ಹೋರಾಟಗಾರರಿಗೆ ಲಿಂಗೇಗೌಡರು ಮಾದರಿ: ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ

| Published : Dec 15 2024, 02:03 AM IST

ಸಾರಾಂಶ

ಹೋರಾಟಗಾರ ಲಿಂಗೇಗೌಡರ ಜೀವನ ಪ್ರತಿ ಹೋರಾಟಗಾರರಿಗೂ ಆದರ್ಶ ಎಂದು ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಹೇಳಿದರು. ಕನಕಪುರದಲ್ಲಿ ಕೆಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಎಚ್.ಎಸ್.ಲಿಂಗೇಗೌಡರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಸಂತಾಪ । ಪ್ರಗತಿಪರ ಸಂಘಟನೆಗಳ ಒಕ್ಕೂಟ-ಕೆಆರ್‌ಎಸ್ ಪಕ್ಷದಿಂದ ಶ್ರದ್ಧಾಂಜಲಿ

ಕನಕಪುರ: ಹೋರಾಟಗಾರ ಲಿಂಗೇಗೌಡರ ಜೀವನ ಪ್ರತಿ ಹೋರಾಟಗಾರರಿಗೂ ಆದರ್ಶ ಎಂದು ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಹೇಳಿದರು.

ನಗರದ ಚನ್ನಬಸಪ್ಪ ಸರ್ಕಲ್ ಬಳಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಕೆಆರ್‌ಎಸ್ ಪಕ್ಷದ ಸಹಯೋಗದಲ್ಲಿ ಕೆಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಎಚ್.ಎಸ್.ಲಿಂಗೇಗೌಡರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಉನ್ನತ ಸರ್ಕಾರಿ ಹುದ್ದೆಯನ್ನೆ ತೊರೆದು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕಿಳಿದ ಲಿಂಗೇಗೌಡರಂತಹ ವ್ಯಕ್ತಿಗಳು ಅಪರೂಪ. ಭ್ರಷ್ಟಾಚಾರ ಮುಕ್ತ ಕರ್ನಾಟಕದ ಕನಸು ಕಟ್ಟಿ, ಅದಕ್ಕಾಗಿ ಮನಸು ಕೊಟ್ಟು ಹೋರಾಡಿದವರು. ಆದರೆ ಇತರರ ಒಳಿತಿಗಾಗಿ ಜೀವನವನ್ನೇ ಮುಡುಪಾಗಿಟ್ಟ ಲಿಂಗೇಗೌಡರ ದುರಂತ ಸಾವು ನೋವಿನ ಸಂಗತಿ ಎಂದರು.

ಜೀವನ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ಹೊಸದುರ್ಗ ಮಾತನಾಡಿ, ಲಿಂಗೇಗೌಡರು ಯುವಕರಿಗೆ ಪ್ರೇರಕ ಶಕ್ತಿಯಾಗಿದ್ದವರು. ಮಹಿಳೆಯರ ಮೇಲಿನ ಅತ್ಯಾಚಾರಗಳಿಗೆ ತ್ವರಿತ ನ್ಯಾಯ ಮತ್ತು ಗರಿಷ್ಠ ಮಟ್ಟದ ಶಿಕ್ಷೆಗಾಗಿ ಆಗ್ರಹಿಸಿ ಮಂಗಳೂರಿನಿಂದ ದೆಹಲಿಗೆ ಪಾದಯಾತ್ರೆ ಕೈಗೊಂಡಿದ್ದ ವೇಳೆ ಗುಜರಾತ್‌ನ ಬರುಚ್ ಎಂಬಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿರುವುದು ದುರಂತ. ಸರ್ಕಾರ ಮಹಿಳೆಯರ ಮೇಲಿನ ಶೋಷಣೆಗೆ ನ್ಯಾಯ ಒದಗಿಸಿದರೆ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದರು.

ಕಸಾಪ ಅಧ್ಯಕ್ಷ ಶಿವಲಿಂಗಯ್ಯ ಚೀಲೂರು ಮುನಿರಾಜು, ಕಬ್ಬಾಳೇಗೌಡ, PWD ಇಂಜಿನಿಯರ್ ಶಶಿಧರ್, ವೀರೇಶ್ ಕೂ.ಗಿ.ಗಿರಿಯಪ್ಪ, ನೀಲಿ ರಮೇಶ್, ಸ್ಟುಡಿಯೋ ಚಂದ್ರು, ಕನ್ನಡ ಭಾಸ್ಕರ್, ನಟರಾಜ್, ಜೀವನ್ ಕೆಆರ್‌ಎಸ್ ಪಕ್ಷದ ಶಿವಮ್ಮ. ತಾಮಸಂದ್ರ ಕಿರಣ್, ಶೋಭಾ, ಅಸ್ಗರ್ ಖಾನ್, ಚೀರಣಗುಪ್ಪೆ ರಾಜೇಶ್, ಮಿಲ್ಟ್ರಿ ರಾಮಣ್ಣ, ಮಿಲ್ಟ್ರಿ ದೇವರಾಜು, ಪುಟ್ಟಲಿಂಗಯ್ಯ, ಸಾಸಲಾಪುರ ಜಗದೀಶ್ ಇತರರಿದ್ದರು.