ತದೆ ಎಂದು ಶ್ರೀಗಳು ಹೇಳಿದರು.

ಮತ್ಸ್ಯನ್ಯಾಯದ ಗುರು ತನ್ನ ಕಣ್ಣುಗಳಿಂದಲೇ ಎಲ್ಲವನ್ನು ಅರಿತು ಭಕ್ತರಿಗೆ ಜ್ಞಾನ, ಸುಖ ಕರುಣಿಸುತ್ತಾನೆ. ಇಂಥ ಅನುಗ್ರಹ ಬುದ್ಧ ಸೇರಿದಂತೆ ಅನೇಕರು ಮಾಡುತ್ತ ಬಂದಿದ್ದರು. ದೇಹ-ಮನಸು ನಿಯಂತ್ರಿಸಲು ನಮ್ಮಲ್ಲಿ ಅನೇಕ ಯೋಗಗಳೂ ಇದ್ದವು. ಆದರೆ, ಮೊಟ್ಟಮೊದಲ ಬಾರಿಗೆ ಬಸವಣ್ಣ ಇಷ್ಟಲಿಂಗ ಸಾಧನೆಯ ಮೂಲಕ ದೃಷ್ಟಿಯೋಗವನ್ನು ಈ ಜಗತ್ತಿಗೆ ಪರಿಚಯಿಸಿದ. ಇದು ತನ್ನನ್ನು ತಾನು ಅರಿಯುವ ಸಾಧನವಾಯಿತು ಎಂದು ಲಿಂಗದ ಮಹತ್ವ ವಿವರಿಸಿದರು.

ಯಾವಾಗ ನಾವು ನಮ್ಮೊಳಗೆ ನೋಡಲು ಆರಂಭಿಸುತ್ತೇವೆಯೋ ಸುಜ್ಞಾನದತ್ತ ಪ್ರಯಾಣ ಮಾಡುತ್ತೇವೆ ಎಂದೇ ಅರ್ಥ. ಸರಿಯಾದ ನಿಯಮದಲ್ಲಿ ಇಷ್ಟಲಿಂಗದ ದೃಷ್ಟಿಯೋಗ ಸಾಧನೆ ಮಾಡಿದರೆ ಇಂಥ ಸುಜ್ಞಾನ ಪ್ರಾಪ್ತಿಯಾಗುತ್ತದೆ. ತಂದೆ-ತಾಯಿಗಳು ಮೊದಲು ಯಾವುದೇ ಮುಜಯಗರ ಇಲ್ಲದೇ ಕೊರಳಲ್ಲಿ ಇಷ್ಟಲಿಂಗ ಧರಿಸಬೇಕು. ಮಕ್ಕಳ ಕೊರಳಿಗೂ ಕಟ್ಟಿ, ನಿತ್ಯ ಸಾಧನೆಗೆ ಹಚ್ಚಿದರೆ ಮನೆಯಲ್ಲಿನ ಎಷ್ಟೋ ಸಮಸ್ಯೆಗಳು ತನ್ನಿಂದ ತಾನೇ ದೂರವಾಗುತ್ತವೆ. ಯುವಕರ ಮನಸಿನಲ್ಲಿ ಗಣನೀಯ ಬದಲಾವಣೆ ಆಗುತ್ತದೆ. ಯುವಕರು ವ್ಯಸನ, ದುಶ್ಚಟಗಳಿಂದ ಧೂರವಾಗುತ್ತಾರೆ. ಆಗ ಅವರದು ಸಂಸ್ಕಾರವಂತರ ಮನೆಯಾಗುತ್ತದೆ ಎಂದು ನೆರೆದಿದ್ದ ಜನಸಮೂಹಕ್ಕೆ ಕಿವಿಮಾತು ಹೇಳಿದರು.

ಬಸವ ಮಾರ್ಗದಲ್ಲಿ ನಮಗೆ ನಂಬಿಕೆ ಇರುವುದೇ ನಿಜವಾದರೆ ಮೊದಲು ವಿಭೂತಿ, ಇಷ್ಟಲಿಂಗ, ರುದ್ರಾಕ್ಷಿ ಧರಿಸಬೇಕು. ಇದರಿಂದ ಮೇಲು-ಕೀಳು, ಶ್ರೇಷ್ಟ-ಕನಿಷ್ಟ, ಆ ಜಾತಿ- ಈ ಜಾತಿ ಎಲ್ಲವೂ ತನ್ನಿಂದ ತಾನೇ ಮಾಯವಾಗಿ ಶರಣರು ಕಂಡ ತಾರತಮ್ಯ ರಹಿತ ಸಮಸಮಾಜ ನಿರ್ಮಾಣವಾಗುತ್ತದೆ. ಬದುಕು ಸುಂದರ ಮತ್ತು ಸುಖಕರವಾಗುತ್ತದೆ ಎಂದು ನಿಜಗುಣಾನಂದರು ಒತ್ತಿ ಹೇಳಿದರು.