ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸರ್ಕಾರಿ ನೌಕರರು ಕಡ್ಡಾಯವಾಗಿ ಹೆಚ್‌ಆರ್‌ಎಂಎಸ್ ಪೋರ್ಟಲ್‌ನಲ್ಲಿ ತಮ್ಮ ಪರಿವಾರದ ಎಲ್ಲ ಸದಸ್ಯರ ಆಧಾರ್ ನಂಬರ್ ಲಿಂಕ್‌ಗೊಳಿಸಬೇಕು ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಬನ್ನಾಳೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಭಾಲ್ಕಿ

ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸರ್ಕಾರಿ ನೌಕರರು ಕಡ್ಡಾಯವಾಗಿ ಹೆಚ್‌ಆರ್‌ಎಂಎಸ್ ಪೋರ್ಟಲ್‌ನಲ್ಲಿ ತಮ್ಮ ಪರಿವಾರದ ಎಲ್ಲ ಸದಸ್ಯರ ಆಧಾರ್ ನಂಬರ್ ಲಿಂಕ್‌ಗೊಳಿಸಬೇಕು ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಬನ್ನಾಳೆ ತಿಳಿಸಿದ್ದಾರೆ.

ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ರಾಜ್ಯ ಸರ್ಕಾರ ಆರೋಗ್ಯ ಸಂಜೀವಿನಿ ಯೋಜನೆ (ಕಾಸ್) ಯೋಜನೆ ಜಾರಿಗೊಳಿಸಿದೆ. ಈ ಯೋಜನೆ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಲು ಸಹಕಾರಿ ಯಾಗಲಿದೆ. ಹೆಚ್.ಆರ್.ಎಂ.ಎಸ್‌ನಲ್ಲಿ ಆಧಾರ್ ಲಿಂಕ್‌ ಗೊಳಿಸಿದವರು ಮಾತ್ರ ಈ ಉಚಿತ ವೈದ್ಯಕೀಯ ಸೇವೆ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

ಈಗಾಗಲೇ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ಕೂಡ ಎಲ್ಲ ಸರ್ಕಾರಿ ನೌಕರರು ತಪ್ಪದೇ ತಮ್ಮ ಕುಟುಂಬದ ಸದಸ್ಯರ ವಿವರವನ್ನು ಹೆಚ್‌ಆರ್‌ಎಂಎಸ್ ಪೋರ್ಟಲ್‌ನಲ್ಲಿ ದಾಖಲಿಸುವಂತೆ ಮನವಿ ಮಾಡಿದ್ದಾರೆ. ಹಾಗಾಗಿ ತಾಲೂಕಿನಲ್ಲಿ ಒಟ್ಟು 1760 ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದುವರೆಗೂ ಸಾವಿರಕ್ಕೂ ಅಧಿಕ ಸರ್ಕಾರಿ ನೌಕರರು ಹೆಚ್‌ಆರ್‌ಎಂಎಸ್ ಪೋರ್ಟಲ್‌ನಲ್ಲಿ ಮಾಹಿತಿ ನೋಂದಾಯಿಸಿರುವುದಿಲ್ಲ. ಇದರಿಂದ ಆಧಾರ್ ಲಿಂಕ್ ಮಾಡದ ನೌಕರರು ಮತ್ತು ಅವರ ಕುಟುಂಬದವರಿಗೆ ಕ್ಯಾಶ್ ಲೇಸ್ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆಧಾರ್ ಲಿಂಕ್ ಮಾಡದ ನೌಕರರು ತಕ್ಷಣವೇ ಹೆಚ್ ಆರ್ ಎಂಎಸ್ ಪೋರ್ಟಲ್ ನಲ್ಲಿ ಅವರ ಕುಟುಂಬ ಸದಸ್ಯರ ಆಧಾರ್ ನಂಬರ್ ಲಿಂಕ್‌ಗೊಳಿಸಿ ಆರೋಗ್ಯ ಸಂಜೀವಿನಿ ಯೋಜನೆ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.